ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಗುರುವಾರ ಒಂದು ಮಹತ್ವದ ಅಧ್ಯಾಯ ಕೊನೆಗೊಂಡಿತು. 2026ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಿದ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ರಾಜ್ಯಪಾಲ ಆರ್.ಎನ್. ರವಿ ಸಂವಿಧಾನದ ಅಧಿಕಾರ ಬಳಸಿ ವಿಧಾನಸಭೆಯನ್ನು ಔಪಚಾರಿಕವಾಗಿ ವಿಸರ್ಜಿಸಿದರು.
ಭಾರತೀಯ ಜನತಾ ಪಕ್ಷವು 294 ಸ್ಥಾನಗಳ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿತು. ಒಂದು ಕಾಲದಲ್ಲಿ ಬಂಗಾಳದ ರಾಜಕೀಯ ಗಗನದಲ್ಲಿ ಅಬಾಧಿತವಾಗಿ ಮೆರೆದ ತೃಣಮೂಲ ಕಾಂಗ್ರೆಸ್ ಪಕ್ಷ ಕೇವಲ 80 ಸ್ಥಾನಗಳಿಗೆ ಕುಸಿಯಿತು. 2011ರಿಂದ ನಿರಾಳವಾಗಿ ಆಡಳಿತ ನಡೆಸುತ್ತಿದ್ದ ಟಿಎಂಸಿ ಪಕ್ಷದ 15 ವರ್ಷಗಳ ಅವಿಚ್ಛಿನ್ನ ಆಳ್ವಿಕೆಗೆ ಇದರಿಂದ ತೆರೆ ಬಿದ್ದಿತು.
ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮಮತಾ ಬ್ಯಾನರ್ಜಿ ಅವರು ಮಂಗಳವಾರ ತಮ್ಮ ಕಾಳಿಘಾಟ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, “ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಜನ ಮತ ಕೊಟ್ಟ ಕಾರಣದಿಂದ ನಾವು ಸೋತಿಲ್ಲ, ಷಡ್ಯಂತ್ರದಿಂದ ಸೋಲಿಸಲ್ಪಟ್ಟಿದ್ದೇವೆ” ಎಂದು ಪ್ರತಿಪಾದಿಸಿದರು.
ಮಮತಾ ಅವರ ಈ ನಿಲುವು ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿತು. ವಿಧಾನಸಭೆ ಅವಧಿ ಮೇ 7 ರಂದು ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳಲಿತ್ತಾದರೂ, ರಾಜ್ಯಪಾಲರು ಅದಕ್ಕೂ ಮೊದಲೇ ಭಾರತ ಸಂವಿಧಾನದ 174(2)(ಬಿ) ವಿಧಿ ಅನ್ವಯ ಕೋಲ್ಕತ್ತಾ ಗೆಜೆಟ್‌ನಲ್ಲಿ ಅಧಿಕೃತ ಅಧಿಸೂಚನೆ ಪ್ರಕಟಿಸಿ ವಿಧಾನಸಭೆ ವಿಸರ್ಜನೆ ಘೋಷಿಸಿದರು.
"ನಾನು ಸೋತಿಲ್ಲ, ಷಡ್ಯಂತ್ರದಿಂದ ಸೋಲಿಸಲ್ಪಟ್ಟಿದ್ದೇನೆ. ಲೋಕ ಭವನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ"
~ ಮಮತಾ ಬ್ಯಾನರ್ಜಿ, ಮಾಜಿ ಮುಖ್ಯಮಂತ್ರಿ
ಸಾಂವಿಧಾನಿಕ ತಜ್ಞರ ಪ್ರಕಾರ, ವಿಧಾನಸಭೆ ಅವಧಿ ಮುಗಿದ ನಂತರ ಮಮತಾ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವ ಕಾನೂನು ಅಧಿಕಾರವೂ ಉಳಿಯುವುದಿಲ್ಲ. ರಾಜ್ಯಪಾಲರ ಈ ಹೆಜ್ಜೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಾಂವಿಧಾನಿಕ ದಾರಿ ಸುಗಮ ಮಾಡಿದೆ.
ತೃಣಮೂಲ ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಈ ಕ್ರಮವನ್ನು ತೀಕ್ಷ್ಣವಾಗಿ ಖಂಡಿಸಿದ್ದು, ಸುಮಾರು 100 ಕ್ಷೇತ್ರಗಳ ಚುನಾವಣಾ ಫಲಿತಾಂಶಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದೆ. ಟಿಎಂಸಿ ವಕ್ತಾರ ಕುಣಾಲ್ ಘೋಷ್, ಮಮತಾ ಅವರ ರಾಜೀನಾಮೆ ನಿರಾಕರಣೆ “ಪ್ರತಿರೋಧದ ಸಾಂಕೇತಿಕ ಭಾಷೆ” ಎಂದು ಸಮರ್ಥಿಸಿದ್ದಾರೆ.
ಇದೇ ವೇಳೆ, ಚುನಾವಣಾ ನಂತರದ ಪ್ರಕ್ಷುಬ್ಧ ವಾತಾವರಣದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಮೂಡಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ನಿಕಟ ಸಹಾಯಕ ಚಂದ್ರನಾಥ ರಾಥ್ ಅವರನ್ನು ಕೊಲ್ಕತ್ತಾ ಸಮೀಪದ ಮಧ್ಯಮಗ್ರಾಮದ ಬಳಿ ದಾರಿ ಮಧ್ಯದಲ್ಲಿ ತಡೆದು ಗುಂಡಿಕ್ಕಿ ಕೊಲ್ಲಲಾಗಿದ್ದು, ಈ ಘಟನೆ ರಾಜ್ಯಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿದೆ.
ಬಿಜೆಪಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದು, ಸುವೇಂದು ಅಧಿಕಾರಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಊಹಾಪೋಹ ಹರಿದಾಡುತ್ತಿದೆಯಾದರೂ ಪಕ್ಷ ಅಧಿಕೃತ ಘೋಷಣೆ ಮಾಡಿಲ್ಲ.
