ಹಾಸನ : ಕೇಂದ್ರ ಸರ್ಕಾರವು ಹಂತ ಹಂತವಾಗಿ ಭಾಷೆ–ಸಂಸ್ಕೃತಿಯ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಇದು ಕೇವಲ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಮಾತ್ರವಲ್ಲ, ರಾಜ್ಯಗಳ ಆರ್ಥಿಕ ಶಕ್ತಿಯ ಮೇಲಿನ ದಾಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು.
ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ಗಣರಾಜ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಧರ್ಮವನ್ನು ಬಲವಂತವಾಗಿ ಹೇರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಮೇಲೆಯೇ ದಾಳಿ ಮಾಡುತ್ತಿದೆ. ಕೇಂದ್ರ ಸರ್ಕಾರ ಅಧಿಕಾರದ ದುರುಪಯೋಗ ಮಾಡಿಕೊಂಡು ವ್ಯವಸ್ಥಿತವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಹಿಂದೆ ಇದಕ್ಕೆ ವಿರುದ್ಧವಾಗಿ ದೇಶದಾದ್ಯಂತ ದೊಡ್ಡ ಚಳವಳಿಗಳು ನಡೆದಿದ್ದವು. ಆದರೆ ಇಂದು ಮೌನವಾಗಿ, ಬ್ಬಾಳಿಕೆ ಕೂಡ ಆಗಿದೆ ಎಂದು ಅವರು ಹೇಳಿದರು. ದೇಶಕ್ಕೆ ಅತ್ಯಧಿಕ ಆದಾಯ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ಆದಾಯ ನಾಲ್ಕೈದು ರಾಜ್ಯಗಳ ಬಜೆಟ್‌ಗೆ ಸಮಾನವಾಗಿದೆ. ಆದರೂ ಕೇಂದ್ರ ಪುರಸ್ಕೃತ ಯೋಜನೆಗಳಿಂದ ರಾಜ್ಯಕ್ಕೆ ನ್ಯಾಯಸಮ್ಮತ ಹಣ ಸಿಗುತ್ತಿಲ್ಲ. ತೆರಿಗೆ ಪಾಲನ್ನೇ ಕಡಿಮೆ ಮಾಡಲಾಗುತ್ತಿದೆ ಎಂದು ದೂರಿದರು.
ಕಳೆದ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಶೇ. 23 ರಷ್ಟು ಕಡಿತ ಮಾಡಿದ್ದು, ಇದರಿಂದ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ಕನಿಷ್ಠ ಕಳೆದ ಬಾರಿ ಎಷ್ಟು ಪಾಲು ಇತ್ತೋ ಅಷ್ಟಾದರೂ ಕೊಡಬೇಕು. 10 ವರ್ಷಗಳ ಹಿಂದೆ ರಾಜ್ಯಕ್ಕೆ ಶೇ. 4.7 ಭಾಗ ತೆರಿಗೆ ಸಿಗುತ್ತಿತ್ತು. ಈ ಬಾರಿ ಕನಿಷ್ಠ 4.7ಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ಅದು ನ್ಯಾಯವಾಗುತ್ತದೆ ಎಂದು ಒತ್ತಾಯಿಸಿದರು. ಕರ್ನಾಟಕ ದೇಶಕ್ಕೆ ‘ಚಿನ್ನದ ಮೊಟ್ಟೆ ಇಡುವ ರಾಜ್ಯ’. ತಲಾ ಆದಾಯದಲ್ಲಿ ನಂಬರ್–1 ಸ್ಥಾನದಲ್ಲಿರುವ ಪ್ರಗತಿಪರ ರಾಜ್ಯ. ಕನ್ನಡಿಗರ ಆದಾಯ ಹೆಚ್ಚಾದರೆ ದೇಶದ ಆದಾಯವೂ ಹೆಚ್ಚಾಗುತ್ತದೆ. ಆದರೆ ರಾಜ್ಯಗಳ ಹಕ್ಕು ತುಳಿಯಲಾಗುತ್ತಿದೆ. ಮನರೇಗಾ ಯೋಜನೆಯನ್ನು ಕಿತ್ತೆಸೆಯಲಾಗಿದ್ದು, ಎಲ್ಲರಿಗೂ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
