Home ವಿಶೇಷ ಅಷ್ಟಕ್ಕೂ ಉಳಿಸಿಕೊಳ್ಳಬೇಕಿರುವುದು ಏನೇನೋ ಅಲ್ಲ… ನಮ್ಮ ಜೀವ!

ಅಷ್ಟಕ್ಕೂ ಉಳಿಸಿಕೊಳ್ಳಬೇಕಿರುವುದು ಏನೇನೋ ಅಲ್ಲ… ನಮ್ಮ ಜೀವ!

0

ಸಾವು  ಕೈಚಾಚಿ ನಿಂತಾಗ ಆ ಭಯದ ನೆರಳಲ್ಲಿ  ಬದುಕುವ ಕ್ಷಣಗಳು ಊಹೆಗೆ ನಿಲುಕದ್ದು. ಹೀಗಿರುವಾಗ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ತನ್ನ ಸುಂದರ ಬದುಕನ್ನು ಆವರಿಸಿಕೊಂಡಾಗಲೂ ಆ ಸೋಲನ್ನೇ ಸೋಲಿಸಿ ಬಣ್ಣ ಬಣ್ಣದ ನಾಳೆಗಳಿಗೆ ಕಸೂತಿ ಹಾಕುತ್ತಾ ಅಸಾಧಾರಣ ಜೀವನೋತ್ಸಾಹ ಮೆರೆದವರು ಭಾರತಿ ಬಿ ವಿ ಯವರು. ಕ್ಯಾನ್ಸರ್‌ ರೋಗಿಗಳಿಗೆ ಧೈರ್ಯ ಮತ್ತು ಭರವಸೆ ನೀಡಲು ಆಚರಿಸುವ ʼವರ್ಲ್ಡ್‌ ರೋಸ್‌ ಡೇʼ ( ಸೆ. ೨೨) ಯ ಪ್ರಯುಕ್ತ ಇತರರಿಗೆ ಸ್ಫೂರ್ತಿದಾಯಕವಾಗುವ ತಮ್ಮ ಹೋರಾಟ ಕಥನವನ್ನು  ಪೀಪಲ್‌ ಮೀಡಿಯಾಕ್ಕೆ ಅವರು ಬರೆದಿದ್ದಾರೆ. ಮುಂದೆ ಓದಿ…      

2011ರಲ್ಲಿ ಮೊದಲ ಬಾರಿ ಕ್ಯಾನ್ಸರ್ ಆದಾಗ ಮೊದಮೊದಲಿನ ಶಾಕ್‌ನ ನಂತರ ಎಲ್ಲ ಚಿಕಿತ್ಸೆಗೂ ನಾನು ದೇಹವೊಡ್ಡಿದ್ದೆ. ಕೀಮೋಗಳ ನೋವು, ಅಡ್ಡ ಪರಿಣಾಮಗಳು, ಸಂಕಟ ಎಲ್ಲವನ್ನೂ ತಿಂಗಳುಗಟ್ಟಲೆ ಅನುಭವಿಸಿದ ನಾನು, ಅದೆಲ್ಲ ಮುಗಿದ ನಂತರ ಅಂದುಕೊಂಡಿದ್ದೆ ‘ದೇವರೇ ಇದು ಮೊದಲ ಬಾರಿಯಾದ್ದರಿಂದ ಸಹಿಸುವ ಶಕ್ತಿ, ತಾಳ್ಮೆ, ಸ್ಥೈರ್ಯ ನನ್ನಲ್ಲಿತ್ತು. ಆದರೆ ಮತ್ತೆಂದೂ ಇದು ಬಾರದಿರಲಿ. ಬಂದರೆ ಮಾತ್ರ ಹೋರಾಟವೇ ಇಲ್ಲದೆ ನಾನು ಶರಣಾಗತಳಾಗುತ್ತೇನೆ… ನನಗಿನ್ನು ಅಸಾಧ್ಯ’ ಎಂದು. 

ಅದಾದ ನಂತರ ದೇಹ ಮತ್ತೆ ಮೊದಲಿನ ಶಕ್ತಿಯನ್ನು ಒಗ್ಗೂಡಿಸಿಕೊಂಡಿತು ಮತ್ತು ನಾನು ನನ್ನ  ಬದುಕನ್ನು ಸಂಪೂರ್ಣವಾಗಿ ಅನುಭವಿಸಲಾರಂಭಿಸಿದೆ. ಬರಬರುತ್ತ ಹೇಗಾಯಿತೆಂದರೆ ನನಗೆ ಆ ಕಾಯಿಲೆ ಇತ್ತು ಎನ್ನುವುದೂ ಮರೆತು ಹೋದಂತಾಯಿತು. ನಾನು ‘ಸಾಸಿವೆ ತಂದವಳು’ ಪುಸ್ತಕ ಬರೆದಿದ್ದೇ ಈ ಕಾರಣಕ್ಕೆ… ನನಗೆ ಗೊತ್ತು ಕಾಲಕ್ಕೆ ಎಂಥ ಘೋರ ನೆನಪುಗಳ ಮೇಲೆಯೂ ಮರೆವಿನ ಪರದೆ ಹಾಕುವ ಕಲೆ ತಿಳಿದಿದೆ ಎಂದು.

ನೋಡ ನೋಡುತ್ತಲೇ 2021ರ ಅಕ್ಟೋಬರ್ ತಿಂಗಳು ಬಂದು ಬಿಟ್ಟಿತ್ತು.

ಇನ್ನೊಂದು ತಿಂಗಳು ಕಳೆದರೆ ನನ್ನ ಕ್ಯಾನ್ಸರ್ ಪ್ರಾರಂಭವಾದ ದಿನಕ್ಕೆ 10 ವರ್ಷ ತುಂಬುತ್ತಿತ್ತು! ಹ… ತ್ತು… ವರ್ಷಗಳು! ಹೇಗೆ ಹಕ್ಕಿಯಂತೆ ಹಾರಿಹೋದವು ದಿನಗಳು ಎಂದು ಸಂಭ್ರಮಿಸುತ್ತಿದ್ದೆ. ಆ ದಿನವನ್ನು ಒಂದು ಸ್ಮರಣೀಯ ದಿನವನ್ನಾಗಿ ಮಾಡಲು ನಾನು ಏನು ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿರುವಾಗಲೇ, ಬದುಕು ಬೇರೊಂದು ಲೆಕ್ಕಾಚಾರದಲ್ಲಿ ತೊಡಗಿತ್ತು ಎನ್ನುವುದು ನನಗೆ ಅರ್ಥವಾಗಿದ್ದು ಅಕ್ಟೋಬರ್ 26ರಂದು ಕುತ್ತಿಗೆಯ ಕೆಳಗಿದ್ದ ಊತ ದೊಡ್ಡದಾಗಿದೆ ಅನ್ನಿಸಿದಾಗ. ಸುಮಾರು 2-3 ತಿಂಗಳಿಂದ ಆ ಸ್ಥಳದಲ್ಲಿ ಸಣ್ಣ ಊತವಿರುವಂತೆ ಅನ್ನಿಸುತ್ತಿತ್ತು. ಮುಟ್ಟಿ ನೋಡಿಕೊಂಡಾಗ ನೋವಿತ್ತು. ಸಾಧಾರಣವಾಗಿ ಕ್ಯಾನ್ಸರ್ ಗಡ್ಡೆಗಳು ಕಾಣಿಸಿದಾಗ ನೋವಿರುವುದಿಲ್ಲ. ಹಾಗಾಗಿ ಇದರ ಬಗ್ಗೆಯೂ ನಾನು ದಿವ್ಯ ನಿರ್ಲಕ್ಷ್ಯ ತೋರಿಸಿ ಸುಮ್ಮನಾಗಿದ್ದೆ. ಈಗ ತೋರಿಸಲೇ ಬೇಕಾದ ಸಮಯ ಎದುರಾಗಿತ್ತು. ಮತ್ತೆ ಆಸ್ಪತ್ರೆಗೆ ಓಡಿದೆ. ಆದರೆ ಅದೇನೋ ನಂಬಿಕೆ, ಏನಾಗಿರುವುದಿಲ್ಲ ಬಿಡು ಎಂದು.

ಡಾಕ್ಟರ್ ಶ್ರೀನಾಥ್ ಅದನ್ನು ಪರೀಕ್ಷಿಸಿದ್ದೇ ತಡ ನಾಲ್ಕು ದಿನ ಕಳೆದ ನಂತರ ಮಾಡಿಸಬೇಕಿದ್ದ ಪೆಟ್ ಸ್ಕ್ಯಾನ್ ಅನ್ನು ಮರುದಿನವೇ ಮಾಡಿಸಲು ಹೇಳಿದರು.  ಮಾಡಿಸಿದೆ… ರಿಪೋರ್ಟ್‌ನಲ್ಲಿ ಅದು ಅನುಮಾನಾಸ್ಪದವಾಗಿದೆ ಎಂದು ಬಂತು. ಆಗಲೂ ಡಾಕ್ಟರ್‌ಗೆ ಆಶಾವಾದ ‘ಅದು ಟಿಬಿ ಇರಲೂಬಹುದು ತಾಳು ನೋಡೋಣ’ ಎಂದವರು ಬಯಾಪ್ಸಿ ಮಾಡಿಸಲು ಹೇಳಿದರು. ಬಯಾಪ್ಸಿಯ ರಿಪೋರ್ಟ್ ಬಂತು ಮತ್ತು ನಾನು ಪುನಃ ಕ್ಯಾನ್ಸರ್ ರೋಗಿಯೆಂಬುದು ಖಚಿತವಾಗಿತ್ತು.

ಮತ್ತೊಂದು ಬಾರಿ ಬಂದರೆ ಅದನ್ನು ಎದುರಿಸುವುದು ಅಸಾಧ್ಯ ಎಂದೆಣಿಸಿದ್ದೆನಲ್ಲ… ಈಗ ಆ ಘಳಿಗೆ ಬಂದೇ ಬಿಟ್ಟಾಗ ಅರೆಕ್ಷಣ ತಡಮಾಡದೆ ‘ಮುಂದೇನು ಡಾಕ್ಟರ್?’ ಎಂದು ಕೇಳಿದ್ದೆ!   ಮತ್ತೆ ಕೀಮೋ, ರೇಡಿಯೇಶನ್ ಎಲ್ಲದಕ್ಕೂ ಮನಸ್ಸು ಸಜ್ಜಾಯಿತು! ಆದರೆ ಡಾಕ್ಟರ್ ಶ್ರೀನಾಥ್ ‘ಕ್ಯಾನ್ಸರ್ ಎಲ್ಲಿಗೂ ಹರಡಿಲ್ಲ. ಹಾಗಾಗಿ ಬರೀ ರೇಡಿಯೇಶನ್ ಸಾಕು. ಕೀಮೋ ಅಗತ್ಯವಿಲ್ಲ’ ಅಂದರು. 

ಅಲ್ಲಿಂದ ಮತ್ತೆ ರೇಡಿಯೋಥೆರಪಿಸ್ಟ್ ಅವರ ಕಡೆಗೆ ಪಯಣ. ಮತ್ತೆ 33 ದಿನದ ರೇಡಿಯೇಶನ್‌ಗೆ ಮನಸ್ಸು ಸಿದ್ದವಾಗುವುದರಲ್ಲೇ ‘ಈಗ ಹೊಸ ರೀತಿಯ ರೇಡಿಯೇಶನ್ ಬಂದಿದೆ. ಕೇವಲ ೩ ರೇಡಿಯೇಶನ್, ದಿನ ಬಿಟ್ಟು ದಿನ ಮಾಡಿಸಿದರೆ ಸಾಕು’ ಅಂದರು! ಅಂದರೆ ಕೇವಲ ವಾರದಲ್ಲಿ ನನ್ನ ಚಿಕಿತ್ಸೆ ಮುಗಿದು ಹೋಗುತ್ತದೆಯಾ ಎಂದು ಬೆರಗಾಗಿದ್ದೆ! ಕ್ಯಾನ್ಸರ್ ಬಗ್ಗೆ ರಿಸರ್ಚ್ ಮಾಡಿ ಹೊಸ ಹೊಸ ಚಿಕಿತ್ಸೆ ಕಂಡು ಹಿಡಿಯುತ್ತಲೇ ಇರುವವರಿಗೆ ನಮಿಸಿದ್ದೆ. 

ನವೆಂಬರ್ 5ಕ್ಕೆ ಶುರುವಾದ ರೇಡಿಯೇಶನ್ 9ಕ್ಕೆ ಮುಗಿದೇಬಿಟ್ಟಿತ್ತು!

ಎಲ್ಲ ಮುಗಿದೇ ಹೋಯಿತಾ… ಇಷ್ಟೇ?! ಎಂದು ಸಂಭ್ರಮಿಸುವುದರಲ್ಲೇ ‘ತಾಳು ತಾಳು’ ಎಂದು ಮತ್ತೊಂದು ಅನಿರೀಕ್ಷಿತವನ್ನು ನನ್ನೆದುರು ಇಟ್ಟಿತ್ತು ಬದುಕು. ಮತ್ತೆ ಕ್ಯಾನ್ಸರ್ ಮರುಕಳಿಸದಂತೆ ತಡೆಯಲು ಹೊಸದೊಂದು Ramiven ಎನ್ನುವ ಔಷಧ ಬಂದಿದೆ. ಹಾರ್ಮೋನ್ ಮಾತ್ರೆಯ ಜೊತೆಗೆ ಹಣವಿದ್ದರೆ ಅದನ್ನೂ ತೆಗೆದುಕೊಳ್ಳಬಹುದು ಎಂದರು ಕೀಮೋಥೆರಪಿಸ್ಟ್ ಡಾಕ್ಟರ್ ಸಾಯಿ ವಿವೇಕ್. ಆಯ್ತು ಅದೂ ಒಂದು ತೆಗೆದುಕೊಂಡರಾಯಿತು ಎಂದುಕೊಂಡು ವಿಚಾರಿಸಿದರೆ ಅದಕ್ಕೆ ತಗಲುವ ವೆಚ್ಚ ತಿಂಗಳಿಗೆ 80 ಸಾವಿರ ಎಂದು ಗೊತ್ತಾದಾಗ ಮತ್ತೆ ಕಾಡಿತ್ತು ಅಧೀರತೆ. ಅಷ್ಟು ಹಣ… ಅಂದರೆ ವರ್ಷಕ್ಕೆ ಸುಮಾರು 10 ಲಕ್ಷ!  ಇಲ್ಲ ಬಿಡು ಇಷ್ಟು ಹಣ ಖರ್ಚು ಮಾಡಲು ಸಾಧ್ಯವಿಲ್ಲ… ಮುಂದಿನದನ್ನು ನನ್ನ ಅದೃಷ್ಟಕ್ಕೆ ವಹಿಸಿಬಿಡುವುದು ಎಂದು ತೀರ್ಮಾನಿಸಿದೆ. ಅಷ್ಟರಲ್ಲಿಯೇ ಡಾಕ್ಟರ್ ಸುಮಾರು 9 ತಿಂಗಳು ಕೊಂಡುಕೊಂಡರೆ ಆ ನಂತರ ಕಂಪನಿ ಅದನ್ನು ಉಚಿತವಾಗಿ ಕೊಡುತ್ತದೆ ಎಂದರು! ಕಾರ್ಮೋಡದಂಚಿನ ಬೆಳ್ಳಿ ರೇಖೆ ಸಾಕಷ್ಟು ನೆಮ್ಮದಿ ತಂದಿತ್ತು. ಅದಾದ ನಂತರ ಹೇಗೋ ಹಣ ಹೊಂದಿಸಿ ಮಾತ್ರೆ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿದೆ. ಮಾತ್ರೆ ತೆಗೆದುಕೊಳ್ಳಲಾರಂಭಿಸಿದಾಗ ಕೆಲವು ಅಡ್ಡ ಪರಿಣಾಮಗಳಾಗಬಹುದು ಎಂದರು ಡಾಕ್ಟರ್. ಮನಸ್ಸು ಅದಕ್ಕೂ ಸಿದ್ದವಾಗಿಬಿಟ್ಟಿತು! 

ಮಾತ್ರೆ ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಸಾಲಾಗಿ ಅಡ್ಡ ಪರಿಣಾಮಗಳು ಶುರುವಾದವು. ಮೊದಲಿಗೆ ಶುರುವಾಗಿದ್ದು ಬಾಯಿಹುಣ್ಣು. ಅದೆಷ್ಟು ಹೆಚ್ಚಾಯಿತೆಂದರೆ ನಾಲಿಗೆ ಕೊರಡಾಗಿ ರುಚಿಯೇ ತಿಳಿಯದಂತಾಯಿತು. ಜೊತೆಗೆ ಖಾರ ತಿಂದರೆ ನಾಲಿಗೆ ಬೆಂಕಿ. ಹಾಗಾಗಿ ಅದನ್ನೂ ತೊರೆದು ಬರಿಯ ಮೊಸರನ್ನ ತಿನ್ನಲಾರಂಭಿಸಿದೆ. ತರಕಾರಿ ಇಲ್ಲದೆ ಶಕ್ತಿಗುಂದಿತು. ಅಷ್ಟರಲ್ಲಿ ಲೂಸ್ ಮೋಷನ್ ಬೇರೆ ಶುರುವಾಯಿತು. ಟಾಯ್ಲೆಟ್‌ವರೆಗೆ ಹೋಗಲೂ ಸಮಯ ಕೊಡದ ಸ್ಥಿತಿ.‌ ಅದು ಮೊದಲಲ್ಲಿ ಅಸಹ್ಯವೆನ್ನಿಸಲು ಪ್ರಾರಂಭವಾಯಿತು. ಆದರೆ ಅದಕ್ಕೆಂದೇ ಒಂದು ಮಾತ್ರೆ ಕೊಟ್ಟಿದ್ದರು. ಅದನ್ನು ತೆಗೆದುಕೊಂಡರೆ ಒಂದು ಗಂಟೆಯಲ್ಲಿ ನಿಲ್ಲುತ್ತಿತ್ತು. ಆ ನಂತರ ಲೂಸ್ ಮೋಷನ್ನನ್ನು ಅವಮಾನವೆಂದೆಣಿಸದೆ ನಾರ್ಮಲ್ ಸ್ಥಿತಿ ಎಂದು ಪರಿಗಣಿಸಲಾರಂಭಿಸಿದೆ. ಅಷ್ಟರಲ್ಲಿ ಅಸಾಧ್ಯ ಮೈ ಕೈ ನೋವು ಶುರುವಾಯಿತು. ಇದು ಸಾಲದೆಂದು ಬಿಳಿ ರಕ್ತ ಕಣಗಳು ಎರಡು ಸಾವಿರಕ್ಕೆ ಇಳಿದವು. ಕೆಂಪು ರಕ್ತ ಕಣಗಳೂ ಇಳಿದವು. ಸುಸ್ತು ದೇಹವನ್ನು ಆವರಿಸಿತು. ಆ ಸಂಕಟದಲ್ಲಿಯೇ ಫಿಲ್ಮ್ ಫೆಸ್ಟಿವಲ್‌ಗೆ ಹೋಗಿ ಕೋವಿಡ್ ಅಂಟಿಸಿಕೊಂಡು  ಆಸ್ಪತ್ರೆಗೆ ಅಡ್ಮಿಟ್ ಆದೆ. ಇದೊಂದು ಬಾಕಿ ಇತ್ತು ಎಂದುಕೊಳ್ಳುವಾಗಲೇ Ramiven ಮಾತ್ರೆ ನಿಲ್ಲಿಸಿದರು. ಏಕೆಂದರೆ ಅದು ಬಿಳಿರಕ್ತ ಕಣಗಳನ್ನು ಮತ್ತಿಷ್ಟು ಇಳಿಸುತ್ತದೆ. ಅದು ನಿಲ್ಲಿಸಿದ ಮೂರು ದಿನದಲ್ಲಿ ನಾಲಿಗೆಯಲ್ಲಿ ಜೀವ ಸಂಚಾರ! ಈ ಕ್ಷಣವನ್ನು ಅನುಭವಿಸಿ ಬಿಡಬೇಕು ಎಂದು ತೀರ್ಮಾನಿಸಿ ಚೆನ್ನಾಗಿ ಖಾರದ ಚಟ್ನಿಯ ಜೊತೆ ಹೋಟೆಲ್‌ನ ಇಡ್ಲಿ ಮೆದ್ದೆ. 

ಆ ಸುಖ 15 ದಿನವಿತ್ತು. ಎಲ್ಲವನ್ನೂ ತಿಂದು ತೇಗುವುದರಲ್ಲೇ ಮತ್ತೆ ಮಾತ್ರೆ ಶುರುವಾಯಿತು… ಜೊತೆಗೆ ಬಾಯಿ ಹುಣ್ಣು ಕೂಡಾ. ಡಾಕ್ಟರ್ ಬಳಿ ಬಾಯಿಹುಣ್ಣು ಇನ್ನು ತಡೆಯಲು ಅಸಾಧ್ಯ ಎಂದಾಗ 150 ಮಿ.ಗ್ರಾಂ ಮಾತ್ರೆಯನ್ನು 100 ಮಿ.ಗ್ರಾಂಗೆ ಇಳಿಸಿದರು. ಆ ನಂತರ ಸ್ವಲ್ಪ ಊಟ ಸೇರಲಾರಂಭಿಸಿತು. ಆದರೆ ಹುಣ್ಣು ಹೋಯ್ತು ಮೈ ಕೈ ನೋವು, ದವಡೆ ನೋವು, ಅಸಾಧ್ಯ ಸುಸ್ತು, ಸಿಡಿಯುವ ತಲೆ ನೋವು ಬಂತು ಡುಂ ಡುಂ ಡುಂ! 10 ಹೆಜ್ಜೆ ನಡೆಯಲು ಆಗದ ಸ್ಥಿತಿ. ಮೆಟ್ಟಿಲೇರಿದರೆ ಏದುಸಿರು. ಹಲ್ಲು ಡಾಕ್ಟರ್, ಕಣ್ಣು ಡಾಕ್ಟರ್ ಎನ್ನುತ್ತ ಆಸ್ಪತ್ರೆ ಯಾತ್ರೆ ಮಾಡುತ್ತಲೇ 9 ತಿಂಗಳು ಕಳೆದು ಜುಲೈ ಬಂದಿತ್ತು ಮತ್ತು ನಾನು ಬೆಚ್ಚಿ ಬೆವರುತ್ತಿದ್ದ ಪೆಟ್ ಸ್ಕ್ಯಾನ್ ಘಳಿಗೆ ಎದುರಾಗಿತ್ತು! ಏನೆಲ್ಲ ನೋವಿನ ನಡುವೆಯೂ ಬದುಕಬೇಕೆನ್ನುವ ಆಸೆ…

ಪೆಟ್ ಸ್ಕ್ಯಾನ್ ರಿಪೋರ್ಟ್ ಹಿಡಿದು ಡಾಕ್ಟರ್ ಶ್ರೀನಾಥ್ ಎದುರು ಕುಳಿತಾಗ ಎದೆ ಸಣ್ಣಗೆ ನಡುಗುತ್ತಿತ್ತು. ರಿಪೋರ್ಟ್ ನೋಡುತ್ತಲೇ ಡಾಕ್ಟರ್ ‘ನೀನು ರಿಪೋರ್ಟ್ ಓದಿಲ್ಲ.. ಹೌದಲ್ಲ?’ ಎಂದರು. ‘ಹೌದು’ ಎಂದೆ. ‘ಈಗ ನೋಡಲೇಬೇಕು’ ಎಂದು ನಗಲಾರಂಭಿಸಿದರು. ‘ಭಯವಾಗತ್ತೆ’ ಅಂದೆ. ನನ್ನ ಮುಖದೆದುರು ರಿಪೋರ್ಟ್ ಹಿಡಿದು ‘ನೋಡು ಗಡ್ಡೆ ಕರಗಿದೆ’ ಎಂದರು! ಗಡ್ಡೆ ಕರಗಿತ್ತು… ನನ್ನೆದೆಯ ತುಂಬ ಆವರಿಸಿದ್ದ ಭಯವೂ! ಅದೆಂಥ ನಿರಾಳ ಭಾವ ದೇವರೇ…

ಒಮ್ಮೆ ಬದುಕುತ್ತೇನೆ ಅಂತಾದಾಗ ಮತ್ತೆ ಬದುಕನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು! ಕಾಲು ಕಿಲೋಮೀಟರ್ ನಡಿಗೆಯಿಂದ ಶುರುವಾಯಿತು ನನ್ನ ವಾಕ್. ಅಂದರೆ ಕಿಲೋಮೀಟರ್ ಒಂದಕ್ಕೆ ಹದಿನೈದೂವರೆ ನಿಮಿಷ! ಒಂಥರಾ ಹತಾಶ ಭಾವ. ಗಂಟೆಗೆ ಐದು ಕಿಲೋಮೀಟರ್ ನಡೆಯುತ್ತಿದ್ದವಳು ಈ ಪಾತಾಳಕ್ಕೆ ತಲುಪಿದ್ದೆ. ಹಾರ್ಮೋನ್ ಮಾತ್ರೆಯಿಂದ ದೇಹದ ತೂಕ ಬೇರೆ ಏರಲಾರಂಭಿಸಿತು. ಅದನ್ನು ಹೊತ್ತುಕೊಂಡೇ ನಡೆಯಲಾರಂಭಿಸಿದೆ. ನಡೆಯುತ್ತ ಹೋದಂತೆ ಬೆನ್ನು ನೋವು ಶುರುವಾಯಿತು. ಅದಕ್ಕೆ ಮತ್ತೆ ಮಾತ್ರೆ. ಅದನ್ನು ತೆಗೆದುಕೊಂಡೇ ನಡೆಯಲಾರಂಭಿಸಿದೆ. ಹಾಗೆ ಪ್ರಾರಂಭವಾದ ನಡಿಗೆ ಬರಬರುತ್ತ ಅರ್ಧ, ಒಂದು, ಎರಡು ಅನ್ನುತ್ತಾ ಏರಿ, ಈಗ 4 ಕಿಲೋಮೀಟರ್ ತಲುಪಿದೆ! ಕಿಲೋಮೀಟರ್‌ ದೂರವನ್ನು 13 ನಿಮಿಷದಲ್ಲಿ ನಡೆಯಲಾರಂಭಿಸಿದ್ದೇನೆ. ಇದೇನು ಕಡಿಮೆ ಸಂಭ್ರಮದ ವಿಷಯವಾ? ನೀವೇ ಹೇಳಿ! 

ಇಷ್ಟಾದ ನಂತರ ಬದುಕೆಂದರೆ ಬರೀ ಆರೋಗ್ಯ ಕಾಪಾಡಿಕೊಳ್ಳುತ್ತ ಬದುಕುವುದು ಮಾತ್ರವಲ್ಲ ಅಲ್ಲವಾ ಎನ್ನಿಸಲಾರಂಭಿಸಿತು. ಅದರಲ್ಲಿನ ಸೌಂದರ್ಯವನ್ನೂ ಅನುಭವಿಸದ ಮೇಲೆ ಅದೆಂಥ ಬದುಕು? ಹಾಗಾಗಿಯೇ ಬಹಳ ದಿನಗಳ ಬಯಕೆಯಾದ ಮೂಗು ಚುಚ್ಚಿಸಿಕೊಳ್ಳುವ ಹುಚ್ಚು ಶುರುವಾಯಿತು! ‘ಇರುವ ನೋವು ಸಾಲದಾ? ಇದೊಂದು ಬೇರೆ ಬೇಕಾ?’ ಎಂದರು ಹಲವರು. ‘ಹೂ ಬೇಕು’ ಅಂದೆ! ಮತ್ತೆ ಅದೊಂದು ಬಯಕೆ ಯಾಕೆ ಅಪೂರ್ಣವಾಗಿ ಉಳಿಯಬೇಕು ನೀವೇ ಹೇಳಿ! ಮುಂದಿನ ಜನ್ಮ ಇಲ್ಲವೆಂದು ನಂಬಿರುವ ನಾನು ಈ ಜನ್ಮದಲ್ಲೇ ಎಲ್ಲವನ್ನೂ ತೀರಿಸಿಕೊಳ್ಳಬೇಕಲ್ಲವಾ?!

ಇನ್ನು ಟ್ಯಾಟೂ ಹಾಕಿಸಿಕೊಳ್ಳುವ ಆಸೆಯೊಂದು ಬಹಳ ಕಾಲದಿಂದ ಹಾಗೇ ಉಳಿದಿದೆ. ಅದನ್ನೂ ಮಾಡಬೇಕು ಎಂದು ಫೇಸ್‌ಬುಕ್‌ನಲ್ಲಿ ಹಾಕಿದಾಗ ‘ಯಾಕೆ ಈ ನೋವು ಬೇರೆ? ಸುಮ್ಮನೆ ಸ್ಟಿಕ್ಕರ್ ಅಂಟಿಸಿಕೊಳ್ಳಬಾರದಾ?’ ಎಂದರು ಪ್ರೀತಿಪಾತ್ರರು. ಆದರೆ ಹಾಳು ಮನಸ್ಸು ಕೇಳಬೇಕಲ್ಲ! ಡಾಕ್ಟರ್ ಬಳಿ ಕೇಳಿ ನಿರ್ಧರಿಸುವೆ ಎಂದು ಹಾಕಿದೆ.

ಅವತ್ತು ರಾತ್ರಿ ಗೆಳತಿಯೊಬ್ಬಳ ಮೆಸೇಜ್ ‘ಟ್ಯಾಟೂ ಹಾಕಿಸಿಕೊಳ್ಳಬಹುದು ಕಣೇ, ನಾನೂ ಹಾಕಿಸಿಕೊಂಡಿದ್ದೀನಿ’ ಎಂದು… ಕಣ್ಣು ಹೊಡೆಯುವ ಎಮೋಜಿಯೊಡನೆ! 

‘ನೋವಾಗಿಲ್ವೆನೇ’ ಅಂದೆ. ‘ಆಯ್ತು. ಅದಕ್ಕೇನು ಮಾಡಕ್ಕಾಗತ್ತೆ? ಬರೀ ಟ್ಯಾಟೂ ಅಲ್ವೇ ಎಡಗಿವಿ ಮೂರು ಕಡೆ ಚುಚ್ಚಿಸಿಕೊಂಡೆ ಇವತ್ತು. ಎಡಗಡೆ ತಿರುಗಿ ಮಲಗಕ್ಕಾಗ್ತಿಲ್ಲ’ ಅಂದು ಹಲ್ಲುಕಿರಿವ ಎಮೋಜಿ ಹಾಕಿದಳು! ಇದರಲ್ಲಿ ವಿಶೇಷವೇನು ಅಂದಿರಾ… ಅವಳಿಗೂ ನನಗಾದ ಸಮಯದಲ್ಲೇ ಕ್ಯಾನ್ಸರ್ ಮರುಕಳಿಸಿತ್ತು! 

ಮರುದಿನ ಮತ್ತೊಬ್ಬಳು ಗೆಳತಿಯ ಮೆಸೇಜ್ ‘ಹೇ ನೀವು ಟ್ಯಾಟೂ ಅಂತ ಫೇಸ್‌ಬುಕ್‌‌ನಲ್ಲಿ ಹಾಕಿದ್ದು ನೋಡಿ ಅದೆಷ್ಟು ಖುಷಿಯಾಯ್ತು ಗೊತ್ತಾ! ನಾನೂ ಹಾಕಿಸಿಕೊಳ್ತಿದೀನಿ’ ಅಂತ! ಅವರಿಗೂ 10 ವರ್ಷದ ನಂತರ ಕ್ಯಾನ್ಸರ್ ಮರುಕಳಿಸಿದೆ. ಅವರೂ ದಿನಕ್ಕೆ ನಾನು ನುಂಗುವ ಮಾತ್ರೆಯನ್ನೇ ನುಂಗುತ್ತಾರೆ. ಅಸಾಧ್ಯ ಮೈಕೈ ನೋವು, ಸುಸ್ತು… ಅದರ ನಡುವೆಯೇ ಟೂರ್ ಹೋಗಿ ಬಂದೆ ಅಂದರು.

ಬದುಕಿನ ಮೋಹವೆಂದರೆ ಇದೇ…

***

ಇತ್ತೀಚೆಗೆ ಒಂದು ವೀಡಿಯೋ ನೋಡಿದೆ. ಅದರಲ್ಲಿ ಒಂದು ಹದ್ದು ಮೊಲವನ್ನು ಬೆನ್ನಟ್ಟುತ್ತದೆ. ಜೀವ ಪಣಕ್ಕಿಟ್ಟ ಮೊಲ ವೇಗವಾಗಿ ಓಡಲು ಪ್ರಾರಂಭಿಸುತ್ತದೆ.‌ ಎರಡೂ ಜೀವ ಪಣಕ್ಕಿಟ್ಟು ಓಡುತ್ತಿವೆ. ಒಮ್ಮೆಯಂತೂ ಇನ್ನೇನು ಹದ್ದು ತನ್ನ ಕಾಲುಗಳಲ್ಲಿ ಮೊಲವನ್ನು ಹಿಡಿದೇಬಿಟ್ಟಿತು ಎಂದಾಗ ಮೊಲಕ್ಕೂ ರೆಕ್ಕೆ ಮೂಡಿಬಿಟ್ಟಿತೇನೋ ಎಂದು ಭ್ರಮೆ ಮೂಡಿಸುವಷ್ಟು ಎತ್ತರಕ್ಕೆ ಹಾರಿ, ಹದ್ದನ್ನು ತಬ್ಬಿಬ್ಬಾಗಿಸಿ ಬಿಟ್ಟು ಮತ್ತೆ ಓಡಿ… ಓಡಿ… ಓಡುತ್ತಿರುವಾಗಲೇ ಪೊದೆಯೊಂದು ಸಿಗುತ್ತದೆ ಮತ್ತು ಮೊಲ ಮಿಂಚಿನಂತೆ ಅದರೊಳಗೆ ಮಾಯ! 

ಸಾವು ಬೆನ್ನತ್ತಿದಾಗ ನಮ್ಮಲ್ಲಿಯೂ ಥೇಟ್‌ ಅಂಥದ್ದೇ ಎದೆಗಾರಿಕೆ, ಅಂಥದ್ದೇ ಛಲ ಹುಟ್ಟಿಬಿಡುತ್ತದೆ. ಅಷ್ಟಕ್ಕೂ ಉಳಿಸಿಕೊಳ್ಳ ಬೇಕಿರುವುದು ಏನೇನೋ ಅಲ್ಲ…ನಮ್ಮ ಜೀವ! ಅದಕ್ಕೆ ಹೋರಾಡದೇ ಮತ್ತೆ ಇನ್ಯಾವುದಕ್ಕೆ ಹೋರಾಡಬೇಕು ನೀವೇ ಹೇಳಿ….!

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಭಾರತಿ ಬಿ ವಿ
ಲೇಖಕಿ, ಕವಯಿತ್ರಿ, ಅನುವಾದಕಿ.

You cannot copy content of this page

Exit mobile version