ಬಿಜೆಪಿ ಪಕ್ಷ ಸರ್ಕಾರದ ಕಡೆಯಿಂದ “ಹರ್ ಘರ್ ತಿರಂಗಾ” ಅಭಿಯಾನವನ್ನೇನೋ ಘೋಷಣೆ ಮಾಡಿದೆ. ಆದರೆ ಅದರಿಂದ ದೇಶದ ಮತ್ತು ರಾಷ್ಟ್ರಧ್ವಜಕ್ಕೆ ಆದ ತೀವ್ರವಾದ ಅವಮಾನದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಜನಾಕ್ರೋಷ ಸೃಷ್ಟಿಯಾಗಿದೆ. ಸರ್ಕಾರ ತನ್ನ ಸ್ವಾರ್ಥ ಸಾಧನೆಗೆ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದ ಬಗ್ಗೆ ಮತ್ತು ಸ್ವಾತಂತ್ರ್ಯ ಪೂರ್ವದಿಂದಲೂ ಬಂದಂತಹ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಕೊಟ್ಟ ಹೊಡೆತದ ಹಿನ್ನೆಲೆಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ಈ ಅಭಿಯಾನದ ಬಗ್ಗೆ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ.
ಇನ್ನು ಬಿಜೆಪಿ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಯಾರು ಬೇಕಾದರೂ ರಾಷ್ಟ್ರಧ್ವಜ ತಯಾರಿಸಬಹುದಾಗಿದೆ. ಆದರೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ. ಈಗಾಗಲೇ ಸುದ್ದಿ ಆದಂತೆ ಬಿಜೆಪಿ ಕಛೇರಿಗಳಿಂದಲೇ ವಿತರಣೆ ಆಗುತ್ತಿರುವ ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜ ತೀರಾ ಕಳಪೆ ಮಟ್ಟದ್ದಾಗಿದೆ. ದುರಂತದ ಸಂಗತಿ ಏನೆಂದರೆ ರಾಷ್ಟ್ರಧ್ವಜದ ಮೂಲ ಆಶಯಗಳೇ ಈ ಧ್ವಜಗಳಲ್ಲಿ ಇಲ್ಲವಾಗಿದೆ. ಒಂದು ನಿರ್ದಿಷ್ಟ ಅಳತೆ ತಗೆದುಕೊಳ್ಳದೇ ಅಡ್ಡಾದಿಡ್ಡಿಯಾಗಿ ಕತ್ತರಿಸಿದ, ಅಶೋಕ ಚಕ್ರವನ್ನು ಧ್ವಜದ ಸರಿಯಾದ ಜಾಗಕ್ಕೆ ಕೂರಿಸದ, ಮೂರು ಬಣ್ಣವನ್ನು ಕ್ರಮಬದ್ಧವಾಗಿ ಜೋಡಿಸದ ಧ್ವಜಗಳೇ ಈಗ ಎಲ್ಲೆಡೆ ವಿತರಣೆ ಆಗುತ್ತಿದೆ. ಒಟ್ಟಾರೆ ಬಿಜೆಪಿ ಪಕ್ಷ ಈಗ ವಿತರಿಸುತ್ತಿರುವ ಒಂದೊಂದು ಧ್ವಜ ಕೂಡಾ ಅದ್ವಾನಗಳ ಆಗರದಂತಿದೆ.
ಖಾದಿ ಗ್ರಾಮೋದ್ಯೋಗದ ಕೇಂದ್ರದಂತಿರುವ ಹುಬ್ಬಳ್ಳಿ ಧಾರವಾಡ ಭಾಗದ ಗರಗ ಗ್ರಾಮ ಮತ್ತು ಬೆಂಗೇರಿ ಗ್ರಾಮಗಳಲ್ಲಿಯೂ ಕೂಡ ಈ ಅಭಿಯಾನದ ಬಹಿಷ್ಕಾರಕ್ಕೆ ಕರೆ ಕೊಡಲಾಗಿದೆ. 1974 ರಿಂದ ಇಡೀ ದೇಶಕ್ಕೆ ಖಾದಿ ಬಟ್ಟೆಯ ತ್ರಿವರ್ಣ ಧ್ವಜ ವಿತರಿಸುತ್ತಿರುವ ಮಾನ್ಯತೆ ಹೊಂದಿರುವ ಏಕೈಕ ಕೇಂದ್ರ ಎಂದರೆ ಅದು ಧಾರವಾಡ ಜಿಲ್ಲೆಯ ಗರಗ ಗ್ರಾಮ ಮತ್ತು ಬೆಂಗೇರಿ ಗ್ರಾಮ. ಈ ಧ್ವಜಕ್ಕೆ ಬೇಕಾದ ಕೇಸರಿ, ಬಿಳಿ, ಹಸಿರು ಬಣ್ಣದ ನೂಲನ್ನು ಗರಗ ಗ್ರಾಮಸ್ಥರು ಸಿದ್ದಪಡಿಸಿದರೆ, ಬೆಂಗೇರಿ ಗ್ರಾಮದ ಮಂದಿ ಧ್ವಜ ಸಂಹಿತೆಯ ಅಡಿಯಲ್ಲಿ ಅಚ್ಚುಕಟ್ಟಾಗಿ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿ ದೇಶಕ್ಕೆ ಪೂರೈಕೆ ಮಾಡುತ್ತಿದೆ. ಈಗಾಗಲೇ ಇಲ್ಲಿಯವರೆಗೂ ಇಡೀ ದೇಶದ ಎಲ್ಲಾ ಕಡೆಗೂ ಹಾರಾಡುತ್ತಿರುವ ಖಾದಿ ರಾಷ್ಟ್ರಧ್ವಜಗಳ ಮೂಲ ಈ ಎರಡು ಗ್ರಾಮಗಳು. ಸಧ್ಯ ಧ್ವಜ ಸಂಹಿತೆಯ ತಿದ್ದುಪಡಿ ಹಿನ್ನೆಲೆಯಲ್ಲಿ ಈ ಗ್ರಾಮಗಳು ಅಭಿಯಾನ ಬಹಿಷ್ಕರಿಸಿರುವುದೂ ಸಹ ಸರ್ಕಾರಕ್ಕೆ ಮುಜುಗರದ ಸಂಗತಿಯಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರದ ಕಡೆಗೆ ವಿತರಿಸುವಂತೆ 10,000 ಮೀಟರ್ ರಾಷ್ಟ್ರಧ್ವಜ ಸಿದ್ಧಗೊಂಡಿದೆ. ಆದರೆ ಸರ್ಕಾರ ತಂದಿರುವ ಈ ತಿದ್ದುಪಡಿಯಿಂದ ತಯಾರಿಸಿದ ಧ್ವದಗಳನ್ನು ಯಾರೂ ಕೊಳ್ಳದಂತಾಗಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.