Wednesday, June 19, 2024

ಸತ್ಯ | ನ್ಯಾಯ |ಧರ್ಮ

” ಅಳ್ಳಡ್ಲಿ”

ಅರಳಿನಿಂದ ಎಣ್ಣೆ ತೆಗೆದು ಉಳಿವ ತಿರುಳೇ ಅಳ್ಳಡ್ಲಿ.ಎಲ್ಲಾ ಜಾತಿ ಜನಾಗದವರು ಸೇರಿ ಮಾಡುವ ಒಂದು ಚೆಂದದ ಪ್ರಕ್ರಿಯೆ ಇದು. ಈ ಕೆಲಸ ಮುಗಿಯುವಾಗ ಬೇಸಾಯ, ಮಾರಿಜಾತ್ರೆ,ಕುಂತಿ ಗೌರಿ ಪರ್ವ ಹೀಗೆ ಬದುಕಿನಲ್ಲಿ ಹಾಸುಹೊಕ್ಕಿರುವ ಎಲ್ಲ ಸಂಗತಿಗಳನ್ನೂ ಪ್ರೀತಿಯಿಂದ ಎಲ್ಲರೂ ಮಾತಾಡಿ ಕೊಂಡಿರುತ್ತಾರೆ. ಇದೊಂದು ಬಯಲು ಸೀಮೆಯ ವಿಶೇಷ ಸಂಸ್ಕೃತಿ.

ಜೋಡು ತೂಬ್ರೆಮರದ ಅಡಿಯಲ್ಲಿ ಕುಂತ್ರೆ

ಸಾಲು ಬೇವಿನ ಮರದ ನೆರಳು

ಎಂದೋ ಆರಿಹೋದ ಬದುಕಿನ

ಹಸಿರು ನೆನೆದು ಹತ್ತೆಜ್ಜೆ ನಡೆದರೆ

ಸುಣ್ಣದ ಕಲ್ಲಿನ ಕಾಲುವೆಯಲ್ಲಿ

ಒಣಗಿದ ಹಾವಸೆಯ ಮೂಸುತ್ತ

ಇಂಗಿಹೋದ ಇತಿಹಾಸ ಕುರಮದ್ದಿನ ಬಂದೂಕದ ಸದ್ದಿನಲ್ಲಿ ಅಡಗಿ ಹೋಗಿದೆ…

ಮಗ್ಗುಲಲ್ಲೇ ಎಲೆ ಅಂಬು

ದ್ಯಾಮಣ್ಣ ಅಪ್ಪ ಕುರ್ಜ್ಗೆ ಹಿಡಿದು

ಬಳ್ಳಿಯ ಬೇರಿನೊಳಗೆ ಸಂಜೆಯ ತಂಪು ಕಂಡಿದ್ದು

ಅಮ್ಮ ಸೀಳಿಕೊಟ್ಟ ಪರಂಗಿ ಹಣ್ಣು ನರನಾಡಿಗಳಲ್ಲಿ ಕಸುವು

ಹೊಸಬಾವಿ ಕೆಂಪುತೊಳೆಯ ಹಲಸು ಮುಳ್ಜಾಜಿ ಹೂವು

ಕಲ್ಗುಟ್ಟೆಯ ಮೇಲೆ ಕಂಡ ಹಾವು

ಗದ್ದೆಯ ಬದಿನೊಳಗೆ ಒಳನುಗ್ಗಿದ ಜಮ್ನೇರ್ಳೆ ಬೇರು

ಎಲ್ಲವೂ ಬೆಳದಣ್ಣಿನೊಳಗಿನ

ಸವಿ ತಿರುಳ ಹುಣ್ಣಿಮೆ

ಅಪ್ಪ ಬೇಸಾಯ ಹೂಡಿದಾಗ

ಹೊಸಕೆರೆ ಓರಿ,ಓಬ್ಳೇಹಳ್ಳಿ ಓರಿ ಜೊತೆಗೆ ಹಾರದೆ

ನಡೆದ ಹದ್ದು ಬೇಸಾಯಕ್ಕೆ ಶಕುತಿ

ಈಗ ಎಲ್ಲವೂ ಸ್ಮೃತಿ ಜೀವಿಗಳು

ಬಾನಿಯಲ್ಲಿ ಉಗ್ಗಿದ ಮುಸುರೆ

ಪಡಸಾಲೆಗೆ ಬೆಸೆದ ಕೊಟ್ಸೊರ ಸೊರ ಮುಸುರೆ ಕುಡಿವ ಶಬುದ ಗಂಜು

ಸಗಣಿಯ ಗಮಲೇ ನಮಗೆಲ್ಲ ಸುಖನಿದ್ದೆ ಕೊಟ್ಟದ್ದು

‘ಗಳ’ ಕಟ್ಟಿ ದೊಡ್ಡಪ್ಪ ಅಪ್ಪ ತಂದು ನೇತುಬಿಟ್ಟ

ಉಳ್ಳಿಗೆಡ್ಡೆ ಬೆಳ್ಳುಳ್ಳಿ ನೋಡ್ತಾ ನೋಡ್ತಾ

ದೊಡ್ಡಮ್ಮ ಚಿಕ್ಮನೆಯಲ್ಲಿ ಕಟ್ಟಿದ ನೆಲುವಿನಲ್ಲಿದ್ದ ಆಜ್ಯದ ತೆಂಬ್ಗೆ

ಇಸ್ಕಲ್ಯಾಂಬ್ರಕ್ಕೆ ಬಿದ್ದು ಸವಿದ

ಸಾರು ನನ್ನೊಳಗೆ ಜೀವಬೆರಗು

ಆಗಾಗ ಹಾದಿಯುದ್ದಕ್ಕೂ ನಡೆದೂ ನಡೆದೂ

ಹತ್ತಿದ ಬೆಂಚ್ಮಲ್ಡಿ ಗುಡ್ಡದ ಬಾಧೆ ಹುಲ್ಲಿನ ಹಸಿರಿಗೆ ಬಲು ಸೊಬಗು……

ಕಾಮನಕಟ್ಟೆಯ ದಡದಲ್ಲಿ ಬೆಳೆದ ಬಂದ್ರೆಗಿಡಗಳು

 ಹಜಾರದ ಮುಂದಿನ ಬಲ್ಟಗಳಿಗೆ

ಇರುಸ್ಲು ಬಡಿದಂಗೆ ರಕ್ಷೆಯಾದವು ….

ಇಲ್ಲಿಯೇ ಅಕ್ಕಿಪಿಳ್ಳೆ ಸಂತಾನ ಬೆಳೆದು

ಕಲರವ. ಮಲ್ಲಿಗೆ ಅಂಟಿನ ಮಗ್ಗುಲಲ್ಲೇ ಇರುಳಿಡೀ  ಅಳ್ಳಡ್ಲಿ

ಕಲ್ಲೊಲೆಗೆ ಕೊಲ್ಡಾಕಿ ಉರಿಕೊಟ್ಟು ಹದವಾದ ಎಣ್ಣೆ ಮೂಡಿ

ಬಸಿಯುವಾಗ ಬೂತಪ್ಪನ ಒಟ್ಟಣ್ಣಿನ ಪೂಜೆಗೆ

ಹುಸೇನ್ ಸಾಬ್ರು ನಿಂತು ಕೈಮುಗಿದು ಮಕ್ಕಳು ಮರೀನೆಲ್ಲ ಅಡ್ಬೀಳ್ಸಿ

ಮಂದೆ ಕಾದಿದ್ದು ಮಂದಿರ ಮಸೀದಿ ಮಸೀದಿಯಾಚೆಗಿನ ಮೌನಬಕುತಿ….

ಕೇಸರಿಯ ಪಾವಕ ನಮಗೆಂದೂ ಕಂಡಿಲ್ಲ

ಬದುಕು ಅರಳುವ ಹೊತ್ತಿಗೆ

ಗೋವು ದೇವರಾಗದೆ ದುಡಿದು ಬೆಸೆದುಕೊಂಡಿದ್ದು

ಸನಾತನ ಪ್ರಜ್ಞೆಯಾಚೆಗಿನ ಶರಣರ ನಿಲುವಿನಲ್ಲಿ….

ಕಲ್ಯಾಣದಲ್ಲಿ ಬೆಳಕ ಬಯಲಾದ ಪರಿಣಯ

ಮರ್ಯಾದಾ ಹತ್ಯೆಯಾಗುವ ಕಾಲಕ್ಕೆ ಅಪ್ಪ ಅಮ್ಮ ದೊಡ್ಡಪ್ಪ ದೊಡ್ಡಮ್ಮ ಎಲ್ಲರೂ ತೇಲಿಸಿ ಬಸಿದ ಎಣ್ಣೆಯೊಳಗೆ “ತತಾಗಥ” ಕಂಡಿದ್ದಕ್ಕೆ ಚಿತ್ತ ಕೆಟ್ಟಿಲ್ಲ…

ಕಾಡ್ಮಲ್ಗೆ ಅಂಟಿನ ಸರದಲ್ಲಿ ಗಂಧ ತೇಲುವಾಗ,

ನವಿಲುಕೂಗೋ ಮಡುಗಲ್ಲಿ ಶವಗಳು…

ಹಟ್ಟಿಗೋದ ಗೌಡ ಸಖಿಯ ಜೊತೆಗೆ ಜೀವಬಿಟ್ಟ

ಕಲ್ಯಾಣ ಮಡುವಾಯ್ತು

ಲುಂಬಿನಿಯಲ್ಲಿ ಕೇಸರಿಯೊಳಗೆ ದರ್ಗವುರಿದು

ದರ್ಗದೊಳಗೆ ಹಸಿರು ಬಂದೂಕವಾಯ್ತು…..

ಏನೇನೋ ಆಗುತ್ತಿರುವ ಕಾಲವೀಗ

ಎಲ್ಲವನ್ನೂ ಧರ್ಮದೊಳಗಿಟ್ಟು ಹೂವೆಂದಿದೆ……. ಚರಿತ್ರೆಯ ಆತ್ಮದಲ್ಲಿ ತಥಾಗತನೋ,ಬಸವನೋ, ಪೈಗಂಬರನೋ ಕ್ರೈಸ್ತ ರಾಮನೋ ಜೊತೆಯಾಗೇ ಉಣ್ಣಲಿ

ಬಸಿದ ಎಣ್ಣೆಯಲ್ಲಿ ಶಿವನಾಗಿ ಕಂಡಿದ್ದು ಪೌರಕಾರ್ಮಿಕ….

ನನಗೀಗ ಶಿವನೇಮವೆಂದರೆ ಬಹುತ್ವ,

ಕೃಷ್ಣನೆಂದರೆ ರಾಧೆ ಕಂಡ ಯಮುನೆಯ ನಿಶ್ಯಬ್ದ…….

ಗೀತಾ ಎನ್ ಸ್ವಾಮಿ

ತಿಪಟೂರಿನ  ಕಲ್ಪತರು ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ.

Related Articles

ಇತ್ತೀಚಿನ ಸುದ್ದಿಗಳು