ದೆಹಲಿ: ಭಾರತದಲ್ಲಿ ವಾಯು ಮಾಲಿನ್ಯವು ದಿನದಿಂದ ದಿನಕ್ಕೆ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ವಾಯು ಮಾಲಿನ್ಯದಿಂದಾಗಿ 2022ರಲ್ಲಿ ದೇಶದಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ದಿ ಲ್ಯಾನ್ಸೆಟ್’ ನ ಇತ್ತೀಚಿನ ವರದಿ ಹೇಳಿದೆ.
ಈ ಸಾವುಗಳಲ್ಲಿ ಅರ್ಧದಷ್ಟು ಸಾವುಗಳು ಕೇವಲ ಪಳೆಯುಳಿಕೆ ಇಂಧನಗಳನ್ನು (ಪೆಟ್ರೋಲ್, ಡೀಸೆಲ್) ಸುಡುವುದರಿಂದ ಸಂಭವಿಸಿವೆ ಎಂದು ವರದಿ ತಿಳಿಸಿದೆ.
ಕಳೆದ ಎರಡು ದಶಕಗಳಿಗೆ ಹೋಲಿಸಿದರೆ, ಅಧಿಕ ತಾಪಮಾನದಿಂದಾಗಿ ಸಂಭವಿಸುವ ಸಾವುಗಳು 300 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಸಿದ್ಧಪಡಿಸಲಾದ ‘ಲ್ಯಾನ್ಸೆಟ್ ಕೌಂಟ್‌ಡೌನ್ ಆನ್ ಹೆಲ್ತ್ ಅಂಡ್ ಕ್ಲೈಮೇಟ್ ಚೇಂಜ್-2022’ ವರದಿಯ ಪ್ರಕಾರ, PM 2.5 ಮಟ್ಟದ ಮಾಲಿನ್ಯದಿಂದಾಗಿ ಅತ್ಯಂತ ಸೂಕ್ಷ್ಮ ಧೂಳಿನ ಕಣಗಳು ಶ್ವಾಸಕೋಶದ ಒಳಭಾಗಗಳಿಗೆ ನುಗ್ಗುತ್ತಿವೆ. ಅನೇಕ ರೋಗಗಳಿಗೆ ಇದೇ ಮುಖ್ಯ ಕಾರಣವಾಗಿದೆ.
