Home ಬೆಂಗಳೂರು ಕೋಳಿ ತ್ಯಾಜ್ಯಕ್ಕೆ ಶುಲ್ಕ ವಿಧಿಸಿದ್ದನ್ನು ಖಂಡಿಸಿ ಸೆ. 3 ಮತ್ತು 4ರಂದು ಕೋಳಿ ಮಾಂಸದ ಅಂಗಡಿಗಳು...

ಕೋಳಿ ತ್ಯಾಜ್ಯಕ್ಕೆ ಶುಲ್ಕ ವಿಧಿಸಿದ್ದನ್ನು ಖಂಡಿಸಿ ಸೆ. 3 ಮತ್ತು 4ರಂದು ಕೋಳಿ ಮಾಂಸದ ಅಂಗಡಿಗಳು ಬಂದ್: ಫ್ರೀಡಂ ಪಾರ್ಕ್‌ ಬಳಿ ಬೃಹತ್ ಪ್ರತಿಭಟನೆ

0

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (KPTA) ವತಿಯಿಂದ ಸೆಪ್ಟೆಂಬರ್ 3 ಮತ್ತು 4 ರಂದು (ಗುರುವಾರ ಮತ್ತು ಶುಕ್ರವಾರ) ನಗರಾದ್ಯಂತ ಸಾಂಪ್ರದಾಯಿಕ ಕೋಳಿ ಮಾಂಸದ ಅಂಗಡಿಗಳನ್ನು ಬಂದ್ ಮಾಡಲು ಕರೆ ನೀಡಲಾಗಿದೆ.

ತ್ಯಾಜ್ಯದ ಮೇಲೆ ವಿಧಿಸಲಾಗಿರುವ ಅವೈಜ್ಞಾನಿಕ ಶುಲ್ಕವು ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ನೇರ ಆರ್ಥಿಕ ಹೊರೆ ಹೇರಲಿದೆ ಎಂದು ಆರೋಪಿಸಿರುವ ವ್ಯಾಪಾರಿಗಳು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ನೂತನ ನಿಯಮಾವಳಿಗಳ ಪ್ರಕಾರ ಕೋಳಿ ತ್ಯಾಜ್ಯದಲ್ಲಿನ ಕಚ್ಚಾ ಮಾಂಸದ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ ₹5 ಹಾಗೂ ಮೂಳೆಯ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ ₹3 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಮಾರುಕಟ್ಟೆಯಲ್ಲಿ ಚಿಕನ್ ದರ ಏರಿಕೆಗೆ ಕಾರಣವಾಗುವುದರ ಜತೆಗೆ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆ ತರಲಿದೆ ಎಂಬುದು ಸಂಘಟನೆಯ ಪ್ರತಿಪಾದನೆಯಾಗಿದೆ.

ಆದರೆ, ನಗರದ ಬಹುತೇಕ ಕೋಳಿ ಅಂಗಡಿಗಳ ಮಾಲೀಕರು ಇಷ್ಟು ದಿನಗಳಿಂದ ಇಂತಹ ಅಪಾಯಕಾರಿ ತ್ಯಾಜ್ಯವನ್ನು ಯಾವುದೇ ಶುಲ್ಕ ನೀಡದೆ ರಾಜಾರೋಷವಾಗಿ ಕೆರೆ-ಕುಂಟೆಗಳು, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ರಸ್ತೆಬದಿಯಲ್ಲೇ ಎಸೆಯುತ್ತಿದ್ದರು ಎಂಬ ಆರೋಪಗಳು ತೀವ್ರವಾಗಿವೆ. ಇದರಿಂದಾಗಿ ನಗರದಲ್ಲಿ ತೀವ್ರ ನೈರ್ಮಲ್ಯ ಕೊರತೆ, ದುರ್ನಾತ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದವು. ನಗರದ ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ನಾಗರಿಕರ ಆರೋಗ್ಯ ರಕ್ಷಣೆಯ ಜವಾಬ್ದಾರಿಗೆ ನಿರ್ದಿಷ್ಟ ವೆಚ್ಚ ತಗುಲುವುದರಿಂದ ಆ ಶುಲ್ಕವನ್ನು ಭರಿಸಲೇಬೇಕೆಂಬ ವಾದವೂ ಮುನ್ನೆಲೆಗೆ ಬಂದಿದೆ.

You cannot copy content of this page

Exit mobile version