ನವದೆಹಲಿ: ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿಯು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಅಧಿಸೂಚನೆ ಹೊರಡಿಸಲಿದೆ. ಇದೇ 24ರಿಂದ 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರಲಿದೆ.
ನಾಮಪತ್ರಗಳ ಪರಿಶೀಲನಾ ಕಾರ್ಯ ಅಕ್ಟೋಬರ್ 1ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8ರವರೆಗೆ ಅವಕಾಶವಿರುತ್ತದೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅಕ್ಟೋಬರ್ 17ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.
ಹಾಗೆಯೇ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಅನುಮತಿ ಅಗತ್ಯವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದರು.
‘ಭಾರತ್ ಜೋಡೊ ಯಾತ್ರಾ’ದ ವಿಶ್ರಾಂತಿ ಸಮಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರದೇಶ ಕಾಂಗ್ರೆಸ್ ಸಮಿತಿಯ 10 ಪ್ರತಿನಿಧಿಗಳ ಬೆಂಬಲ ಇರುವ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದರು.
ಪಕ್ಷದ ರಾಷ್ಟ್ರೀಯ ವಕ್ತಾರ ಟಾಯ್ ವಡಕ್ಕನ್, ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ, ಎರಡು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹುದ್ದೆಗೆ ಸ್ಪರ್ಧೆಯನ್ನು ನೋಡುವಂತಾಗಿದೆ. ಒಂದು ವೇಳೆ ರಾಹುಲ್ ಪಕ್ಷದ ಸಾರಥ್ಯ ವಹಿಸಲು ಒಪ್ಪದಿದ್ದರೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಸ್ಪರ್ಧಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.