Home ದೆಹಲಿ ಸಿಜೆಪಿ ಪ್ರತಿಭಟನೆಗೆ ಮಣಿದ ದೆಹಲಿ ಪೊಲೀಸ್: ಆರೋಪಿ ಸ್ವತಂತ್ರ ಭಾರದ್ವಾಜ್ ವಶಕ್ಕೆ

ಸಿಜೆಪಿ ಪ್ರತಿಭಟನೆಗೆ ಮಣಿದ ದೆಹಲಿ ಪೊಲೀಸ್: ಆರೋಪಿ ಸ್ವತಂತ್ರ ಭಾರದ್ವಾಜ್ ವಶಕ್ಕೆ

0

ದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ವೇಳೆ ಕಾರ್ಯಕರ್ತೆಯೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿದ್ದ ಆರೋಪಿ, ಸ್ವಯಂಘೋಷಿತ ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ನನ್ನು ದೆಹಲಿ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಭಾರದ್ವಾಜ್ ತನ್ನ ಮನೆಯಿಂದ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಂತರ್ ಮಂತರ್‌ನಲ್ಲಿ ನಡೆದ ಧರಣಿಯ ವೇಳೆ ಸಿಜೆಪಿ ಹೋರಾಟಗಾರ್ತಿ ನಿಶು ಆಜಾದ್ ಅವರ 38 ವರ್ಷದ ತಂದೆ ಸಂಜಯ್ ಕುಮಾರ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತೀವ್ರ ಬಲಪಂಥೀಯ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಸ್ವತಂತ್ರ ಭಾರದ್ವಾಜ್, ತಾನೇ ಸಂಜಯ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ತಲೆ ಒಡೆದಿದ್ದಾಗಿ ಹಾಗೂ ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ಜೈಲಿಗೆ ಹೋಗದೆ ಬಚಾವಾಗಿದ್ದಾಗಿ ಸಾಮಾಜಿಕ ಜಾಲತಾಣದ ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದ. ಹಲ್ಲೆಗೊಳಗಾದ ವ್ಯಕ್ತಿಗೆ 60 ಹೊಲಿಗೆಗಳು ಬಿದ್ದಿದ್ದು, ತನ್ನ ವಿರುದ್ಧ ಕೊಲೆ ಯತ್ನದ (ಐಪಿಸಿ 307) ಸೆಕ್ಷನ್ ದಾಖಲಾಗಬೇಕಿತ್ತು ಎಂದೂ ಆತ ಕೊಚ್ಚಿಕೊಂಡಿದ್ದ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಕ್ರೋಶಗೊಂಡ ಸಿಜೆಪಿ ವಕ್ತಾರ ಸೌರವ್ ದಾಸ್, ಸಹ-ಸಂಯೋಜಕ ಆಶುತೋಷ್ ರಾಂಕಾ ಹಾಗೂ ಇತರ ಮುಖಂಡರು ಪಟೇಲ್ ಚೌಕ್‌ನಿಂದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಕರಣದಲ್ಲಿ ಪೊಲೀಸರು ದುರ್ಬಲ ಸೆಕ್ಷನ್‌ಗಳನ್ನು ಹಾಕಿ ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಮುಖಂಡರು, ಸಂತ್ರಸ್ತರು ದಲಿತ ಕುಟುಂಬಕ್ಕೆ ಸೇರಿದವರಾದ್ದರಿಂದ ಎಫ್‌ಐಆರ್‌ನಲ್ಲಿ ಕೊಲೆ ಯತ್ನ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸೇರಿಸಬೇಕು ಮತ್ತು ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಪಟ್ಟುಹಿಡಿದರು. ಹಲವು ಗಂಟೆಗಳ ಮಾತುಕತೆಯ ನಂತರ ಎಫ್‌ಐಆರ್‌ನಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳನ್ನು ಸೇರಿಸಲು ಪೊಲೀಸರು ಸಮ್ಮತಿಸಿದ್ದು, ಇದೀಗ ಭಾರದ್ವಾಜ್‌ನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version