ಕೋಲ್ಕತ್ತಾ/ನವದೆಹಲಿ, ಆಗಸ್ಟ್ 16: ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ 24 ಗಂಟೆಗಳ ಕಾಲ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ವೈದ್ಯಕೀಯ ಸೇವೆಗಳನ್ನು ರಾಷ್ಟ್ರವ್ಯಾಪಿ ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಘೋಷಿಸಿದೆ.
ಈ ಸಂದರ್ಭದಲ್ಲಿ ಐಎಂಎ ಐದು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದೆ. ಐಎಂಎ ಮುಖ್ಯಸ್ಥ ಡಾ.ಆರ್.ವಿ.ಅಶೋಕನ್ ದೇಶಾದ್ಯಂತ ಇರುವ ಆಸ್ಪತ್ರೆಗಳನ್ನು ವಿಮಾನ ನಿಲ್ದಾಣಗಳಂತೆ ‘ಸುರಕ್ಷಿತ ವಲಯ’ ಎಂದು ಘೋಷಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಮೇಲಿನ ದಾಳಿಯನ್ನು ತಡೆಯಲು ಕಠಿಣ ಕಾನೂನು ತರಬೇಕು. ಸಂತ್ರಸ್ತ ಕುಟುಂಬಕ್ಕೆ ಗೌರವಯುತ ಪರಿಹಾರ ನೀಡಬೇಕುಎಂದು ಆಗ್ರಹಿಸಿದ್ದಾರೆ. ವೈದ್ಯರ ಕೆಲಸದ ಸಮಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು IMA ಮತ್ತೊಂದು ಬೇಡಿಕೆಯನ್ನುಇಟ್ಟಿದೆ. ಹತ್ಯೆಗೀಡಾದ ವ್ಯಕ್ತಿ ಸತತ 36 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ಸರಿಯೇ? ಸಂಸ್ಥೆ ಕೇಳಿದೆ.
ಸರಕಾರಿ ಯಂತ್ರ ವಿಫಲವಾಗಿದೆ
ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯ ವಿಧ್ವಂಸಕ ಕೃತ್ಯವು ಖಂಡಿತವಾಗಿಯೂ ರಾಜ್ಯ ಸರ್ಕಾರಿ ಯಂತ್ರದ ವೈಫಲ್ಯ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ಪೀಠವು ಇದೇ ತಿಂಗಳ 21ರೊಳಗೆ ಆಸ್ಪತ್ರೆಯ ಸ್ಥಿತಿಗತಿ ಕುರಿತು ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸುವಂತೆ ಪೊಲೀಸರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಗೆ ಆದೇಶಿಸಿದೆ.
ಆಸ್ಪತ್ರೆಯಲ್ಲಿ ಸುಮಾರು 7 ಸಾವಿರ ಜನ ಸೇರುತ್ತಾರೆ ಎನ್ನುವುದರ ಕುರಿತು ಗುಪ್ತಚರ ಸಂಸ್ಥೆಗಳಿಂದ ಪೊಲೀಸರಿಗೆ ಮಾಹಿತಿ ಇಲ್ಲ ಎಂದರೆ ನಂಬುವುದು ಕಷ್ಟ ಎಂದು ಈ ಸಂದರ್ಭದಲ್ಲಿ ಕೋರ್ಟ್ ಪ್ರತಿಕ್ರಿಯಿಸಿತು.
“ಇದು ಸರ್ಕಾರಿ ಯಂತ್ರದ ಸಂಪೂರ್ಣ ವೈಫಲ್ಯ. ಪೊಲೀಸ್ ಪಡೆಗೆ ತನ್ನ ಸ್ವಂತ ಜನರನ್ನೂ ರಕ್ಷಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ಪೊಲೀಸರಿಗೆ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದೇ ಗಾಯಗೊಂಡರೆ, ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎಂದೇ ಅರ್ಥ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ.
ಬಿಜೆಪಿ ಮತ್ತು ಸಿಪಿಎಂ ಮಾಡಿದ್ದು: ಮಮತಾ
ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಆರ್‌ಜಿ ಕಾರ್ ಆಸ್ಪತ್ರೆಯನ್ನು ಬಿಜೆಪಿ ಮತ್ತು ಸಿಪಿಎಂ ಪಕ್ಷಗಳು ಧ್ವಂಸಗೊಳಿಸಿವೆ ಎಂದು ಆರೋಪಿಸಿದ್ದಾರೆ. ಸಾಕ್ಷ್ಯ ನಾಶಪಡಿಸಲು ವಿಪಕ್ಷಗಳು ಈ ರೀತಿ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.
ಕೋಲ್ಕತ್ತಾದಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಪ್ರಶಿಕ್ಷಣಾರ್ಥಿ ವೈದ್ಯೆಯ ಹತ್ಯೆಯ ಹಿಂದಿನ ಸತ್ಯಾಂಶ ಹೊರಬರಬೇಕು, ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಹತ್ಯೆ ಘಟನೆಯನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಗಳನ್ನು ನಡೆಸಿತು.