Home ಆಟೋಟ ವಿನೇಶ್‌ ಫೋಗಟ್‌ ಜಾಗದಲ್ಲಿ ಆಡುತ್ತಿದ್ದ ಅಂತಿಮ್‌ ಪಂಗಲ್‌ ವಿರುದ್ಧ ಶಿಸ್ತುಕ್ರಮ! ಕುಡಿದು ಟ್ಯಾಕ್ಸಿಯವನ ಜೊತೆ ಗಲಾಟೆಗಿಳಿದ...

ವಿನೇಶ್‌ ಫೋಗಟ್‌ ಜಾಗದಲ್ಲಿ ಆಡುತ್ತಿದ್ದ ಅಂತಿಮ್‌ ಪಂಗಲ್‌ ವಿರುದ್ಧ ಶಿಸ್ತುಕ್ರಮ! ಕುಡಿದು ಟ್ಯಾಕ್ಸಿಯವನ ಜೊತೆ ಗಲಾಟೆಗಿಳಿದ ತರಬೇತುದಾರ ವಿರುದ್ಧವೂ ದೂರು!

0

ಪ್ಯಾರಿಸ್:‌ ಅತ್ತ ತನ್ನದಲ್ಲದ ವಿಭಾಗದಲ್ಲಿ ಸ್ಪರ್ಧಿಸಿಯೂ ಚಿನ್ನದ ಪದಕದ ಹಂತ ತಲುಪಿದ್ದ ವಿನೇಶ್‌ ಫೋಗಟ್‌ ಕೊನೆಯ ಕ್ಷಣದಲ್ಲಿ ಪದಕ ಗೆಲ್ಲುವ ಕನಸನ್ನು ಕೈಚೆಲ್ಲಬೇಕಾಯಿತು. ಇಲ್ಲಿ ತಪ್ಪು ಯಾರದ್ದೆನ್ನುವ ಚರ್ಚೆ ಇನ್ನೂ ಚಾಲ್ತಿಯಲ್ಲಿರುವಾಗಲೇ, 53 ಕೇಜಿ ವಿಭಾಗದಲ್ಲಿ ವಿನೇಶ್‌ ಜಾಗದಲ್ಲಿ ಸ್ಪರ್ಧಿಸಿದ್ದ ಅಂತಿಮ್‌ ಪಂಗಲ್‌ ಈಗ ತನ್ನ ಅಶಿಸ್ತಿನ ಕಾರಣಕ್ಕಾಗಿ ಕ್ರಮಕ್ಕೆ ಒಳಗಾಗಿದ್ದಾರೆ.

ಅಂತಿಮ್‌ ತನ್ನ ವೈಯಕ್ತಿಕ ವಸ್ತುಗಳನ್ನು ತರಲು ತನಗೆ ನೀಡಲಾಗಿರುವ ಮಾನ್ಯತೆ ಕಾರ್ಡನ್ನು ತನ್ನ ತಂಗಿಗೆ ಕೊಟ್ಟು ಕಳುಹಿಸಿದ್ದರು. ಒಲಿಂಪಿಕ್‌ ವಸತಿ ಬಳಿಯ ಸೆಕ್ಯುರಿಟಿ ಅಧಿಕಾರಿಗಳು ತಪಾಸಣೆಯ ವೇಳೆ ಇದನ್ನು ಕಂಡುಕೊಂಡಿದ್ದಾರೆ.

ಇದೀಗ ಅಂತಿಮ್‌ ಪಂಗಲ್‌ ಕ್ರೀಡಾ ಕೂಟದಿಂದ ಹೊರಬೀಳುವುದರ ಜೊತೆಗೆ ಶಿಸ್ತುಕ್ರಮವನ್ನೂ ಎದುರಿಸಬೇಕಾದ ಭಯದಲ್ಲಿದ್ದಾರೆ.

‍ಫ್ರೆಂಚ್‌ ಅಧಿಕಾರಿಗಳ ಆರೋಪದ ನಂತರ ಭಾರತೀಯ ಒಲಿಂಪಿಕ್ ಸಂಸ್ಥೆಯು ಇದರತ್ತ ಗಮನಹರಿಸಿ ಕುಸ್ತಿಪಟು ಅಂತಿಮ್‌ ಪಂಗಲ್‌, ಅವರ ತಂಗಿ ಹಾಗೂ ಅವರ ಸಹಾಯಕರನ್ನು ಭಾರತಕ್ಕೆ ಕಳುಹಿಸಲು ತೀರ್ಮಾನಿಸಿದೆ.

ಈಗಾಗಲೇ ಸ್ಪರ್ಧೆಯಿಂದ ಹೊರಬಿದ್ದಿದ್ದ ಅಂತಿಮ್‌ ತನ್ನ ನಾಮನಿರ್ದೇಶಿತ ತರಬೇತುದಾರ ಭಗತ್ ಸಿಂಗ್ ಮತ್ತು ವೈಯಕ್ತಿಕ ತರಬೇತುದಾರ ವಿಕಾಸ್ ಕೂಡ ತಂಗಿದ್ದ ಹೋಟೆಲ್‌ಗೆ ಹೋಗಿದ್ದರು. ಅಲ್ಲಿಂದ ಅವರು ಕ್ರೀಡಾಗ್ರಾಮದಲ್ಲಿದ್ದ ತನ್ನ ವಸ್ತುಗಳನ್ನು ತರಲೆಂದು ತನ್ನ ತಂಗಿಯನ್ನು ಕಳುಹಿಸಿದ್ದರು.

ಕ್ರೀಡಾಗ್ರಾಮದ ಒಳಗೆ ಹೋಗುವಲ್ಲಿ ಯಶಸ್ವಿಯಾಗಿದ್ದ ತಂಗಿ ಹೊರಗೆ ಬರುವಾಗ ಸಿಕ್ಕಿಕೊಂಡಿದ್ದಾರೆ. ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಅವರನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ 19 ವರ್ಷದ ಜೂನಿಯರ್ ವಿಶ್ವ ಚಾಂಪಿಯನ್ ಅಂತಿಮ್‌ ಅವರನ್ನು ಸಹ ಠಾಣೆಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದಲ್ಲದೆ ಅಂತಿಮ್‌ ಅವರ ತರಬೇತುದಾರರಾದ ಭಗತ್‌ ಹಾಗೂ ವಿಕಾಸ್‌ ಕುಡಿದು ಟ್ಯಾಕ್ಸಿಯಲ್ಲಿ ಪ್ರಯಾಣಿಸಿ ನಂತರ ಬಾಡಿಗೆ ಹಣ ನೀಡಲು ನಿರಾಕರಿಸಿದ್ದಾರೆ ಎಂದು ಟ್ಯಾಕ್ಸಿ ಚಾಲಕ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾನೆ.

ಇದೀಗ ಪ್ರಕರಣದಲ್ಲಿ ಭಾರತದ ಒಲಿಂಪಿಕ್‌ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದ್ದು, ಪ್ರಕರಣದ ವಿವರ ಪಡೆದು ಮುಂದಿನ ಕ್ರಮಗಳ ಕುರಿತು ಗಮನಹರಿಸುತ್ತಿದ್ದಾರೆ.

You cannot copy content of this page

Exit mobile version