ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹಾಗೂ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಜನರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಕರಾವಳಿ ಜನರ ಕಣ್ಣೀರನ್ನು ಒರೆಸುವ ಬದಲು, ಅವರ ಕಣ್ಣಲ್ಲಿ ರಕ್ತಕಣ್ಣೀರು ಸುರಿಸಲು ಸರ್ಕಾರ ಆತುರದಿಂದ ಕಾಯುತ್ತಿದೆ ಎಂದು ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಮಾಧ್ಯಮ ಹೇಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಅವರು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸತತ ಧಾರಾಕಾರ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಜನತೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ಆದರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದ್ದ ಕಾಂಗ್ರೆಸ್ ಸರ್ಕಾರ, ಕರಾವಳಿಯವರ ಕಷ್ಟವನ್ನು ನಿವಾರಿಸುವ ಬದಲು ಅವರ ಕಣ್ಣಲ್ಲಿ ರಕ್ತಕಣ್ಣೀರು ತರಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಮನೆಗಳು, ರಸ್ತೆಗಳು, ಸೇತುವೆಗಳು ಕುಸಿದುಬಿದ್ದಿವೆ. ನಗರ, ಪಟ್ಟಣ ಮತ್ತು ಗ್ರಾಮಗಳು ಜಲಾವೃತಗೊಂಡು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಜನರ ಬದುಕನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? “ಕೋಟೆ ಕೊಳ್ಳೆಯಾದ ಮೇಲೆ ಬಾಗಿಲು ಬಡಿದುಕೊಂಡರೆ ಏನು ಪ್ರಯೋಜನ?” ಎಂಬಂತೆ, ಜನರ ಬದುಕು ಮಳೆಗೆ ಕೊಚ್ಚಿಹೋದ ನಂತರ ಸಚಿವರಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದರೆ ಏನು ಫಲ? ಮಳೆಗಾಲ ಪ್ರಾರಂಭವಾಗುವ ಮೊದಲೇ ಏನು ಸಿದ್ಧತೆ ಮಾಡಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿಯ ಮಳೆ ಸಮಸ್ಯೆಯ ಬಗ್ಗೆ ಯಾವುದೇ ಕಾಳಜಿ ಇಲ್ಲವಾದರೂ, ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಅತಿಯಾದ ಗಮನವಿದೆ. ಕೊಲೆಗಳಲ್ಲಿ ಸಹ ರಾಜಕೀಯ ಲಾಭ ಪಡೆಯಲು ಸರ್ಕಾರ ಮುಂದಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.