(ಗ್ಯಾಲರಿ ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ)
ಚಿತ್ರ ಕುರಿತು ವಿವರಣೆ: ತೊಗರಿಕಣಜ, ಬಿಸಿಲು ನಾಡು ಎಂದು ಕರೆದುಕೊಳ್ಳುವ ಕಲಬುರ್ಗಿ ಜಿಲ್ಲೆ ಎಂದರೆ ದಕ್ಷಿಣ ಕರ್ನಾಟಕದ ಬಹುತೇಕರಿಗೆ ಅಲರ್ಜಿ. ತಮ್ಮ ಮಾತನ್ನು ಪಾಳಿಸದ ಕೆಳಗಿನ ಅಧಿಕಾರಿಗಳಿಗೆ “ ನಿನ್ನನ್ನು ಗುಲಬರ್ಗಾಕ್ಕೆ ವರ್ಗಾ ಮಾಡ್ತೀನ್ ನೋಡು” ಎಂದು ಮೇಲಧಿಕಾರಿಗಳು ಹೆದರಿಸುವುದು ತೀರಾ ಮಾಮೂಲಿ. ಕಲಬುರ್ಗಿ ಉರ್ಫ್ ಗುಲ್ಬರ್ಗಾಕ್ಕೆ ಎರಡೇ ಕಾಲಗಳು ಒಂದು ಬಏಸಿಗೆ ಇನ್ನೋಂದು ಬಿರುಬೇಸಿಗೆ ಎಂದೂ ಇಲ್ಲಿನ ಹವಾಮಾನದ ಬಗ್ಗೆ ಹೇಳುವುದುಂಟು. ಇಂತಿಪ್ಪ ಕಲಬುರಗಿ ಜಿಲ್ಲೆಯ ಹಿಂದುಳಿದ ತಾಲೂಕು ಕಾಳಗಿ ಯ ಅತ್ಯಂತ ಹಿಂದುಳಿದಿರುವ “ಅಲ್ಲಾಪುರ” ವೆಂಬ ಮುಸ್ಲಿಂ ಹೆಸರಿನ ಗ್ರಾಮದ ಜನರ ದೈನಂದಿನ ಬದುಕಿನ ಚಿತ್ರಣವನ್ನು ಈ ಚಿತ್ರಗಳು ಹೇಳುತ್ತವೆ. ಹೆಚ್ಚಾಗಿ ಮಳೆಯನ್ನೇ ಆಶ್ರಯಿಸಿದ ಕೃಷಿ ಮತ್ತು ಕೂಲಿ ಕೆಲಸಕ್ಕಾಗಿ ಮಹರಾಷ್ಟ್ರದ ರತ್ನಗಿರಿ ಜಿಲ್ಲೆಗಳಿಗೆ ಗುಳೇ ಹೋಗುವ ಪರಿಪಾಠವಿರುವ ಈ ಹಳ್ಳಿಯಲ್ಲಿ ಉಳಿದು ತಣ್ಣಗೆ ಬದುಕು ಸವೆಸುವವರು, ಮತ್ತು ಬದುಕುಸಾಗಿಸುವವರು ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳು, ವಯಸ್ಸಾದ ಹೆಂಗಸರು ಹಾಗೂ ಮುದುಕರು ಮಾತ್ರ.
2011ರಜನಗಣತಿ ಪ್ರಕಾರ ಈ ಗ್ರಾಮದಲ್ಲಿ 121 ಮನೆಗಳಿದ್ದು ಜನಸಂಖ್ಯೆ 569. ಲಿಂಗಾಯತರ, ಹಿಂದುಳಿದ ವರ್ಗದವರ, ಪರಿಶಿಷ್ಟ ಜಾತಿಗಳ. ಲಂಬಾಣಿಗಳ ಹಾಗೂ ಮುಸ್ಲಿಮರ ಮನೆಗಳು ಒಂದಕ್ಕೊಂದು ಅಂಟಿಕೊಂಡೇ ಬಾಳುತ್ತಿವೆ. ಊರ ಮಧ್ಯದಲ್ಲಿ ಮಸೀದೀಯಿದ್ದು ಪಕ್ಕದಲ್ಲೇ ಹನುಮಪ್ಪನೂ ಒಂದು ಗುಡಿಯಲ್ಲಿ ಭಜಿಸಲ್ಪಡುತ್ತಾನೆ. ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಒಂದು ಪ್ರೈಮರಿ ಶಾಲೆಯಿದ್ದು ಪ್ರೌಢ ಶಿಕ್ಷಣಕ್ಕಾಗಿ ಇಲ್ಲಿಯ ಮಕ್ಕಳು ಹತ್ತು ಕಿಲೋಮೀಟರ್ ನಡೆದು ಕೂಡ್ಲಿ ಕ್ರಾಸಿನಲ್ಲಿ ಬಸ್ಸು ಹಿಡಿದು 35 ಕಿಮಿದೂರದ ಚಿಂಚೋಳಿಗೋ 15 ಕಿಮಿ ದೂರದ ಕಾಳಗಿಗೋ ಹೋಗಬೇಕಾಗಿದೆ.
ಇಂತಹ ಕಠಿಣ ಪರಿಸ್ಥಿತಿಯಲ್ಲೂ ಇಲ್ಲಿಯ ಜನರ ಜೀವನೊಲ್ಲಾಸ, ಸುತ್ತಲಿನ ಪರಿಸರ, ಬದುಕಿನ ವ್ಯವಹಾರಗಳು, ಇತ್ಯಾದಿಗಳನ್ನು ಹಿರಿಯ ರಂಗಕರ್ಮಿ ಮತ್ತು ಹವ್ಯಾಸಿ ಫೋಟೋಗ್ರಾಫರ್ ಆಗಿರುವ ಐವನ್ ಡಿ ಸಿಲ್ವಾ ಅವರು ಸೆರೆ ಹಿಡಿದಿರುವ ಚಿತ್ರಗಳು ತಮ್ಮಷ್ಟಕ್ಕೇ ಇಲ್ಲಿನ ಕತೆಗಳನ್ನು ಹೇಳುತ್ತವೆ.