ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದಿದ್ದು, ಸರ್ಕಾರ ರಚನೆಯ ಕಸರತ್ತು ಈಗ ರೆಸಾರ್ಟ್ ರಾಜಕಾರಣಕ್ಕೆ ನಾಂದಿ ಹಾಡಿದೆ. ಟಿ.ವಿ.ಕೆ (TVK) ಮುಖ್ಯಸ್ಥ ವಿಜಯ್ ಅವರು ಕಳೆದ ಎರಡು ದಿನಗಳಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಎರಡು ಬಾರಿ ಭೇಟಿಯಾದರಾದರೂ, ಸರ್ಕಾರ ರಚನೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಪತ್ರ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯಪಾಲರು ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ವಿಜಯ್ ಅವರ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಈ ನಡುವೆ, ಅಣ್ಣಾಡಿಎಂಕೆ (AIADMK) ಪಕ್ಷದ 28 ಶಾಸಕರು ಪುದುಚೇರಿಯ ಪೂರಂಕುಪ್ಪಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ತೆರಳಿರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.
ರೆಸಾರ್ಟ್ ಸೇರಿರುವ ಈ 28 ಶಾಸಕರು ಅಣ್ಣಾಡಿಎಂಕೆ ಹಿರಿಯ ನಾಯಕ ಸಿ.ವಿ. ಷಣ್ಮುಗಂ ಅವರ ಬೆಂಬಲಿಗರು ಎಂದು ತಿಳಿದುಬಂದಿದೆ. ವಿಶೇಷವೆಂದರೆ, ಷಣ್ಮುಗಂ ಅವರು ವಿಜಯ್ ನೇತೃತ್ವದ ಟಿ.ವಿ.ಕೆ ಸರ್ಕಾರಕ್ಕೆ ಬೆಂಬಲ ನೀಡಲು ಒಲವು ತೋರಿದ್ದಾರೆ ಎನ್ನಲಾಗಿದೆ. ಈಗಾಗಲೇ 107 ಸ್ಥಾನ ಗೆದ್ದಿರುವ ಟಿ.ವಿ.ಕೆ ಪಕ್ಷಕ್ಕೆ 5 ಮಂದಿ ಕಾಂಗ್ರೆಸ್ ಶಾಸಕರು ಬೆಂಬಲ ನೀಡಿದ್ದು, ಸಂಖ್ಯಾಬಲ 112ಕ್ಕೆ ಏರಿದೆ. ಮ್ಯಾಜಿಕ್ ಸಂಖ್ಯೆ 118 ತಲುಪಲು ಇನ್ನು ಕೇವಲ 6 ಶಾಸಕರ ಬೆಂಬಲದ ಅಗತ್ಯವಿದೆ.
ಈ ಕೊರತೆಯನ್ನು ನೀಗಿಸಲು ಟಿ.ವಿ.ಕೆ ಪಕ್ಷವು ಅಣ್ಣಾಡಿಎಂಕೆ ಶಾಸಕರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಚಿವ ಕೆ.ಎ. ಸೆಂಗೊಟ್ಟಯ್ಯನ್ ಅವರು ಈ ಸಂಧಾನದ ನೇತೃತ್ವ ವಹಿಸಿದ್ದು, ಸಿ.ವಿ. ಷಣ್ಮುಗಂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆಯ ಮೇಲೆ ಅಣ್ಣಾಡಿಎಂಕೆಯಲ್ಲಿ ಬಿರುಕು ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ವದಂತಿಗಳು ಹರಡಿವೆ.
ಆದರೆ, ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ಟಿ.ವಿ.ಕೆ ಪಕ್ಷಕ್ಕೆ ಬೆಂಬಲ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಷಣ್ಮುಗಂ ಮತ್ತು ಓ.ಎಸ್. ಮಣಿಯನ್ ಅವರು ಟಿ.ವಿ.ಕೆ ಜೊತೆ ಕೈಜೋಡಿಸಿದರೆ ಅಣ್ಣಾಡಿಎಂಕೆ ಪಕ್ಷ ಇಭ್ಭಾಗವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬಿಕ್ಕಟ್ಟಿನ ನಡುವೆ ವಿಜಯ್ ಅವರು ಕಾನೂನು ಸಲಹೆ ಪಡೆಯುತ್ತಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾರೆ.
