ಹೊಸ ದೆಹಲಿ: ಇಷ್ಟು ದಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ವಿದ್ಯಾರ್ಥಿಗಳು ತಾವು ಕಷ್ಟಪಟ್ಟು ಪಡೆದ ಜೆಇಇ (JEE) ರ‍್ಯಾಂಕ್ ಅನ್ನು ತಮ್ಮ ಸಾಧನೆಯ ಹೆಮ್ಮೆಯ ಗುರುತಾಗಿ ಭಾವಿಸುತ್ತಿದ್ದರು. ಆದರೆ ಇನ್ನು ಮುಂದೆ ಆ ರ‍್ಯಾಂಕ್‌ನ ಪ್ರಾಮುಖ್ಯತೆಯು ಕೇವಲ ಐಐಟಿ ಕಾಲೇಜುಗಳ ಪ್ರವೇಶದ ಗೇಟ್ ವರೆಗೆ ಮಾತ್ರ ಸೀಮಿತವಾಗುವ ಸಾಧ್ಯತೆಯಿದೆ.
ಏಕೆಂದರೆ, ಇನ್ನು ಮುಂದೆ ಕಾಲೇಜು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ (ಉದ್ಯೋಗ ಸಂದರ್ಶನ) ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಜೆಇಇ ರ‍್ಯಾಂಕ್‌ಗಳು, ಗೇಟ್ (GATE) ಸ್ಕೋರ್‌ಗಳು ಅಥವಾ ಪರ್ಸೆಂಟೈಲ್ ವಿವರಗಳನ್ನು ಪ್ರದರ್ಶಿಸಬಾರದು ಎಂದು ಆಲ್ ಐಐಟಿಸ್ ಪ್ಲೇಸ್‌ಮೆಂಟ್ ಕಮಿಟಿ (AIPC) ದೇಶದ ಎಲ್ಲಾ 23 ಐಐಟಿಗಳ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ವಿದ್ಯಾರ್ಥಿಗಳು ತಮ್ಮ ರೆಸ್ಯೂಮೆಗಳಲ್ಲಿ (Resume) ಜೆಇಇ ರ‍್ಯಾಂಕ್‌ಗಳ ವಿವರಗಳನ್ನು ಯಾವುದೇ ಕಾರಣಕ್ಕೂ ನಮೂದಿಸಬಾರದು ಎಂದು ತಿಳಿಸಿರುವುದು ಈಗ ಶೈಕ್ಷಣಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎಲ್ಲಾ 23 ಐಐಟಿಗಳ ಪ್ರತಿನಿಧಿಗಳ ಸಭೆಯಲ್ಲಿ ಎಐಪಿಸಿ ಈ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದೆ.
ಹಠಾತ್ತನೆ ಇಂತಹದೊಂದು ನಿರ್ಧಾರ ತೆಗೆದುಕೊಳ್ಳುವುದರ ಹಿಂದೆ ಬಲವಾದ ಮತ್ತು ತಾರ್ಕಿಕ ಕಾರಣಗಳಿವೆ ಎಂದು ಎಐಪಿಸಿ ಸಂಚಾಲಕ ಜಾನ್ ಜೋಸ್ ಬಹಿರಂಗಪಡಿಸಿದ್ದಾರೆ. ಐಐಟಿಗಳಲ್ಲಿ ಮೀಸಲಾತಿ (Reservation) ಮೂಲಕ ಸೀಟು ಪಡೆದ ವಿದ್ಯಾರ್ಥಿಗಳ ವಿರುದ್ಧ ಉದ್ಯೋಗದ ವೇಳೆ ನಡೆಯುವ ತಾರತಮ್ಯ ಮತ್ತು ವಿವರಕ್ಷತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಬರುವ ಹಲವು ಕಂಪನಿಗಳು ವಿದ್ಯಾರ್ಥಿಗಳ ಜೆಇಇ ರ‍್ಯಾಂಕ್‌ಗಳನ್ನು ಆಧರಿಸಿ ಅವರು ಮೀಸಲಾತಿಯಡಿ ಬಂದವರೇ ಅಥವಾ ಸಾಮಾನ್ಯ ವರ್ಗದವರೇ ಎಂಬುದನ್ನು ಪತ್ತೆಹಚ್ಚುತ್ತಿವೆ. ಆ ಮೂಲಕ ವಿದ್ಯಾರ್ಥಿಗಳ ನೈಜ ಕೌಶಲ್ಯ (Skills) ಮತ್ತು ಅವರ ಮಹತ್ವಾಕಾಂಕ್ಷೆಗಳನ್ನು ಕಡಿಮೆ ಅಂದಾಜು ಮಾಡುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರವೇಶ ಪರೀಕ್ಷೆ ಎಂಬುದು ಕೇವಲ ಒಂದು ನಿರ್ದಿಷ್ಟ ಸಮಯದ ಕಾರ್ಯಕ್ಷಮತೆಯನ್ನು ಮಾತ್ರ ಸೂಚಿಸುತ್ತದೆ, ಆದರೆ ಐಐಟಿಯ ನಾಲ್ಕು ವರ್ಷಗಳ ಶಿಕ್ಷಣವು ವಿದ್ಯಾರ್ಥಿಯ ನಿಜವಾದ ಕೌಶಲ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಐಐಟಿ ವ್ಯಾಸಂಗದ ಅವಧಿಯಲ್ಲಿ ಸಾಧಿಸಿದ ಶೈಕ್ಷಣಿಕ ಯಶಸ್ಸಿನ ಆಧಾರದ ಮೇಲೆ ಉದ್ಯೋಗಕ್ಕೆ ಆಯ್ಕೆಯಾಗಬೇಕೇ ಹೊರತು ಹಳೆಯ ಜೆಇಇ ರ‍್ಯಾಂಕ್‌ಗಳ ಆಧಾರದ ಮೇಲಲ್ಲ ಎಂದು ಜಾನ್ ಜೋಸ್ ಸ್ಪಷ್ಟಪಡಿಸಿದ್ದಾರೆ. ಆದರೆ, ಎಐಪಿಸಿಯ ಈ ಹೊಸ ನಿಯಮದ ಕುರಿತು ಐಐಟಿ ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ಸದ್ಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.
