ಶನಿವಾರ ಭಾರೀ ಮಳೆಯ ನಡುವೆ ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಭಾಗದ ಮೇಲಾವರಣ ಕುಸಿದಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.
ದೆಹಲಿ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿದು ಒಬ್ಬರ ಸಾವು ಹಾಗೂ ಹಲವಷ್ಟು ವಾಹನಗಳ ಜಖಂ ನಂತರ ಗುಜರಾತಿನ ವಿಮಾನ ನಿಲ್ದಾಣದ ಕುಸಿತ ಹಲವಷ್ಟು ಟೀಕೆಗೆ ಗುರಿಯಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ “ಉಡಾನ್ ಯೋಜನೆ”ಯ ಹೆಸರಿನಲ್ಲಿ ಹಣ ಉಡಾಯಿಸಿದೆಯೇ ಎಂಬಂತೆ ವಿರೋಧ ಪಕ್ಷಗಳು ಟೀಕಿಸಲು ಪ್ರಾರಂಭಿಸಿವೆ.
ಸುದ್ಧಿ ಸಂಸ್ಥೆ ANI ಪ್ರಕಾರ, ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ, ಸಂಗ್ರಹವಾದ ನೀರನ್ನು ತೆಗೆದುಹಾಕುವ ಉದ್ದೇಶದಿಂದ ನಿರ್ವಹಣಾ ಕಾರ್ಯದ ಸಮಯದಲ್ಲಿ ಮೇಲಾವರಣವು ಮುರಿದುಹೋಗಿದೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಘಟನೆಯ ಬಗ್ಗೆ ವಿವರವಾದ ವರದಿಯನ್ನು ಕೋರಲಾಗಿದೆ ಎಂದು ತಿಳಿದು ಬಂದಿದೆ.
ಇದೇ ರೀತಿಯ ಘಟನೆ ಮಧ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ್ದು, ಭಾರೀ ಮಳೆಯ ನಡುವೆ ನೀರು ಶೇಖರಣೆಯಾಗಿ ಬಟ್ಟೆಯ ಮೇಲಾವರಣದ ಒಂದು ಭಾಗ ಕುಸಿದು ಕೆಳಗೆ ನಿಂತಿದ್ದ ಕಾರನ್ನು ನುಜ್ಜುಗುಜ್ಜಾಗಿಸಿದೆ. ಆದರೆ, ಘಟನೆಯಲ್ಲಿ ಯಾವುದೆ ಸಾವು ನೋವು ಸಂಭವಿಸಿಲ್ಲ.