ದೆಹಲಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ದಲಿತ ಮತ್ತು ಬುಡಕಟ್ಟು ಮತದಾರರು ಬಿಜೆಪಿಯತ್ತ ವಾಲಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ವಿಶೇಷವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಪ್ರಮುಖ ಎಸ್‌ಸಿ (ಪರಿಶಿಷ್ಟ ಜಾತಿ) ಮತ್ತು ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರಗಳನ್ನು ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲೂ ಎನ್‌ಡಿಎ ಮೈತ್ರಿಕೂಟವು ಮೀಸಲು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಸ್ಸಾಂನಲ್ಲಿ ಒಟ್ಟು 9 ಎಸ್‌ಸಿ ಸ್ಥಾನಗಳ ಪೈಕಿ ಬಿಜೆಪಿ 5 ರಲ್ಲಿ ಜಯಗಳಿಸಿದ್ದರೆ, ಮೈತ್ರಿಕೂಟ ಒಟ್ಟು 8 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ 19 ಎಸ್‌ಟಿ ಕ್ಷೇತ್ರಗಳ ಪೈಕಿ ಬಿಜೆಪಿ 13 ರಲ್ಲಿ ಗೆದ್ದಿದ್ದು, ಮಿಕ್ಕ ಸ್ಥಾನಗಳು ಮಿತ್ರಪಕ್ಷಗಳ ಪಾಲಾಗಿವೆ. ಒಟ್ಟಾರೆಯಾಗಿ 19 ಎಸ್‌ಟಿ ಕ್ಷೇತ್ರಗಳೂ ಎನ್‌ಡಿಎ ಪಾಲಾಗಿವೆ.
ಅಸ್ಸಾಂನಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ (Delimitation) ಪ್ರಕ್ರಿಯೆಯು ಬಿಜೆಪಿಗೆ ವರದಾನವಾಗಿದೆ. ಎಸ್‌ಟಿ ಸ್ಥಾನಗಳು 16 ರಿಂದ 19 ಕ್ಕೆ ಮತ್ತು ಎಸ್‌ಸಿ ಸ್ಥಾನಗಳು 8 ರಿಂದ 9 ಕ್ಕೆ ಏರಿಕೆಯಾಗಿದ್ದು, ಬಾರ್ಪೇಟಾ, ಜಾಗಿರೋಡ್, ರಹಾ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಎಸ್‌ಟಿ ಕ್ಷೇತ್ರಗಳಾದ ಕೋಕ್ರಜಾರ್, ಮಜುಲಿ, ಹಾಫ್ಲಾಂಗ್‌ನಂತಹ ಪ್ರದೇಶಗಳಲ್ಲೂ ಕಮಲ ಅರಳಿದೆ.
ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಮೀಸಲು ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ರಾಜ್ಯದ ಒಟ್ಟು 68 ಎಸ್‌ಸಿ ಕ್ಷೇತ್ರಗಳ ಪೈಕಿ 51 ರಲ್ಲಿ (ಶೇ. 75) ಬಿಜೆಪಿ ಜಯಭೇರಿ ಬಾರಿಸಿದೆ. ಟಿಎಂಸಿ ಈ ಬಾರಿ ಎಸ್‌ಸಿ ಕ್ಷೇತ್ರಗಳಲ್ಲಿ ಕೇವಲ 17 ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿದೆ. ದಲಿತ ಸಮುದಾಯವು ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸಿರುವುದು ಈ ಫಲಿತಾಂಶದಿಂದ ದೃಢಪಟ್ಟಿದೆ.
ಇನ್ನು ಪಶ್ಚಿಮ ಬಂಗಾಳದ 16 ಎಸ್‌ಟಿ ಕ್ಷೇತ್ರಗಳ ಪೈಕಿ ಎಲ್ಲವನ್ನೂ ಬಿಜೆಪಿ ಗೆದ್ದುಕೊಂಡಿದೆ. ಉತ್ತರ ಬಂಗಾಳ ಮತ್ತು ಜಂಗಲ್‌ಮಹಲ್‌ನ ಬುಡಕಟ್ಟು ಪ್ರದೇಶಗಳಲ್ಲಿ ಶೇ. 100 ರಷ್ಟು ಎಸ್‌ಟಿ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದಿವೆ. ಒಟ್ಟಾರೆಯಾಗಿ ಬಂಗಾಳದ 84 ಮೀಸಲು ಕ್ಷೇತ್ರಗಳ ಪೈಕಿ 67 ರಲ್ಲಿ ಬಿಜೆಪಿ ಗೆದ್ದಿರುವುದು ವಿಶೇಷ. ಇಲ್ಲಿನ ‘ಮತುವಾ’ ಸಮುದಾಯವು ಏಕಪಕ್ಷೀಯವಾಗಿ ಬಿಜೆಪಿಯನ್ನು ಬೆಂಬಲಿಸಿರುವುದು ಫಲಿತಾಂಶದಲ್ಲಿ ಪ್ರತಿಫಲಿಸಿದೆ.
