ಬೆಂಗಳೂರು : ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಬೀದಿ ನಾಯಿಗಳನ್ನು (Stray Dog) ದತ್ತು (Adoption) ಪಡೆಯಲು ಮುಂದಾಗಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯು (GBA) ಮನವಿ ಮಾಡಿದೆ.
ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದತ್ತು ಪಡೆಯಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮತ್ತು ವ್ಯಾಪ್ತಿಯಲ್ಲಿನ ಸಂಸ್ಥೆಗಳ (ಶಿಕ್ಷಣ, ಆಸ್ಪತ್ರೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೈದಾನ ಸೇರಿದಂತೆ ಬೀದಿ) ನಾಯಿಗಳ ಕಲ್ಯಾಣ, ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮನವಿ ಮಾಡಿರುವುದಾಗಿ ಪಾಲಿಕೆ ಹೇಳಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ವಯ ಬೀದಿ ನಾಯಿಗಳನ್ನು ದತ್ತು ಪಡೆಯಬಹುದು. ಬೀದಿ ನಾಯಿಗಳ ಸುರಕ್ಷತೆ ಹಾಗೂ ಉತ್ತಮ ಜೀವನ ಪರಿಸರ ವ್ಯವಸ್ಥೆಯನ್ನು ರೂಪಿಸುವುದು, ನಾಯಿಗಳ ಸಂಖ್ಯೆ ನಿಯಂತ್ರಣದ ಮೂಲಕ ಪ್ರಾಣಿ-ಮನುಷ್ಯರ ನಡುವೆ ಸಹಬಾಳ್ವೆ ವಾತಾವರಣ ನಿರ್ಮಾಣ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವುದು ದತ್ತು ಯೋಜನೆಯ ಉದ್ದೇಶವಾಗಿದೆ ಎಂದು ಪಾಲಿಕೆ ಆಯುಕ್ತ ಡಿಎಸ್ ರಮೇಶ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 59,820 ಬೀದಿ ನಾಯಿಗಳಿವೆ. ನಾನಾ ಸಂಸ್ಥೆ ಗಳ ಆವರಣದಲ್ಲಿ ಸುಮಾರು 369 ಬೀದಿ ನಾಯಿಗಳು ಇರುವುದು ದೃಢಪಟ್ಟಿದೆ. ಬೀದಿನಾಯಿಗಳ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ, ಲಸಿಕಾ ಅಭಿಯಾನ, ಪಶು ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿರುತ್ತದೆ. ಬೀದಿನಾಯಿಗಳ ದತ್ತು ಕಾರ್ಯಕ್ರಮವು ಕೇವಲ ಒಂದು ಪ್ರಾಣಿ ಕಲ್ಯಾಣ ಕ್ರಮವಲ್ಲ, ಇದು ನಗರದ ಸಾಮಾಜಿಕ ಹೊಣೆ ಗಾರಿಕೆಯ ಪ್ರತೀಕ ಎಂದು ಹೇಳಿದ್ದಾರೆ. ಬೀದಿ ನಾಯಿಗಳನ್ನು ದತ್ತು ಪಡೆಯಲು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿ ವೃದ್ಧಿ ಸಂಘಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಪಾಲಿಕೆಯೊಂದಿಗೆ ಕೈಜೋಡಿಸ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಬೀದಿನಾಯಿಗಳ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ, ಲಸಿಕಾ ಅಭಿಯಾನ, ಪಶು ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ಬೀದಿನಾಯಿಗಳ ದತ್ತು ಕಾರ್ಯಕ್ರಮವು ಕೇವಲ ಒಂದು ಪ್ರಾಣಿ ಕಲ್ಯಾಣ ಕ್ರಮವಲ್ಲ, ಇದು ನಗರದ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿದ್ದು, ನಾಗರಿಕರು ಮತ್ತು ಸ್ಥಳೀಯ ಆಡಳಿತದ ನಡುವೆ ಸಹಭಾಗಿತ್ವವನ್ನು ಬಲಪಡಿಸುತ್ತದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
