ಮುಡಾ ಪ್ರಕರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಬೆನ್ನಲ್ಲೇ ಮುಡಾ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಸುದೀರ್ಘ ಉತ್ತರ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ರಾಜ್ಯಪಾಲರು ಇನ್ನೇನು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂಬ ಅನುಮಾನದ ನಡುವೆಯೇ ರಾಜ್ಯಪಾಲರಿಗೆ ಬರೆದ ಪತ್ರ ಹಲವು ಮಹತ್ವ ಪಡೆದುಕೊಂಡಿದೆ.
‘ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನಾನು ಯಾವುದೇ ಲೋಪ ಎಸಗಿಲ್ಲ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ದುರುದ್ದೇಶದ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಮನವಿ ಮಾಡಿದ 70 ಪುಟಗಳ ಉತ್ತರದಲ್ಲಿ ಆಗ್ರಹಿಸಿದ್ದಾರೆ.
ಮುಡಾ ನಿವೇಶನದ ಸಂಪೂರ್ಣ ದಾಖಲೆ, ಇಂತಹ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿಗಳು, ರಾಜ್ಯಪಾಲರು ನೋಡಿರುವ ಶೋಕಾಸ್ ನೋಟಿಸ್ ಕೂಡ ಕ್ರಮಬದ್ದವಿಲ್ಲ. ಯಾವುದೋ ಒತ್ತಡಕ್ಕೆ ಮಣಿದು ನೀಡಿರುವ ಈ ನೋಟಿಸ್ ಗೆ ಅಷ್ಟು ಮಾನ್ಯತೆ ಕೂಡ ಇಲ್ಲ. ಈ ಕಾರಣದಿಂದ ಕೂಡಲೇ ನೋಟಿಸ್ ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಬರೆದ ಸುದೀರ್ಘ ಪತ್ರದಲ್ಲಿ ಕೋರಿದ್ದಾರೆ ಎನ್ನಲಾಗಿದೆ.
‘ನಾನು ಅಧಿಕಾರದಲ್ಲೇ ಇಲ್ಲದಿದ್ದಾಗ ನಡೆದ ಪ್ರಕ್ರಿಯೆಯಲ್ಲಿ ನನ್ನ ಅಧಿಕಾರ ದುರ್ಬಳಕೆ ಆಗಲು ಹೇಗೆ ಸಾಧ್ಯ. ನನ್ನ ವಿರುದ್ಧ ಅರ್ಜಿದಾರರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ. ನನ್ನ ಪತ್ನಿಯ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಕಾನೂನು ಬದ್ಧವಾಗಿಯೇ ಜಮೀನು ಖರೀದಿ ಮಾಡಿದ್ದು, ಬಳಿಕ ಭೂ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಇದೇ ಜಮೀನನ್ನು ನನ್ನ ಪತ್ನಿಗೆ ಅರಿಶಿಣ-ಕುಂಕುಮಕ್ಕಾಗಿ 3.10 ಎಕರೆ ನೀಡಿದ್ದಾರೆ. ದಾಖಲೆ ಪರಿಶೀಲಿಸದೇ ಈ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿದ ಮುಡಾದವರು ವಾಸ್ತವ ಸತ್ಯ ತಿಳಿದ ನಂತರ ತಮ್ಮ ತಪ್ಪು ಒಪ್ಪಿಕೊಂಡು ಪರಿಹಾರವಾಗಿ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಹೀಗಾಗಿ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು’ ಎಂದು ಪತ್ರದಲ್ಲಿ ಉಲ್ಲೇಖ ಮಾಡಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿವೇಶನ ಹಂಚಿಕೆ ಪ್ರಕ್ರಿಯೆಯ ಎಲ್ಲಾ ದಾಖಲೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು, ಆ ದಾಖಲೆ ಪರಿಶೀಲಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವುದು ರಾಜ್ಯಪಾಲರ ಪಕ್ಷಪಾತಿ ನಿಲುವು ಎಂದೂ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.