ಸಕಲೇಶಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯ ವಿರುದ್ಧವಾಗಿ, ಜುಲೈ 9 ರಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ (JCTU) ವತಿಯಿಂದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸಕಲೇಶಪುರದಲ್ಲೂ ಈ ಮುಷ್ಕರದ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಿಐಟಿಯು (CITU) ಪ್ರತಿನಿಧಿ ಸೌಮ್ಯ ತಿಳಿಸಿದ್ದಾರೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಉತ್ಪಾದನಾ ಘಟಕಗಳು, ಮಿಲಿಟರಿಗೆ ಅಗತ್ಯ ಪರಿಕರಗಳ ಕಾರ್ಖಾನೆಗಳು, ರೈಲ್ವೆ, ವಿಮಾನ, ಬಸ್ ಸೇವೆಗಳ ಖಾಸಗಿಕರಣದ ವಿರುದ್ಧ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ,” ಎಂದು ತಿಳಿಸಿದರು.
ಮೆರವಣಿಗೆ ಜುಲೈ 9 ರಂದು ಬೆಳಿಗ್ಗೆ 10.30ಕ್ಕೆ ಹೇಮಾವತಿ ಪ್ರತಿಮೆ ಮುಂಭಾಗದಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣದವರೆಗೆ ನಡೆಯಲಿದೆ.
ನಂತರ ಮಾತನಾಡಿದ ಸಿಐಟಿಯು ಪ್ರತಿನಿಧಿ ಹರೀಶ್ ಅವರು, “ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ಕೆಳಗೇರಿಸಿ ಕೇವಲ ನಾಲ್ಕು ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಕಾರ್ಮಿಕರ ಹಕ್ಕುಗಳಿಗೆ ಗಂಭೀರ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈತ, ಕೂಲಿ ಕಾರ್ಮಿಕರು, ಅಂಗನವಾಡಿ, ಗ್ರಾಮ ಪಂಚಾಯತ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ,” ಎಂದು ಹೇಳಿದರು.ಅವರು ಸಾರ್ವಜನಿಕರಿಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಥಾಮಸ್, ಎಂ. ಮಂಜು, ಸುಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.