ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳವು ಪ್ರಕರಣದಲ್ಲಿ ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪಾತ್ರ ಸ್ಪಷ್ಟವಾಗಿ ದೃಢಪಟ್ಟಿದ್ದು, ಈ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಂಗಳೂರಿನ ಎಸಿಎಂಎಂ ಕೋರ್ಟ್‌ಗೆ ಸುಮಾರು 22,000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.
ಎಸ್‌ಐಟಿ ತನಿಖೆಯ ಪ್ರಕಾರ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಗುತ್ತೇದಾರ್, ಪಶ್ಚಿಮ ಬಂಗಾಳ ಮೂಲದ ಆದ್ಯ ಸೇರಿದಂತೆ ಒಟ್ಟು ಏಳು ಮಂದಿಯನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತ ಕಳವು ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ರಾಜ್ಯ ಸರ್ಕಾರ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿ ತನಿಖೆ ಕೈಗೊಂಡಿತ್ತು.
ಮತ ಕಳವು ಆರೋಪದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆಸಿದ್ದರು. ಎಸ್‌ಐಟಿ ಎಸ್ಪಿ ಶುಭಾನ್ವಿತಾ ನೇತೃತ್ವದ ತಂಡ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಗುತ್ತೇದಾರ್ ನಿವಾಸ ಹಾಗೂ ಸಿಎ ಕಚೇರಿಯ ಮೇಲೂ ಪರಿಶೀಲನೆ ನಡೆಸಿತ್ತು.
ಎಸ್‌ಐಟಿ ತನಿಖೆಯಲ್ಲಿ, ಆಳಂದ ಕ್ಷೇತ್ರದಲ್ಲಿ ಒಟ್ಟು 5,994 ಮತಗಳನ್ನು ಅಳಿಸಿ ಹಾಕಲು ಕಲಬುರಗಿಯ ಖಾಸಗಿ ಕಾಲ್‌ಸೆಂಟರ್ ಒಂದನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕಾರ್ಯಕ್ಕೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ ಗುತ್ತೇದಾರ್ ನೇರವಾಗಿ ಹಣ ಪಾವತಿಸಿದ್ದು, ಮತ ಕಳವಿನ ಪ್ರಮುಖ ಸಂಚುಕೋರರು ತಂದೆ–ಮಗನೇ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ತನಿಖೆಯಂತೆ, ಕಲಬುರಗಿ ನಗರದಲ್ಲಿ ಅಕ್ರಮ್ ಪಾಷ ಎಂಬಾತ ಕಾಲ್‌ಸೆಂಟರ್ ನಡೆಸುತ್ತಿದ್ದ. ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಾದ ಮತದಾರರ ವಿವರಗಳನ್ನು ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ ಪಾಷಗೆ ನೀಡಿದ್ದರು. ಪ್ರತಿ ಮತ ಡಿಲೀಟ್ ಅರ್ಜಿಗೆ 80 ರೂಪಾಯಿಗಳಂತೆ ಹಣ ಪಾವತಿಸಲಾಗಿದ್ದು, 2022ರ ಡಿಸೆಂಬರ್ ಮತ್ತು 2023ರ ಫೆಬ್ರವರಿ ತಿಂಗಳಲ್ಲಿ ಒಟ್ಟು 6,018 ಮತಗಳನ್ನು ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಈ ಅರ್ಜಿಗಳನ್ನು ಸ್ಥಳೀಯರ ಹೆಸರಿನಲ್ಲಿ ಅಕ್ರಮ್ ಪಾಷ, ಆತನ ಸೋದರ ಅಸ್ಲಾಂ ಪಾಷ ಹಾಗೂ ಸಂಬಂಧಿ ಮೊಹಮ್ಮದ್ ಅಶ್ಪಾಕ್ ಸಲ್ಲಿಸಿದ್ದರು. ಪ್ರತಿ ಅರ್ಜಿಗೆ 80 ರೂಪಾಯಿಗಳಂತೆ ಪಾಷ ತಂಡಕ್ಕೆ ಒಟ್ಟು ಸುಮಾರು 4.6 ಲಕ್ಷ ರೂಪಾಯಿ ಪಾವತಿಯಾಗಿತ್ತು. ಅಲ್ಲದೆ, ಪ್ರತೀ ಮತ ಡಿಲೀಟ್‌ಗೆ ಅಗತ್ಯವಿದ್ದ ಒಟಿಪಿ ಪಡೆಯಲು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಆದ್ಯಗೆ ತಲಾ ಒಟಿಪಿಗೆ 10 ರೂಪಾಯಿಗಳಂತೆ ಹಣ ನೀಡಲಾಗಿತ್ತು. ಈ ಸಂಬಂಧ ಆದ್ಯನನ್ನು ಎಸ್‌ಐಟಿ ಬಂಧಿಸಿತ್ತು.
ಈ ಪ್ರಕರಣದ ತನಿಖೆಗೆ ಚುನಾವಣಾ ಆಯೋಗ ಅಸಹಕಾರ ತೋರಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರೂ, ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಎಸ್‌ಐಟಿ ತನಿಖೆ ನಡೆಸಿ ಮತ ಕಳವು ಜಾಲವನ್ನು ಬಯಲಿಗೆಳೆದಿದೆ. ಬಂಧನ ಭೀತಿಯಿಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಮಕ್ಕಳು ನಿರೀಕ್ಷಣಾ ಜಾಮೀನು ಪಡೆದಿದ್ದು, ನಂತರ ಎಸ್‌ಐಟಿ ಅವರ ವಿಚಾರಣೆ ನಡೆಸಿದೆ.
ಈ ಆರೋಪಪಟ್ಟಿಯೊಂದಿಗೆ ದೇಶಾದ್ಯಂತ ಮತ ಕಳವು ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಮೊದಲ ಸ್ಪಷ್ಟ ಪುರಾವೆ ಸಿಕ್ಕಂತಾಗಿದ್ದು, ಇದೇ ತಿಂಗಳ 14ರಂದು ದೆಹಲಿಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಇದು ದೊಡ್ಡ ಅಸ್ತ್ರವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
