ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಅನುಭವಿಸಿದ ಭಾರಿ ಸೋಲಿನ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗುರುವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಕಾಳಿಘಾಟ್‌ನಲ್ಲಿರುವ ಮಮತಾ ಅವರ ನಿವಾಸಕ್ಕೆ ಆಗಮಿಸಿದ ಅಖಿಲೇಶ್ ಅವರನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆತ್ಮೀಯವಾಗಿ ಬರಮಾಡಿಕೊಂಡರು. ಸೋಲಿನ ಆಘಾತದಲ್ಲಿರುವ ಮಮತಾ ಅವರಿಗೆ ಬೆಂಬಲ ಸೂಚಿಸುವುದು ಮತ್ತು ವಿರೋಧ ಪಕ್ಷಗಳ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.
ಚುನಾವಣಾ ಫಲಿತಾಂಶದ ನಂತರ ರಾಷ್ಟ್ರ ರಾಜಕಾರಣದಲ್ಲಿ ವಿರೋಧ ಪಕ್ಷಗಳು ತಮ್ಮ ತಂತ್ರಗಳನ್ನು ಬದಲಾಯಿಸಿಕೊಳ್ಳುತ್ತಿರುವ ಸಮಯದಲ್ಲಿ ಈ ಸಭೆ ನಡೆದಿದೆ. ಸೋಲಿನ ನಡುವೆಯೂ ‘ಇಂಡಿಯಾ’ (INDIA) ಒಕ್ಕೂಟವನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಮಮತಾ ಬ್ಯಾನರ್ಜಿ ಇದೇ ವೇಳೆ ಪ್ರತಿಜ್ಞೆ ಮಾಡಿದರು.
ಪಶ್ಚಿಮ ಬಂಗಾಳದ ಚುನಾವಣೋತ್ತರ ರಾಜಕೀಯ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಅನಿವಾರ್ಯ ಎಂದು ಅಖಿಲೇಶ್ ಯಾದವ್ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿಯ 15 ವರ್ಷಗಳ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿದೆ. ಮಮತಾ ನೇತೃತ್ವದ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದ್ದು, ಸೋಲಿನ ನಂತರವೂ ವಿರೋಧ ಪಕ್ಷದ ನಾಯಕರು ಮಮತಾ ಬೆನ್ನಿಗೆ ನಿಂತಿರುವುದು ಕುತೂಹಲ ಮೂಡಿಸಿದೆ.
