ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಾವು ತಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಪರಸ್ಪರ ಯುದ್ಧದಲ್ಲಿ ತೊಡಗಿರುವ ದೇಶಗಳೊಂದಿಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದು ಎರಡೂ ರಾಷ್ಟ್ರಗಳಿಗೆ ತಿಳಿಸಿದ್ದಾಗಿ ಅವರು ಹೇಳಿದರು.
ಓವಲ್ ಆಫೀಸ್‌ನಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಮಾತನಾಡಿ, “ನಾವು ಭಾರತ ಮತ್ತು ಪಾಕಿಸ್ತಾನವನ್ನು ಹೊಡೆದಾಡದಂತೆ ತಡೆದೆವು. ಅದು ಅಣು ವಿಪತ್ತಾಗಿ ಪರಿವರ್ತನೆಯಾಗುವ ಸಾಧ್ಯತೆಯಿತ್ತು” ಎಂದರು. ಎಲಾನ್ ಮಸ್ಕ್ ಅವರು ಟ್ರಂಪ್ ಆಡಳಿತದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಗವರ್ನ್‌ಮೆಂಟ್ ಎಫಿಷಿಯನ್ಸಿಯ ಮುಖ್ಯಸ್ಥರಾಗಿದ್ದರು.
ಟ್ರಂಪ್ ಮುಂದುವರಿದು, “ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ, ಹಾಗೂ ನನ್ನ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ವ್ಯಾಪಾರದ ಬಗ್ಗೆ ಮಾತನಾಡಿದೆವು ಮತ್ತು ‘ಪರಸ್ಪರರ ವಿರುದ್ಧ ಬಂದೂಕು ಬಳಸುತ್ತಿರುವವರು, ಅಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಇರುವವರೊಂದಿಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದೆವು. ಭಾರತ ಮತ್ತು ಪಾಕಿಸ್ತಾನದ ನಾಯಕರು ಶ್ರೇಷ್ಠರಾಗಿದ್ದು, ಅವರು ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಂಘರ್ಷವನ್ನು ನಿಲ್ಲಿಸಿದರು” ಎಂದರು.
ಜಮ್ಮು ಮತ್ತು ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯಾನಕ ಉಗ್ರ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಸುಮಾರು ಎರಡು ವಾರಗಳ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೂಲಸೌಕರ್ಯವನ್ನು ಗುರಿಯಾಗಿಸಿ ಆಪರೇಷನ್ ಸಿಂದೂರ್ ಪ್ರಾರಂಭಿಸಿತು.
ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಂಡವು.
ದೆಹಲಿಯ ಭಾರತ ಸರ್ಕಾರದ ಮೂಲಗಳು, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಆಪರೇಷನ್ಸ್ ಮಹಾನಿರ್ದೇಶಕರು (ಡಿಜಿಎಂಒ) ಮಾತುಕತೆ ಮೂಲಕ ಶಾಂತಿ ಒಪ್ಪಂದಕ್ಕೆ ಬಂದರು, ಇದರಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಟ್ರಂಪ್ ಪದೇ ಪದೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು “ಪರಿಹರಿಸಲು ಸಹಾಯ ಮಾಡಿದ್ದೇವೆ” ಎಂದು ಹೇಳಿಕೆ ನೀಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಈ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ʼಸಂಘರ್ಷವನ್ನು ನಿಲ್ಲಿಸಿದರೆ ಅಮೆರಿಕ ನಿಮ್ಮ ದೇಶಗಳ ಜೊತೆ ಹೆಚ್ಚಿನ ವ್ಯಾಪಾರ ಸಂಬಂಧ ಇರಿಸಿಕೊಳ್ಳುತ್ತದೆʼ ಎಂದು ಹೇಳುವ ಮೂಲಕ ತಾನು ಯುದ್ಧ ನಿಲ್ಲಿಸಿದ್ದಾಗಿ ಕೊಚ್ಚಿಕೊಳ್ಳುತ್ತಿದ್ದಾರೆ.