ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯು ಪಕ್ಷದ ಆಂತರಿಕ ಭಿನ್ನಮತ, ಒಗ್ಗಟ್ಟು ಮತ್ತು ನಾಯಕರ ನಡುವಿನ ಹೊಂದಾಣಿಕೆಯ ಕೊರತೆಯನ್ನು ಬಯಲಿಗೆಳೆದಿದೆ. ಈ ಹಿಂದೆ ಇದೇ ಹಗರಣಗಳ ಕುರಿತು ಬಹಿರಂಗವಾಗಿ ಗಂಭೀರ ಆರೋಪಗಳನ್ನು ಮಾಡಿ ಧ್ವನಿಯೆತ್ತಿದ್ದ ಹಲವು ಪ್ರಮುಖ ನಾಯಕರೇ ಈಗ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಬಾಕಿ ಇರುವ ಸಂದರ್ಭದಲ್ಲಿ, ಕೇಂದ್ರ ಸಚಿವರು, ಹಿರಿಯ ಶಾಸಕರು ಹಾಗೂ ಯುವ ನಾಯಕರು ಪಾದಯಾತ್ರೆಯಿಂದ ದೂರವುಳಿದಿರುವುದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಪಾದಯಾತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂಬ ಸುದ್ದಿಯಿದ್ದರೂ ಅವರು ಕಾರ್ಯಕ್ರಮದತ್ತ ಮುಖ ಮಾಡಲಿಲ್ಲ. ಹಿರಿಯ ಲಿಂಗಾಯತ ನಾಯಕ, ಕೇಂದ್ರ ಸಚಿವ ವಿ. ಸೋಮಣ್ಣ ಎರಡನೇ ದಿನದ ಪಾದಯಾತ್ರೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ. ಇತ್ತೀಚೆಗಷ್ಟೇ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮೊಣಕಾಲು ಶಸ್ತ್ರಚಿಕಿತ್ಸೆಯ ಕಾರಣ ನೀಡಿ ಎರಡನೇ ದಿನವೇ ಬೆಂಗಳೂರಿಗೆ ಹಿಂತಿರುಗಿದ್ದು, ಮಹತ್ವದ ಹಂತದಲ್ಲೇ ಪ್ರತಿಪಕ್ಷ ನಾಯಕನ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಸಂದರ್ಭದಲ್ಲಿ ಅಬ್ಬರಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕರ್ಕಳ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೂ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಜತೆಗೆ ಯುವ ನಾಯಕರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಗೈರಾಗಿದ್ದಾರೆ. ಪಾದಯಾತ್ರೆಯಲ್ಲಿ ಭೌತಿಕವಾಗಿ ಹಾಜರಾಗದಿರುವುದು ಮಾತ್ರವಲ್ಲದೆ, ಪಕ್ಷದ ಈ ಬೃಹತ್ ಹೋರಾಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಈ ನಾಯಕರು ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು ಬಣ ರಾಜಕೀಯ ಮತ್ತು ನಾಯಕತ್ವದ ನಡುವಿನ ಕಂದಕವನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ.
