Home ಇನ್ನಷ್ಟು ಕೋರ್ಟು - ಕಾನೂನು ನರೇಗಾ ರಕ್ಷಣೆಗಾಗಿ ಸುಪ್ರೀಂ ಮೆಟ್ಟಿಲೇರಲು ರಾಜ್ಯದ ನಿರ್ಧಾರ: ಕೇಂದ್ರದ ವಿರುದ್ಧ ಕಾನೂನು ಸಮರಕ್ಕೆ ಕರ್ನಾಟಕ ಸಜ್ಜು

ನರೇಗಾ ರಕ್ಷಣೆಗಾಗಿ ಸುಪ್ರೀಂ ಮೆಟ್ಟಿಲೇರಲು ರಾಜ್ಯದ ನಿರ್ಧಾರ: ಕೇಂದ್ರದ ವಿರುದ್ಧ ಕಾನೂನು ಸಮರಕ್ಕೆ ಕರ್ನಾಟಕ ಸಜ್ಜು

0

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮುಂದುವರಿಕೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ ರೂಪಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಸಜ್ಜಾಗಿದೆ.

ಕೇಂದ್ರ ಸರ್ಕಾರವು ನರೇಗಾ ಬದಲಿಗೆ ಜಾರಿಗೆ ತಂದಿರುವ ‘ವಿಕಸಿತ ಭಾರತ-ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ ಗ್ಯಾರಂಟಿ’ (VB G RAM G) ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಈ ವಿಳಂಬ ನೀತಿಯು ಗ್ರಾಮೀಣ ಭಾಗದ ಜನರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ‘ಕೆಲಸದ ಹಕ್ಕನ್ನು’ ಕಿತ್ತುಕೊಂಡಂತಾಗಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, “ಈಗಾಗಲೇ ಮೇ ತಿಂಗಳು ಬಂದಿದ್ದರೂ ಕೇಂದ್ರವು ಹೊಸ ಯೋಜನೆಯ ಅಧಿಸೂಚನೆ ಹೊರಡಿಸಿಲ್ಲ. ಬದಲಿಗೆ, ನಯಾಪೈಸೆ ಹಣ ನೀಡದೆ ಹಳೆಯ ಕೆಲಸಗಳನ್ನೇ ಮುಂದುವರಿಸಿ ಎಂದು ಕೇವಲ ಸುತ್ತೋಲೆ ಕಳುಹಿಸಿ ಕೈತೊಳೆದುಕೊಂಡಿದೆ,” ಎಂದು ಕಿಡಿಕಾರಿದರು.

ಹಣಕಾಸಿನ ನೆರವಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನೀಡುವುದು ಅಸಾಧ್ಯ ಎಂಬ ನಿಲುವಿಗೆ ಬಂದಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಹಿತದೃಷ್ಟಿಯಿಂದ ನರೇಗಾ ಯೋಜನೆಯನ್ನೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಲಿದೆ. ಕೇಂದ್ರದ ಹೊಸ ಯೋಜನೆಯಲ್ಲಿ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಕಳೆದ ಡಿಸೆಂಬರ್ 2025 ರಲ್ಲಿ ಕೇಂದ್ರ ಸರ್ಕಾರವು ನರೇಗಾವನ್ನು ರದ್ದುಗೊಳಿಸಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ ಅದರ ಅನುಷ್ಠಾನದಲ್ಲಿನ ಗೊಂದಲಗಳು ಈಗ ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಗ್ರಾಮೀಣ ಕೂಲಿ ಕಾರ್ಮಿಕರ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದೆ.

You cannot copy content of this page

Exit mobile version