ಹಾಸನ: ಜಿಲ್ಲೆಯ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಕಿ ಸಾಗಣೆ ಲಾರಿ ವಶ ಪ್ರಕರಣದಲ್ಲಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಜಿಲ್ಲಾ ಪತ್ರಕರ್ತರ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲಾಗಿದೆ.
ಜಿಲ್ಲಾಧ್ಯಕ್ಷರಾದ ಕೆ.ಆರ್.ಕೆಂಚೇಗೌಡ ಅವರ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ತೆರಳಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಎಸ್ಪಿ ಮೊಹಮ್ಮದ್ ಸುಜೀತಾ ಅವರಿಗೆ ಲಿಖಿತ ದೂರು ನೀಡಿದರು. ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಆಲೂರು ಪೊಲೀಸರು ವಶಕ್ಕೆ ಪಡೆದಿರುವುದು ಸರಿಯಷ್ಟೆ. ಆದರೆ ಅಕ್ಕಿ ಸಾಗಿಸುತ್ತಿದ್ದ ಲಾರಿಯವರಿಂದ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆಂಬ ವಿಚಾರ ನಮ್ಮ ಸಂಘದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ಹಾಸನ ಜಿಲ್ಲೆಯ ಪತ್ರಕರ್ತರ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಪತ್ರಕರ್ತರು ಕಳಂಕ ಹೊತ್ತುಕೊಳ್ಳುವಂತಾಗಿದೆ. ಎಂದರು.
ಈ ವಿಚಾರದಲ್ಲಿ ಪತ್ರಕರ್ತರು ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಇರುವುದರಿಂದ ತಾವು ದಯಮಾಡಿ ಈ ಪ್ರಕರಣದ ಸಂಬಂಧ ಸಮಗ್ರ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಅಂತಹ ವಸೂಲಿಕೋರರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆಂಚೇಗೌಡರು ಎಸ್ಪಿ ಅವರಲ್ಲಿ ಮನವಿ ಮಾಡಿದರು.
ಇದೇ ವೇಳೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷರು ತಿಳಿಸಿದರು. ದೂರು ಸ್ವೀಕರಿಸಿದ ನಂತರ ಮಾತನಾಡಿದ ಎಸ್ಪಿ ಅವರು, ಈ ಸಂಬಂಧ ಹೊಸದಾಗಿ ಎಫ್‌ಐಆರ್ ದಾಖಲು ಮಾಡಬೇಕು. ಪತ್ರಕರ್ತರ ಬಗ್ಗೆ ಕೇಳಿ ಬಂದಿರುವ ಆರೋಪ ಸಂಬಂಧ ತನಿಖೆ ನಡೆಸಿ ಎಂದು ಲಿಖಿತ ದೂರು ನೀಡಿರುವುದು ಇದೇ ಮೊದಲು ಮತ್ತು ಒಳ್ಳೆಯ ಬೆಳವಣಿಗೆ ಎಂದರು.
ಇದರಿಂದ ಸುಳ್ಳು ಪ್ರಚಾರ ಮಾಡುವುದು, ಯಾರೋ ಒಬ್ಬರನ್ನು ಗುರಿಯಾಗಿಸಿ ವರದಿ ಮಾಡುವುದು ತಪ್ಪಲಿದೆ. ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಕಾರ್ಯದರ್ಶಿಗಳಾದ ಕೆ.ಎಂ.ಹರೀಶ್, ಕುಶ್ವಂತ್, ಖಜಾಂಚಿ ಪ್ರಕಾಶ್ ಟಿವಿ5, ಕಾರ್ಯಕಾರಿ ಸಮಿತಿ ಸದಸ್ಯರಾದ ನಟರಾಜ್, ಶರಣ್ ಬಾಳ್ಳುಗೋಪಾಲ್, ಕೃಷ್ಣ ಇಬ್ಬೀಡು, ಶರತ್ ಹೆಚ್.ಆರ್. ಮೋಹನ್ ಕೆ.ಎಂ. ಮತ್ತು ಸಚಿನ್ ಹಾಜರಿದ್ದರು.
