90 ವರ್ಷಗಳನ್ನು ಪೂರೈಸಿದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಗೆ ಸೇರಿದ ಎಲ್ಲಾ 14 ಸಮೂಹ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನೆನ್ನೆ ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿ ನಡೆಯಿತು.
4000 ಕ್ಕೂ ಹೆಚ್ಚು ಜನ ಆನ್ಲೈನ್ ನಲ್ಲಿ ನೋಂದಾಯಿಸಿದ್ದರು. ಹಳೆಯ ವಿದ್ಯಾರ್ಥಿ ನಟ ರಜನಿಕಾಂತ್ ಮಾತಾಡಿರುವ ವಿಡಿಯೋ ನೋಡಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿತೆಂದು ಹೇಳಲಾಗುತ್ತಿದೆ.
ಈ ಶಾಲೆಯ ವಿದ್ಯಾರ್ಥಿಗಳಲ್ಲಿ ಭಾರತ ರತ್ನ ವಿಜ್ಞಾನಿ ಸಿ ಎನ್ ಆರ್ ರಾವ್, ರೊದ್ದಮ್ ನರಸಿಂಹ, ನಟಿ ಪ್ರೇಮಾ, ನಟರಾದ ಕಲ್ಯಾಣ್ ಕುಮಾರ್, ಶ್ರೀನಾಥ್, ಉಪೇಂದ್ರ, ಸಂಗೀತಗಾರರಾದ ಸಿ ಅಶ್ವಥ್, ಪ್ರವೀಣ್ ಡಿ ರಾವ್, ಲಕಿ ಅಲಿ, ಸುಮಾ ಸುಧೀಂದ್ರ, ಹಾಸ್ಯಗಾರ ರಿಚರ್ಡ್ ಲೂಯಿಸ್, ಮೊದಲ ಮಹಿಳಾ ಸಂಪಾದಕಿ ಆರ್ ಪೂರ್ಣಿಮಾ, ಅಂತಾರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಜಾನಕಿಯವರಿದ್ದಾರೆ.
ಸಂಸ್ಥಾಪಕ ಪ್ರೊ. ಎನ್ ಅನಂತಾಚಾರರಿಂದ ಶುರುಮಾಡಲ್ಪಟ್ಟ ಮೂರು ವಿದ್ಯಾರ್ಥಿಗಳಿದ್ದ ಸಂಸ್ಥೆ ಈಗ ತನ್ನ ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮೂಲಕ ಕುಟುಂಬದಂಥ ಸಂಪರ್ಕಜಾಲ ನಿರ್ಮಿಸಲು ಯತ್ನಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸುತ್ತಿದೆ.
ತನ್ನ 90 ನೆಯ ವರ್ಷದ ಸಂಭ್ರಮಾಚರಣೆಯ ಗುರುತಿಗಾಗಿ ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಿರುವ ಸಂಸ್ಥೆಯು ನೋಂದಾಯಿತ ವಿದ್ಯಾರ್ಥಿಗಳನ್ನು ಸೇರಿಸಿ ಜೂನ್-ಜುಲೈನಲ್ಲಿ ಮತ್ತೊಂದು ಕಾರ್ಯಕ್ರಮಕ್ಕಾಗಿ ಯೋಜಿಸುತ್ತಿದೆ.
ಕಾರ್ಯಕ್ರಮಕ್ಕೆ ನೋಂದಾಯಿಸಿದವರಲ್ಲಿ ಹೆಚ್ಚಿನವರು 1965 ರಿಂದ 2010 ರ ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆಯ ಅತಿ ಹಿರಿಯ ವಿದ್ಯಾರ್ಥಿಯೊಬ್ಬರು 101 ವರ್ಷದವರಾಗಿದ್ದಾರೆ. ಎಪ್ಪತ್ತು ವರ್ಷಗಳಷ್ಟು ಹಳೆಯ ವಿದ್ಯಾರ್ಥಿಗಳು, ಕಲಾವಿದರಾಗಿ, ಯಶಸ್ವಿ ವ್ಯಕ್ತಿಗಳಾಗಿ ಗುರುತಿಸಿಕೊಂಡ ವಿದ್ಯಾರ್ಥಿಗಳು, ಗೆಳೆಯ ಗೆಳತಿಯರ ಮರುಭೇಟಿ, ಶಿಕ್ಷಕರೊಂದಿಗೆ ಫೋಟೋ, ಹೆಕ್ಕಿ ಹಂಚಿಕೊಂಡ ಎಷ್ಟೋ ನೆನಪುಗಳಿಗೆ ಎಪಿಎಸ್ ಮೈದಾನ ಸಾಕ್ಷಿಯಾಯಿತು.
ನನ್ನ ಶಿಕ್ಷಣದ ಮುಕ್ಕಾಲು ಪಾಲು ಎಪಿಎಸ್ ನಲ್ಲಾಗಿದ್ದು 4 ನೇ ತರಗತಿಯಲ್ಲಿದ್ದಾಗ 100 ರೂ. ಶುಲ್ಕ ಕಟ್ಟುತ್ತಿದ್ದ ನೆನಪು. ಶಿಕ್ಷಣ ಸೇವೆಯಾಗಬೇಕೇ ಹೊರತು ವ್ಯವಹಾರವಲ್ಲ ಎಂಬ ಆದರ್ಶಕ್ಕೆ ಸಾಕ್ಷಿಯಾಗಿರುವ ಇಂತಹ ಸಂಸ್ಥೆಗಳಿಗೆ ದಾನ, ಸಹಕಾರ, ಸಹಾಯ ಒದಗಿಸುವುದು, ಕೈ ಜೋಡಿಸುವುದು ಫಲಾನುಭವಿಗಳಾದ ನಮ್ಮೆಲ್ಲರ ಜವಾಬ್ದಾರಿಯೂ ಹೌದು.
ಅಂಧರು, ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಶಿಕ್ಷಣ ಒದಗಿಸಿರುವ ಎಪಿಎಸ್ ಸಂಸ್ಥೆ ಕೆಲಸಕ್ಕೆ ಹೋಗುವವರಿಗಾಗಿ ಅನುಕೂಲವಾಗಲು ಸಂಜೆ ಕಾಲೇಜು ಸ್ಥಾಪಿಸಿದ ಆದ್ಯ ಪ್ರವರ್ತಕರೂ ಆಗಿದ್ದಾರೆ.
ಈಗ ನಡೆದ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮ ಸಂಸ್ಥೆಯ 2035ರ ಶತಕ ಸಮಾರಂಭಕ್ಕೆ ಮುನ್ನುಡಿಯಷ್ಟೇ. ಆಚಾರ್ಯ ಪಾಠಶಾಲಾ ಸಂಸ್ಥೆಯ ಸೇವಾ ಮನೋಭಾವ, ದೂರದೃಷ್ಟಿ, ಕ್ರಿಯಾಯೋಜನೆಯ ಕ್ರಾಂತಿಕಹಳೆಯು ಶಿಕ್ಷಣವನ್ನು ವ್ಯವಹಾರದಿಂದ ಸೇವೆಯ ಹಾದಿಗೆ ಹೊರಳಿಸುವಷ್ಟು ಜೋರಾಗಿ ಮೊಳಗಲಿ.
~ ರೇಖಾ ಎಚ್ ಎಸ್