ಹಾಸನ: ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಬಡವರು, ಕೂಲಿಕಾರರು, ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾನದ ಹಕ್ಕು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರ ಮತದಾನದ ಸಂವಿಧಾನಿಕ ಹಕ್ಕು ರಕ್ಷಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.
ಹಾಸನದ ಸ್ವಾಭಿಮಾನ ಭವನದಲ್ಲಿ ಜೂನ್ 18ರಂದು ನಡೆದ ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಆಧಾರದ ಮೇಲೆ ಸಲ್ಲಿಸಿರುವ ಮನವಿಯಲ್ಲಿ, ಚುನಾವಣಾ ಆಯೋಗ ಅನುಸರಿಸುತ್ತಿರುವ ಎಸ್‌ಐಆರ್ ವಿಧಾನವು ಮತದಾರರ ಮೇಲೆಯೇ ಪೌರತ್ವ ಸಾಬೀತುಪಡಿಸುವ ಹೊಣೆಗಾರಿಕೆಯನ್ನು ಹಾಕುತ್ತಿದೆ ಎಂದು ಆರೋಪಿಸಲಾಗಿದೆ. ಮ್ಯಾಚಿಂಗ್ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಅನೇಕ ಮತದಾರರು ಹೊರಗುಳಿಯುವ ಅಪಾಯವಿದೆ ಎಂದು ತಿಳಿಸಲಾಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ “ವಿಶೇಷ ತೀವ್ರ ಪರಿಷ್ಕರಣೆ”ಗೆ ಸ್ಪಷ್ಟ ಅವಕಾಶವಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿದೆ. ಮತದಾರರ ಪಟ್ಟಿಯಿಂದ ಮೃತರು, ನಕಲಿ ಹೆಸರುಗಳು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರನ್ನು ತೆಗೆಯುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ, ಅದರ ನೆಪದಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗಬಾರದು ಎಂದು ಮನವಿಯಲ್ಲಿ ಹೇಳಲಾಗಿದೆ. ಕರ್ನಾಟಕದಲ್ಲಿ “ತಾರ್ಕಿಕ ವ್ಯತ್ಯಾಸ” (Logical Discrepancies) ಮಾನದಂಡ ಅಳವಡಿಸಿರುವುದಕ್ಕೆ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಹೆಸರುಗಳ ಸ್ಪೆಲ್ಲಿಂಗ್ ವ್ಯತ್ಯಾಸ, ವಯಸ್ಸಿನ ಅಂತರ, ಅಂತರ್ಜಾತಿ ಹಾಗೂ ಅಂತರ್ಧರ್ಮೀಯ ವಿವಾಹಗಳಂತಹ ಕಾರಣಗಳಿಂದ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಎಚ್ಚರಿಸಿವೆ.
ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಏಳು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಬಾರದು, ಅಗತ್ಯ ದಾಖಲೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು, “ತಾರ್ಕಿಕ ವ್ಯತ್ಯಾಸ” ಮಾನದಂಡವನ್ನು ಕೈಬಿಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು, ಮತದಾರರ ಸೇವಾ ಕೇಂದ್ರಗಳನ್ನು ತೆರೆಯಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.
