ಕಂಡ ಕಂಡವರ ಬಾಯಿಗೆ ಮೈಕ್ ಇಟ್ಟು ಮುಜಗರಕ್ಕೆ ಒಳಪಡಿಸುತ್ತಿದ್ದ ಮಾಧ್ಯಮ ವರದಿಗಾರರನ್ನು ಸಚಿವ ಕೆ.ಎನ್.ರಾಜಣ್ಣ ಇಂದು ತರಾಟೆಗೆ ತೆಗೆದುಕೊಂಡರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದರ್ಶನ್ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡರು.
“ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಆತನನ್ನೇ ತೋರಿಸುತ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಒಳ್ಳೆಯ ಕಲಾವಿದ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದ ಮಾತ್ರಕ್ಕೆ ಮಾಡಬಾರದ್ದು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಮೂರು ಹೊತ್ತು ಆತನ ಬಗ್ಗೆಯೇ ತೋರಿಸಿದರೆ ಹೇಗೆ? ಮತ್ತೆ ಮತ್ತೆ ಅದೇ ಸ್ಟೊರಿ ನೋಡಿ ಅಸಹ್ಯವಾಗುತ್ತೆ. ಟಿವಿಯವರಿಗೆ ಬೇರೆ ಕೆಲಸವಿಲ್ವಾ?” ಎಂದು ಅಸಹನೆ ತೋರಿಸಿದರು.
ಅವರು ಹಾಸನದ ಸಾಮಾಜಿಕ ಕಾರ್ಯಕರ್ತ ಮಹಾಂತಪ್ಪ ಎನ್ನುವವರ ಸಾವಿಗೆ ಸಂತಾಪ ಸೂಚಿಸಲೆಂದು ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕೆ ಎನ್ ರಾಜಣ್ಣ ದರ್ಶನ್ ವಿಚಾರವನ್ನು ಪ್ರಸ್ತಾಪಿಸಿದಾಗ ತಾಳ್ಮೆ ಕಳೆದುಕೊಂಡರು.
ಕೆಪಿಸಿಸಿಯಲ್ಲಿನ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ, “ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ನಡೆಯುವ ಪಕ್ಷ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.
ದರ್ಶನ್ ವಿಷಯ ಬರುತ್ತಿದ್ದ ಹಾಗೆ “ಆತ ಅಲ್ಲಿ ಕೂರುತ್ತಿದ್ದ, ಏಳುತ್ತಿದ್ದ ಅನ್ನೋದನ್ನೆಲ್ಲ ತೋರಿಸ್ತಾ ಇದ್ದೀರಿ. ನಿಮಗೆ ಟಿವಿಯವರಿಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ವಾ? ನೋಡಿ ನೋಡಿ ಅಸಹ್ಯ ಆಗುತ್ತೆ. ಒಳ್ಳೆಯ ಕಲಾವಿದ ಆಗಿದ್ದರೆ ಜನ ನೋಡ್ತಾರೆ, ತಪ್ಪು ಮಾಡಿದ್ರೆ ಕಾನೂನು ನೋಡಿಕೊಳ್ಳುತ್ತದೆ. ನೀವು ಆ ವಿಷಯವನ್ನು ಎಳೆದಾಡುವುದನ್ನು ಬಿಡಿ” ಎಂದು ಅವರು ಹೇಳಿದರು.