Home ಅಂಕಣ ಪದ್ಮವಿಭೂಷಣ ವಿ.ಎಸ್. ಅಚ್ಯುತಾನಂದನ್ ಮತ್ತು ಇತಿಹಾಸದ ಅಪ್ರಾಮಾಣಿಕ ಓದು

ಪದ್ಮವಿಭೂಷಣ ವಿ.ಎಸ್. ಅಚ್ಯುತಾನಂದನ್ ಮತ್ತು ಇತಿಹಾಸದ ಅಪ್ರಾಮಾಣಿಕ ಓದು

0

“ದಿನೇಶ್ ಅಮೀನ್ ಮಟ್ಟು ಅವರ ಬರಹವು ಇತಿಹಾಸವನ್ನು ಆಯ್ಕೆಮಾಡಿ ಓದುವ, ಸರಳೀಕರಿಸುವ ಮತ್ತು ರಾಜಕೀಯವಾಗಿ ವಕ್ರಗೊಳಿಸುವ ಪ್ರಯತ್ನವಾಗಿದೆ. ಇದು ನೆಲದ ರಾಜಕೀಯವನ್ನೂ ‘ಅನುಭವಿಸದೇ’, ಓದಿನಲ್ಲೂ ಪ್ರಾಮಾಣಿಕತೆ ಇರದ, ಅಪ್ರಾಮಾಣಿಕ ರಾಜಕೀಯ ವಿಶ್ಲೇಷಣೆಯಾಗಿದೆ…” ಮುನೀರ್ ಕಾಟಿಪಳ್ಳ ಅವರ ಬರಹದಲ್ಲಿ

ಕಾಂ ವಿ.ಎಸ್. ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಿರುವುದನ್ನು ಕೇಂದ್ರವಾಗಿಸಿಕೊಂಡು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಬರೆದಿರುವ ಲೇಖನವು ಮೇಲ್ನೋಟಕ್ಕೆ ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವಂತೆ ಕಾಣಿಸಿದರೂ, ಒಳನೋಟದಲ್ಲಿ ಅದು ಕೇರಳದ ಕಮ್ಯುನಿಸ್ಟ್ ಚಳುವಳಿಯ ಇತಿಹಾಸವನ್ನು ಆಯ್ಕೆಮಾಡಿ ಓದುವ, ಸರಳೀಕರಿಸುವ ಮತ್ತು ರಾಜಕೀಯವಾಗಿ ವಕ್ರಗೊಳಿಸುವ ಪ್ರಯತ್ನವಾಗಿದೆ. ಇದು ನೆಲದ ರಾಜಕೀಯವನ್ನೂ ‘ಅನುಭವಿಸದೇ’, ಓದಿನಲ್ಲೂ ಪ್ರಾಮಾಣಿಕತೆ ಇರದ, ಅಪ್ರಾಮಾಣಿಕ ರಾಜಕೀಯ ವಿಶ್ಲೇಷಣೆಯಾಗಿದೆ. 

ಮೊದಲು ಪದ್ಮವಿಭೂಷಣದ ಪ್ರಶ್ನೆ. ಕಾಮ್ರೇಡ್ ವಿ.ಎಸ್. ಅಚ್ಯುತಾನಂದನ್ ಬದುಕಿದ್ದರೆ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದರು ಎಂಬುದಕ್ಕೆ ಯಾವ ದಾಖಲೆಗಳೂ ಬೇಕಾಗಿಲ್ಲ.‌ ಇ.ಎಂ.ಎಸ್. ನಂಬೂದಿರಿಪಾಡ್ ಅಥವಾ ಬುದ್ದದೇವ ಭಟ್ಟಾಚಾರ್ಯ ಅವರು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದ ಉದಾಹರಣೆಗಳನ್ನು ಉಲ್ಲೇಖಿಸುವ ಅಗತ್ಯವೂ ಇಲ್ಲ. ಬಿಜೆಪಿ ಸರ್ಕಾರದಿಂದ ಒರ್ವ ‘ನೈಜ ಮಾರ್ಕ್ಸ್ ವಾದಿ’ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಅಚ್ಯುತಾನಂದನ್ ರಿಂದ ಹಿಡಿದು ತಳಮಟ್ಟದ ಮುನೀರ್ ಕಾಟಿಪಳ್ಳವರೆಗೆ ಎಲ್ಲರಿಗೂ ಸಿದ್ದಾಂತ ಈ ಅರಿವು ನೀಡುತ್ತದೆ. ಯಾರಿಂದ ಪ್ರಶಸ್ತಿ ಸ್ವೀಕರಿಸಬೇಕು, ಯಾರ ಜೊತೆ ಗುರುತಿಸಿಕೊಳ್ಳಬೇಕು, ಯಾರಿಂದ ಸನ್ಮಾನಿತರಾಗಬೇಕು ಎಂಬ ಕನಿಷ್ಠ ಅರಿವು ಇಲ್ಲದೇ ಇದ್ದರೆ ಆತ ಕಮ್ಯೂನಿಷ್ಟನಾಗಲು ಸಾಧ್ಯವಿಲ್ಲ.

ಮಾಧ್ಯಮ ವರದಿಗಳ ಪ್ರಕಾರ ಅಚ್ಯುತಾನಂದನ್ ಕುಟುಂಬ ಪ್ರಶಸ್ತಿಯನ್ನು ಸ್ವಾಗತಿಸಿದೆ ಎಂದಾದರೆ, ಅದನ್ನು ಪ್ರಶ್ನಿಸುವ ಹಕ್ಕು ಸಿಪಿಎಂಗೆ ಇಲ್ಲ ಎನ್ನುವ ವಾದವೂ ಅಷ್ಟೇ ಅಪಾಯಕಾರಿ. ಒಂದು ಪಕ್ಷವು ತನ್ನ ಇತಿಹಾಸದ ನಾಯಕನ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದೇ ನೈತಿಕತೆಯ ಕೊರತೆ ಎನ್ನುವುದಾದರೆ, ರಾಜಕೀಯ ಚರ್ಚೆಯ ಅರ್ಥವೇನು? ಸಿಪಿಎಂ ಅಚ್ಯುತಾನಂದನ್ ಅವರಿಗೆ ರಾಜಕೀಯ ಅನ್ಯಾಯ ಮಾಡಿದೆ ಎಂಬುದು ಒಂದು ಏಕಪಕ್ಷೀಯ ಸುಳ್ಳಿನ ತೀರ್ಪು.  83ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದ ಅಚ್ಯುತಾನಂದನ್, ಸಿದ್ದರಾಮಯ್ಯರಂತೆಯೋ, ಕುಮಾರಸ್ವಾಮಿಯಂತೆಯೋ ಮುಖ್ಯಮಂತ್ರಿಯಾಗಲೆಂದೇ ರಾಜಕಾರಣ ಮಾಡಿದವರಲ್ಲ. ಸಿಪಿಐಎಂ ಅಂತಹ ರಾಜಕಾರಣ ಮಾಡುತ್ತಿದ್ದರೆ ಈ ದೇಶದ ಪ್ರಧಾನಿ ಹುದ್ದೆಯೂ ಅನಾಯಾಸವಾಗಿ ಸಿಗುತ್ತಿತ್ತು. ಅಚ್ಯುತಾನಂದನ್ ಸೈದ್ದಾಂತಿಕ ರಾಜಕಾರಣವನ್ನು ಆಯ್ಕೆ ಮಾಡಿಕೊಂಡರು. ಸೈದ್ದಾಂತಿಕ ರಾಜಕಾರಣದಲ್ಲಿ ಯಾರೂ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇರುವುದಿಲ್ಲ. ಸಿದ್ದಾಂತ ಅಂತಹ ರಾಜಕಾರಣವನ್ನು ಮುನ್ನಡೆಸುತ್ತದೆಯೇ ಹೊರತು ಅವಕಾಶಗಳಲ್ಲ !

ದಿನೇಶ್ ಅಮೀನ್ ಮಟ್ಟು ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರಜಾವಾಣಿ ಪತ್ರಕರ್ತರಾಗಿದ್ದ ದಿನೇಶ್ ಅಮೀನ್ ಮಟ್ಟುರವರು ಎಡಪಂಥೀಯ ಸಿದ್ದಾಂತವನ್ನು ಆಯ್ಕೆ ಮಾಡಿಕೊಂಡರು. ಪ್ರಜಾವಾಣಿ ಮುಂದೆ ಬಲಪಂಥೀಯರು ಅವರ ವಿರುದ್ದ ಪ್ರತಿಭಟನೆ ನಡೆಸಿದಾಗ ಇಡೀ ರಾಜ್ಯದ ಎಡಪಂಥೀಯರು ಅವರ ಬೆನ್ನಿಗೆ ನಿಂತರು. “ಪ್ರಜಾವಾಣಿಯಿಂದ ಕೆಲಸ ಹೋದರೆ ದಿನೇಶ್ ಅಮೀನ್ ಮಟ್ಟು ಬದುಕು ಮುಂದೇನು ?” ಎಂಬ ಪ್ರಶ್ನೆ ಅವರ ಆಪ್ತರನ್ನು ಕಾಡಿದಾಗಲೂ ದಿನೇಶ್ ಅಮೀನ್ ಮಟ್ಟು ದೃತಿಗೆಡಲಿಲ್ಲ. ಇಡೀ ಊರೂರು ಸುತ್ತಿ ಬಲಪಂಥೀಯರ ಹುನ್ನಾರಗಳನ್ನು ಬಯಲುಗೊಳಿಸಿದರು. ಇದರಿಂದ ಏನಾದರೂ ಲಾಭವಾಗಬಹುದು ಎಂಬ ಊಹೆಯಾದರೂ ದಿನೇಶ್ ಅಮೀನ್ ಮಟ್ಟುರವರಿಗೆ ಇತ್ತೆ ? ಖಂಡಿತ ಇಲ್ಲ. ಅದನ್ನೇ ಎಡಪಂಥೀಯ ಸಿದ್ದಾಂತ ಎನ್ನುತ್ತಾರೆ. ತನ್ನ ಸ್ವಂತ ಲಾಭಕ್ಕಾಗಿನ ರಾಜಕಾರಣವಲ್ಲವದು. ದಿನೇಶ್ ಅಮೀನ್ ಮಟ್ಟುರವರು ವಿಧಾನಪರಿಷತ್ ಸದಸ್ಯರಾಗಬೇಕು ಎಂದು ಎಲ್ಲರೂ ಬಯಸಿದೆವು. ಅವರು ಅಧಿಕಾರಕ್ಕಾಗಿ ಸಿದ್ದರಾಮಯ್ಯರ ಜೊತೆ ಸೇರಿದವರಲ್ಲ ಎಂಬುದು ನಮ್ಮೆಲ್ಲರ ಅಭಿಪ್ರಾಯ ಆಗಿತ್ತು. ಮಟ್ಟುರವರನ್ನು ಸಿದ್ದರಾಮಯ್ಯರ ಬಳಿ ಸೇರಿಸಿದ ಯು ಆರ್ ಅನಂತಮೂರ್ತಿಯವರ ಆಶಯವೂ ‘ಒರ್ವ ಎಡಚಿಂತನೆ ವ್ಯಕ್ತಿಯ ಸಲಹೆ ಮುಖ್ಯಮಂತ್ರಿಗಿರಲಿ’ ಎಂಬುದಾಗಿತ್ತೇ ಹೊರತು ಮಟ್ಟುಗೆ ಕೆಲಸದ ಅಗತ್ಯವಿತ್ತು ಎಂದಲ್ಲ. ಅವರು ಎಂಎಲ್ಸಿ ಆಗಬೇಕು ಎಂದು ಯಾಕೆ ಬಯಸಿದ್ದೆವು ಎಂದರೆ, ಅವರ ಸಿದ್ದಾಂತದ ಪ್ರಸರಣಕ್ಕಾಗಿಯೇ ವಿನಹ ಅವರು ಆಸ್ತಿ ಮಾಡಿ ಹಣವಂತರಾಗಿ, ನಮಗೂ ಹಣ ಮಾಡುವ ಅವಕಾಶ ಕೊಡಲಿ ಎಂದಲ್ಲ. ಅವರ ಸೈದ್ದಾಂತಿಕ ಕೆಲಸಕ್ಕೆ ಅಧಿಕಾರದ ಅಲಭ್ಯತೆ ಅಡ್ಡಿಯಾಗುವುದಿಲ್ಲ.‌ ಹಾಗಾಗಿ ದಿನೇಶ್ ಅಮಿನ್ ಮಟ್ಟುರವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತು ಎಂದು ನಾನಂತೂ ಒಪ್ಪುವುದಿಲ್ಲ.

ನೂರು ವರ್ಷದ ಬಳಿಕ ದಿನೇಶ್ ಅಮೀನ್ ಮಟ್ಟುರವರಿಗೆ ಮರಣೋತ್ತರ (ನನ್ನ ಆಯುಷ್ಯವೂ ಅವರಿಗೇ ಇರಲಿ. ಅವರು ಇನ್ನೂ ನೂರು ವರ್ಷ ನಮ್ಮೊಂದಿಗಿರಬೇಕು) ಪದ್ಮಭೂಷಣವನ್ನೋ, ಪದ್ಮವಿಭೂಷಣವನ್ನೋ ಆರ್ ಎಸ್ ಎಸ್ ಸರ್ಕಾರ ನೀಡಿದರೆ, ಅದನ್ನು ಅವರ ಕುಟುಂಬ ತಿರಸ್ಕರಿಸಬೇಕು ಎಂದು ನಾವು ಬಯಸುತ್ತೇವೆ. ಯಾಕೆಂದರೆ ದಿನೇಶ್ ಅಮೀನ್ ಮಟ್ಟು ಪ್ರತಿಪಾದಿಸಿದ ಮೌಲ್ಯಗಳನ್ನು ಅಪಮೌಲ್ಯಗೊಳಿಸಲು ಯಾರಿಗೂ ಹಕ್ಕಿಲ್ಲ. ಅವರ ಕುಟುಂಬದ ಸದಸ್ಯರಿಗೂ..!

ಈಳವ ಸಮುದಾಯದ ಪ್ರಶ್ನೆಯನ್ನು ದಿನೇಶ್ ಅಮೀನ್ ಮಟ್ಟುವರು ಕೇವಲ ರಾಜಕೀಯ ಅಸ್ತ್ರವನ್ನಾಗಿ ಬಳಸಿದ್ದಾರೆ.  ಮುಖ್ಯಮಂತ್ರಿ ಸ್ಥಾನವನ್ನು ಮಾತ್ರ ಸಾಮಾಜಿಕ ನ್ಯಾಯದ ಮಾನದಂಡವನ್ನಾಗಿ ಮಾಡಿ, ಕೇರಳದ ಕಮ್ಯುನಿಸ್ಟ್ ಚಳುವಳಿಯನ್ನು “ಮೇಲ್ಜಾತಿ ಆಳ್ವಿಕೆ” ಎಂದು ಚಿತ್ರಿಸುವುದು ಇತಿಹಾಸದ ಅಪೂರ್ಣ ಅಥವಾ ಅಪ್ರಾಮಾಣಿಕ ಓದು. ಭೂಸುಧಾರಣೆ, ಶಿಕ್ಷಣ ಕ್ರಾಂತಿ, ಸಾರ್ವಜನಿಕ ಆರೋಗ್ಯ, ಕಾರ್ಮಿಕ ಹಕ್ಕುಗಳು — ಇವೆಲ್ಲವೂ ಯಾವ ಸಮುದಾಯಗಳಿಗೆ ನಿಜವಾದ ಶಕ್ತಿ ನೀಡಿದವು ಎಂಬ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ದಿನೇಶ್ ಅಮೀನ್ ಮಟ್ಟುರವರು ಉತ್ತರಿಸುವುದಿಲ್ಲ. ಉತ್ತರಿಸಿದರೆ, ಅದನ್ನು ಕಾಂಗ್ರೆಸ್ಸಿನ ಕೆಲವರು ಮಲಯಾಳಂಗೆ ಭಾಷಾಂತರಿಸಿ ಕೆ ಸಿ ವೇಣುಗೋಪಾಲ್ ಗೆ ಕಳುಹಿಸಿ ದಿನೇಶ್ ಅಮೀನ್ ಮಟ್ಟುಗೆ ಸಿಎಂ ಮನೆಯ ಬಾಗಿಲು ಬಂದ್ ಮಾಡಿಸುತ್ತಾರೆ.

ದಿನೇಶ್ ಅವರು ಉಲ್ಲೇಖಿಸಿದ ಕೆ.ಆರ್. ಗೌರಿಯಮ್ಮನಿಗೆ ನಡೆದ ಅನ್ಯಾಯ(?)ದ ಬಗ್ಗೆ ಪಕ್ಷದೊಳಗೆ ಈಗಲೂ ಚರ್ಚೆ ನಡೆಯುತ್ತಿದೆ. ಆದರೆ ಆ ಒಂದು ಘಟನೆಯನ್ನೇ ಹಿಡಿದುಕೊಂಡು, ಸಂಪೂರ್ಣ ಸಿಪಿಎಂನ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತಿರಸ್ಕರಿಸುವುದು ಬೌದ್ಧಿಕ ಅಪ್ರಾಮಾಣಿಕತೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಂದ ಸಿಪಿಎಂ ಮುಖ್ಯಮಂತ್ರಿ ಆಗಿಲ್ಲ ಎಂಬ ವಾದವೂ ಸಂಖ್ಯಾತ್ಮಕ ಸತ್ಯವಾಗಬಹುದು; ಆದರೆ ಅದರಿಂದಲೇ ಆ ಸಮುದಾಯಗಳು ರಾಜಕೀಯವಾಗಿ ನಿರ್ಲಕ್ಷಿತವಾಗಿವೆ ಎಂದು ತೀರ್ಮಾನಿಸುವುದು ತರ್ಕಬದ್ಧವಲ್ಲ. ಸಚಿವ ಸಂಪುಟ, ಪಕ್ಷದ ನಾಯಕತ್ವ, ಸಂಘಟನೆ, ಸ್ಥಳೀಯ ಆಡಳಿತ—ಇವೆಲ್ಲವೂ ಸಾಮಾಜಿಕ ನ್ಯಾಯದ ಭಾಗವೇ ಹೊರತು ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ. ಕ್ರಿಶ್ಚಿಯನ್ ಹಿನ್ನಲೆಯ ಎಂ ಬೇಬಿ ಈಗ ಪಕ್ಷದ ಸರ್ವೋಚ್ಚ ನಾಯಕ ಆಗಿದ್ದಾರೆ ಎಂಬುದು ಮಟ್ಟು ಅವರ ಅರಿವಿಗೆ ನಿಲುಕಿಲ್ಲ ಎಂದರೆ ಯಾರಾದರು ನಂಬಬಹುದೆ ? ಮುಸ್ಲಿಂ ಹಿನ್ನಲೆಯ ಎಲಮಳ‌ ಕರೀಂ ಪಕ್ಷದ ಬಲಿಷ್ಟ ವರ್ಗ ಸಂಘಟನೆಯಾದ ಟ್ರೇಡ್ ಯೂನಿಯನ್ ನ ಪ್ರಧಾನ‌ ಕಾರ್ಯದರ್ಶಿ. ಇದೆಲ್ಲವೂ ಮಹತ್ವದ ಅವಕಾಶ ಅಲ್ಲವೆ ? ಮುಖ್ಯಮಂತ್ರಿ ಸ್ಥಾನ ಮಾತ್ರ ಅವಕಾಶ ಎಂದು ರಾಜಕೀಯದ ಎಬಿಸಿಡಿ ತಿಳಿಯದವರು ಮಾತ್ರ ಭಾವಿಸಬಹುದು.

ನಾರಾಯಣ ಗುರುಗಳು ಇತ್ತಿಚಿನ ಕೆಲ ವರ್ಷಗಳಿಂದ ಬಿಜೆಪಿ-ಕಾಂಗ್ರೆಸ್ ಗೆ ಚುನಾವಣಾ ಪೋಸ್ಟರ್ ಆಗಿದೆ. ಚುನಾವಣೆಗಾಗಿಯೇ ಈ ಎರಡು ಪಕ್ಷಗಳು ಗುರುಗಳನ್ನು ಬಳಸಿಕೊಳ್ಳುತ್ತಿದೆ. ನಾರಾಯಣ ಗುರುಗಳ ಆದರ್ಶಗಳನ್ನು, ಸಂದೇಶಗಳನ್ನು ಜಾರಿ ಮಾಡುತ್ತಿರುವುದು ಸಿಪಿಐಎಂ ಪಕ್ಷ ಮಾತ್ರ.

ವಿ.ಎಸ್. ಅಚ್ಯುತಾನಂದನ್ ಅವರಿಗೆ ಪದ್ಮವಿಭೂಷಣ ನೀಡಿರುವುದು ಒಂದು ವ್ಯಕ್ತಿಗೆ, ಒಂದು ದೀರ್ಘ ಹೋರಾಟಕ್ಕೆ, ಒಂದು ಜನಪರ ರಾಜಕೀಯ ಜೀವನಕ್ಕೆ ನೀಡಿದ ಗೌರವ. ಹಾಗಾಗಿ ಅ ಪ್ರಶಸ್ತಿಯನ್ನು ಯಾವ ಕೈಗಳು ಕೊಡುತ್ತಿವೆ ಎಂಬುದೂ ಮುಖ್ಯವಾಗುತ್ತದೆ. ಆ ಕೈಗಳಿಂದ ಪ್ರಶಸ್ತಿ ಪಡೆಯುವುದನ್ನು ತಿರಸ್ಕರಿಸಬೇಕು ಎಂದು ವಿ ಎಸ್ ಅಚ್ಯುತಾನಂದನ್ ಅವರ ಸೈದ್ದಾಂತಿಕ ಸಂಗಾತಿಗಳು ಬಯಸುವುದು ಅವರ ಹಕ್ಕು. ಸಿದ್ದಾಂತದ ಕಾರಣಕ್ಕಾಗಿ ಅವರನ್ನು ಅವರು ವಿರೋಧಿಸುವ ರಾಜಕೀಯ ಪಕ್ಷ ಆಯ್ಕೆ ಮಾಡಿದಾಗ ಅದನ್ನು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಹಕ್ಕು ಕುಟುಂಬದವರಿಗಿಂತ ಸೈದ್ದಾಂತಿಕ ಸಂಗಾತಿಗಳಿಗೆ ಹೆಚ್ಚು ಇರುತ್ತದೆ.

ಪ್ರಶಸ್ತಿಗಳಿಗೆ ಅಂತಹ ದೊಡ್ಡ ಮಹತ್ವವೇನೂ ಇಲ್ಲ. ರಾಜಕಾರಣಿಗಳಿಗೆ ಫೇಸ್ ಬುಕ್ ಪೋಸ್ಟ್, ಪೋಸ್ಟರ್ ಕ್ರಿಯೇಟ್ ಮಾಡುವವರಿಗೂ ಪ್ರಶಸ್ತಿಗಳು ಬರುತ್ತವೆ. ವಿರೇಂದ್ರ ಹೆಗ್ಗಡೆಗೂ ಪದ್ಮವಿಭೂಷಣ ಪ್ರಶಸ್ತಿ ಬಂತು. ಮುಂದೊಂದು ದಿನ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರವೂ ಸಿಗಬಹುದು. ಪ್ರಶಸ್ತಿಗಳಿಗೆ ಕಮ್ಯೂನಿಷ್ಟರು ಅಂತಹ ಮಹತ್ವವೇನೂ ಕೊಡುವುದಿಲ್ಲ. ಅದು ಸಾಮಾಜಿಕ ಕ್ರಾಂತಿಯ ಭಾಗವಾಗದ ಹೊರತು ! ಕಾಮ್ರೇಡ್ ಅಚ್ಯುತಾನಂದನ್ ಈ ಯಕಶ್ಚಿತ್ ಪ್ರಶಸ್ತಿಗಳನ್ನು ಮೀರಿ ಬದುಕಿದವರು, ಬೆಳೆದವರು. ಹಾಗಿರುವಾಗ ಸರ್ವಾಧಿಕಾರಿ ಫ್ಯಾಶಿಸ್ಟ್ ಹಾದಿಯಲ್ಲಿರುವ ಸರ್ಕಾರವೊಂದು ನೀಡುವ ಯಕಶ್ಚಿತ್ ಪ್ರಶಸ್ತಿಯನ್ನು ಹಿಡಿದುಕೊಂಡು ಕೇರಳದ ಕಮ್ಯುನಿಸ್ಟ್ ಚಳುವಳಿಯ ಇತಿಹಾಸವನ್ನೇ ಕಪ್ಪು–ಬಿಳುಪಿನ ಸರಳ ಕಥೆಯನ್ನಾಗಿ ಮಾಡುವುದು ಸತ್ಯಕ್ಕೆ ಬಗೆಯುವ ದ್ರೋಹವಾಗಿದೆ.

ಸಾಮಾಜಿಕ ನ್ಯಾಯವು ಘೋಷಣೆಯಲ್ಲ; ಅದು ಸಂಕೀರ್ಣ ಹೋರಾಟ. ಆ ಹೋರಾಟವನ್ನು ಅರ್ಥಮಾಡಿಕೊಳ್ಳಲು ಯಾವುದೋ ರಾಜಕೀಯ ಪ್ರೀತಿಯೋ, ದ್ವೇಷವೂ ಅಲ್ಲ—ಪ್ರಾಮಾಣಿಕ ಇತಿಹಾಸದ ಓದು ಅಗತ್ಯ.

You cannot copy content of this page

Exit mobile version