ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರನ್ನು ಬಿಗಿ ಭದ್ರತೆಯ ನಡುವೆ ಗುರುವಾರ ಬೆಳಗ್ಗೆ ಬೆಂಗಳೂರು ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ ಪಟ್ಟಿಯಡಿ ಆರೋಪಿಯಾಗಿರುವ ದರ್ಶನ್ ಅವರಿಗೆ 16 ಮಂದಿಯೊಂದಿಗೆ ಸೆಪ್ಟೆಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್ ಎಸ್‌ಯುವಿ ವಾಹನವೊಂದರಲ್ಲಿ ಹೊರಕ್ಕೆ ಕರೆತರಲಾಯಿತು ಮತ್ತು ನಂತರ ಚಿಕ್ಕಬಳ್ಳಾಪುರದಿಂದ ಪೊಲೀಸ್ ವ್ಯಾನ್ ಮೂಲಕ ತೆರಳಿದರು. ದರ್ಶನ್ ಅವರಿದ್ದ ವ್ಯಾನ್ ಬೆಳಗ್ಗೆ 9.30ರ ಸುಮಾರಿಗೆ ಬಳ್ಳಾರಿ ಜೈಲು ತಲುಪಿತು.
ಭದ್ರತಾ ಲೋಪಗಳನ್ನು ತಪ್ಪಿಸಲು ನಟನನ್ನು ಆಂಧ್ರಪ್ರದೇಶ ಮಾರ್ಗದ ಮೂಲಕ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ
ದರ್ಶನ್ ಪೊಲೀಸ್ ಅಧಿಕಾರಿಗಳ ಪಕ್ಕದಲ್ಲಿಯೇ ಜೈಲು ಪ್ರವೇಶಿಸಿದರು. ಅವರು ಕಪ್ಪು ಪೂಮಾ ಟಿ-ಶರ್ಟ್ ಧರಿಸಿದ್ದರು ಆದರೆ ವಿಗ್ ಹಾಕಿಕೊಂಡಿರಲಿಲ್ಲ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿರುವ ಫೋಟೋಗಳು ವೈರಲ್ ಆದ ನಂತರ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಒಂಬತ್ತು ಆರೋಪಿಗಳನ್ನು ವರ್ಗಾಯಿಸಲು ಬೆಂಗಳೂರು ನ್ಯಾಯಾಲಯ ಆದೇಶಿಸಿತ್ತು.