Home ಇನ್ನಷ್ಟು ಕೋರ್ಟು - ಕಾನೂನು ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

0

ಅಲಹಾಬಾದ್ ಹೈಕೋರ್ಟ್ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಜಾಗೊಳಿದೆ.

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯನ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಕೋರಿ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರು ಈ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು. ಪ್ರಯಾಗ್‌ರಾಜ್‌ನಲ್ಲಿ ದಾಖಲಾಗಿದ್ದ ಪೋಕ್ಸೋ (POCSO) ಪ್ರಕರಣವೊಂದರಲ್ಲಿ ಅವಿಮುಕ್ತೇಶ್ವರಾನಂದ ಅವರಿಗೆ ಹೈಕೋರ್ಟ್ ನಿರಾತಂಕ ಜಾಮೀನು (Anticipatory Bail) ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರು, ಒಂದು ವೇಳೆ ಆರೋಪಿತರು ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸುತ್ತಿದ್ದರೆ, ಅರ್ಜಿದಾರರು ನ್ಯಾಯಾಲಯ ನೀಡಿರುವ ನಿರಾತಂಕ ಜಾಮೀನನ್ನು ರದ್ದುಗೊಳಿಸುವಂತೆ (Cancellation of anticipatory bail) ಕೋರಿ ಅರ್ಜಿ ಸಲ್ಲಿಸಬಹುದೇ ಹೊರತು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಲಯದ ಆದೇಶವಿದ್ದಾಗ್ಯೂ ಅವಿಮುಕ್ತೇಶ್ವರಾನಂದ ಅವರು ಹಲವಾರು ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಿಂದನೆ ಅರ್ಜಿಯಲ್ಲಿ ದೂರಲಾಗಿತ್ತು. ಇದಕ್ಕೂ ಮುನ್ನ, ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ತದನಂತರ ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರನ್ನು ನಾಮನಿರ್ದೇಶನ ಮಾಡಿದ್ದರು.

You cannot copy content of this page

Exit mobile version