ಹಾಸನ : ಸಕಲೇಶಪುರದ ಅಚೀವರ್ಸ್ ಪ್ರಜ್ಞಾ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23 ಹಾಗೂ 24 ಜನವರಿಯಂದು ಪಟ್ಟಣದ ಗುರುವೇಗೌಡ ಸಭಾ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಸಮಾರಂಭವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿದ್ದು, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಶಿಸ್ತಿನ ಪ್ರದರ್ಶನದಿಂದ ನೆರೆದಿದ್ದ ಪೋಷಕರು ಹಾಗೂ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಅರೆಹಳ್ಳಿ ರೋಟರಿ ಶಾಲೆಯ ಸಂಯೋಜಕಿ ಶ್ರೀಮತಿ ಭವಾನಿ ಅವರು, ಹೆತ್ತೂರು ಕೆ.ಪಿ.ಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ಭಾಸ್ಕರ್ ಬಿ. ಅವರು ಹಾಗೂ ನಿವೃತ್ತ ಯೋಧರಾದ ಗಾಡೇನಹಳ್ಳಿಯ ಶ್ರೀ ಯೋಗೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭಕ್ಕೆ ಗೌರವ ಹೆಚ್ಚಿಸಿದರು.
ಅತಿಥಿಗಳು ತಮ್ಮ ಭಾಷಣದಲ್ಲಿ, ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಶಕ್ತಿ ಎಂದು ತಿಳಿಸಿದರು.ಮುಖ್ಯ ಅತಿಥಿ ಭವಾನಿಯವರು ಮಾತನಾಡುತ್ತಾವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದು ಕರೆ ನೀಡಿದರು.ಮತ್ತೊಬ್ಬ ಅತಿಥಿ ಭಾಸ್ಕರ್ ರವರು ಶಾಲಾ ಹಂತದಲ್ಲೇ ಮೌಲ್ಯಾಧಾರಿತ ಶಿಕ್ಷಣ, ಉತ್ತಮ ನಡವಳಿಕೆ, ಶುದ್ಧ ಸಂಸ್ಕೃತಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನ ಸಾಧ್ಯವೆಂದು ತಿಳಿಸಿದರು.ನಿವೃತ್ತ ಯೋಧರಾದ ಶ್ರೀ ಯೋಗೇಶ್ ಅವರು ತಮ್ಮ ಮಾತಿನಲ್ಲಿ ದೇಶಪ್ರೇಮ, ಶ್ರಮ, ಆತ್ಮಸ್ಥೈರ್ಯ ಹಾಗೂ ಕರ್ತವ್ಯನಿಷ್ಠೆ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಇ.ಹೆಚ್ ಅವರು ಹಾಗೂ ಅಚೀವರ್ಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಬಿ.ಎನ್ ಸಂತೋಷ್ ಕೋಗರವಳ್ಳಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಶುಭ ಹಾರೈಸಿದರು. ಸಂಸ್ಥೆಯ ಬೆಳವಣಿಗೆಗೆ ಸಹಕರಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ಶ್ರಮವನ್ನು ಪ್ರಶಂಸಿಸಿದರು.ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.ವಿಶೇಷವೆಂದರೆ, ಇಡೀ ಎರಡು ದಿನಗಳ ಕಾರ್ಯಕ್ರಮವನ್ನು ಎಲ್.ಕೆ.ಜಿ ಯಿಂದ 8ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳೇ ಅತ್ಯಂತ ಶಿಸ್ತಿನಿಂದ, ಆತ್ಮವಿಶ್ವಾಸದಿಂದ ಹಾಗೂ ಉತ್ಸಾಹದಿಂದ ನಡೆಸಿಕೊಟ್ಟಿದ್ದು, ವೇದಿಕೆ ನಿರ್ವಹಣೆ, ಪ್ರದರ್ಶನಗಳು ಹಾಗೂ ಸಂಭ್ರಮದ ವಾತಾವರಣವು ನೆರೆದಿದ್ದ ಪೋಷಕರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕರು ಪದ್ಮನಾಭ್ ಹೆಚ್ ಕೆ,ಆಡಳಿತಾಧಿಕಾರಿ ಸಂದೇಶ್ ಜಿ ಜೆ ಹಾಜರಿದ್ದರುಒಟ್ಟಾರೆ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಶೈಕ್ಷಣಿಕ ಉದ್ದೇಶ, ಸಾಂಸ್ಕೃತಿಕ ವೈಭವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
