ಬೆಂಗಳೂರು: ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಅವಮಾನಿಸಿ, ಕ್ಷಮೆಯಾಚಿಸದೆ ಉದ್ಧಟತನ ತೋರುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರ ಸಿನೆಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕರ್ನಾಟಕ ರಕ್ಷಣ ವೇದಿಕೆ (ಕರವೇ) ಎಚ್ಚರಿಕೆ ನೀಡಿದೆ.
ಈ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, “ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿದೆ. ಕನ್ನಡ ಭಾಷೆಗೆ ತನ್ನದೇ ಆದ ಪುರಾತನ ಇತಿಹಾಸವಿದೆ. ಅದನ್ನು ಅರಿಯದೆ ಅವಮಾನಕರ ಹೇಳಿಕೆ ನೀಡಿ ಕನ್ನಡಿಗರಿಗೆ ನೋವುಂಟು ಮಾಡಿರುವುದು ಖಂಡನೀಯವಾಗಿದೆ.
ಕನ್ನಡ ಚಿತ್ರರಂಗದ ಕಲಾವಿದರು ಸಹ ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. ಕಮಲ್ ಹಾಸನ್ ತಕ್ಷಣವೇ ಕನ್ನಡಿಗರಿಂದ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಕಮಲ್ ಹಾಸನ್ ಕ್ಷಮೆ ಕೇಳದೆ ಉದ್ಧಟತನ ಮುಂದುವರಿಸಿದರೆ, ಅವರ ನಟನೆಯ ‘ಥಗ್ ಲೈಫ್’ ಸಿನೆಮಾವನ್ನು ರಾಜ್ಯದ ಯಾವ ಚಿತ್ರಮಂದಿರದಲ್ಲೂ ಬಿಡುಗಡೆಯಾಗಲು ಬಿಡುವುದಿಲ್ಲ.
ನಮ್ಮ ಮೇಲೆ ಎಷ್ಟೇ ಪ್ರಕರಣ ದಾಖಲಾದರೂ ಭಯವಿಲ್ಲ. ಕಮಲ್ ಹಾಸನ್ ತಮಿಳಿನ ದೊಡ್ಡ ನಟರಾಗಿದ್ದು, ಅವರ ಮೇಲೆ ನಮಗೆ ಅಪಾರ ಅಭಿಮಾನವಿತ್ತು. ಆದರೆ, ತಮಿಳರನ್ನು ಒಲೈಸಲು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ.
ಇತರ ಭಾಷೆಯ ಬಗ್ಗೆ ಮಾತನಾಡುವಾಗ ಕನಿಷ್ಠ ಜ್ಞಾನವಾದರೂ ಇರಬೇಕು. ಆ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರೂ ಇದ್ದರೂ, ಅವರು ಈ ಹೇಳಿಕೆಯನ್ನು ವಿರೋಧಿಸಿಲ್ಲ ಎಂಬುದು ನಿರಾಸೆ ತಂದಿದೆ” ಎಂದು ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿದರು.