Home ದೆಹಲಿ ಜಂತರ್ ಮಂತರ್ ಹಲ್ಲೆ ಪ್ರಕರಣ | ಆರೋಪಿ ಸ್ವತಂತ್ರ ಭಾರದ್ವಾಜನನ್ನು 72 ಗಂಟೆಗಳ ಒಳಗೆ ಬಂಧಿಸುತ್ತೇವೆ:...

ಜಂತರ್ ಮಂತರ್ ಹಲ್ಲೆ ಪ್ರಕರಣ | ಆರೋಪಿ ಸ್ವತಂತ್ರ ಭಾರದ್ವಾಜನನ್ನು 72 ಗಂಟೆಗಳ ಒಳಗೆ ಬಂಧಿಸುತ್ತೇವೆ: ದೆಹಲಿ ಪೊಲೀಸರಿಂದ ಭರವಸೆ

0

ದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಮುಖ್ಯ ಆರೋಪಿ ಸ್ವತಂತ್ರ ಭಾರದ್ವಾಜ್‌ನನ್ನು 72 ಗಂಟೆಗಳ ಒಳಗೆ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತಿಳಿಸಿದೆ.

ಸಿಜೆಪಿ ನಾಯಕರು, ಸಂತ್ರಸ್ತೆ ನಿಶು ಆಜಾದ್, ಭೀಮ್ ಆರ್ಮಿ ಮುಖ್ಯಸ್ಥ ಹಾಗೂ ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಮತ್ತು ಪೂರ್ಣಿಯಾ ಸಂಸದ ಪಪ್ಪು ಯಾದವ್ ಅವರನ್ನೊಳಗೊಂಡ ನಿಯೋಗ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಪ್ರಕರಣದಲ್ಲಿ ಕೊಲೆ ಯತ್ನ, ಗಂಭೀರ ಹಲ್ಲೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯ ಕಠಿಣ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲು ಪೊಲೀಸರು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಿಯೋಗ ತಿಳಿಸಿದೆ.

ನೀಟ್ ವಿದ್ಯಾರ್ಥಿಗಳ ಪರವಾಗಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾಗ ಸಂಜಯ್ ಜಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗೂಂಡಾಗಳು ಬಹಿರಂಗವಾಗಿ ತಿರುಗಾಡುತ್ತಿದ್ದಾರೆ; ರಾಜಕೀಯ ನಾಯಕರ ನೆರವಿನಿಂದ ಬಚಾವಾಗಿರುವುದಾಗಿ ಆರೋಪಿ ಹೇಳಿಕೊಂಡಿರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಸಿಜೆಪಿ ಸಹ-ಸಂಯೋಜಕ ಸೌರವ್ ದಾಸ್ ಒತ್ತಾಯಿಸಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪಾಡ್‌ಕಾಸ್ಟ್‌ ವಿಡಿಯೋದಲ್ಲಿ, ಸಂಜಯ್ ಕುಮಾರ್ ಅವರ ತಲೆ ಒಡೆದರೂ ತಾನು ಜೈಲಿಗೆ ಹೋಗಿಲ್ಲ ಮತ್ತು ದೆಹಲಿ ಸಚಿವ ಕಪಿಲ್ ಮಿಶ್ರಾ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಂತಹ ರಾಜಕೀಯ ಮುಖಂಡರ ಸಂಪರ್ಕದಿಂದಾಗಿ ಪಾರಾಗಿರುವುದಾಗಿ ಆರೋಪಿ ಸ್ವತಂತ್ರ ಭಾರದ್ವಾಜ್ ಕೊಚ್ಚಿಕೊಂಡಿದ್ದ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ರಾಜಕೀಯ ಹಸ್ತಕ್ಷೇಪದ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಡಿಸಿಪಿ ಸಚಿನ್ ಶರ್ಮಾ, ಜುಲೈ 23ರಂದು ನಡೆದ ಗಲಾಟೆಯಲ್ಲಿ ಆರೋಪಿ ಧರಿಸಿದ್ದ ಲೋಹದ ಕಡಾ (ಕೈಬಳೆ) ತಗುಲಿ ಸಂಜಯ್ ಕುಮಾರ್ ಅವರ ತಲೆಗೆ ಗಾಯವಾಗಿತ್ತೇ ಹೊರತು ತಲೆಬುರುಡೆ ಮುರಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆಯ ನಂತರ ತನಗೆ ನಿರಂತರವಾಗಿ ಅತ್ಯಾಚಾರ ಬೆದರಿಕೆಗಳು ಹಾಗೂ ಅವಾಚ್ಯ ನಿಂದನೆಗಳು ಬರುತ್ತಿದ್ದು, ಭಯದಿಂದ ಶಾಲೆಗೂ ಹೋಗಲು ಸಾಧ್ಯವಾಗಿರಲಿಲ್ಲ ಎಂದು ಸಂತ್ರಸ್ತೆ ನಿಶು ಆಜಾದ್ ನೋವು ತೋಡಿಕೊಂಡಿದ್ದಾರೆ. ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಎಚ್ಚರಿಸಿದೆ.

You cannot copy content of this page

Exit mobile version