ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ ಅಧಿಕಾರಿಗಳಿಗೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಹೇಲ್ ಸೇರಿದಂತೆ ಒಟ್ಟು ಆರು ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಣ ನೀಡಿ ಅಕ್ರಮವಾಗಿ ಪರೀಕ್ಷೆ ಬರೆದಿರುವುದಾಗಿ ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಒಂದು ಹುದ್ದೆಗೆ ₹40 ಲಕ್ಷ
ತನಿಖೆಯ ವೇಳೆ ನೇಮಕಾತಿ ಅಕ್ರಮದ ಹಿಂದೆ ಭಾರೀ ಹಣದ ವಹಿವಾಟು ನಡೆದಿರುವ ಆರೋಪ ಕೇಳಿಬಂದಿದೆ. ಒಂದು ಹುದ್ದೆಗೆ ಸುಮಾರು ₹40 ಲಕ್ಷದವರೆಗೆ ಡೀಲ್ ನಡೆದಿತ್ತು ಎಂದು ವಿಚಾರಣೆ ವೇಳೆ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಕಚೇರಿಯೊಂದರಲ್ಲಿ ವ್ಯವಹಾರ ನಡೆದಿದ್ದು, ವಾಟ್ಸಾಪ್ ಮೂಲಕ ಅಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಲಾಗುತ್ತಿತ್ತು. ಒಟ್ಟು ಮೊತ್ತದಲ್ಲಿ ಮುಂಗಡವಾಗಿ ₹20 ಲಕ್ಷ ಪಾವತಿಸಲಾಗಿತ್ತು ಎಂದು ಸಿಐಡಿ ವಿಚಾರಣೆ ವೇಳೆ ಸುಹೇಲ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪರೀಕ್ಷಾ ಕೇಂದ್ರಗಳ ಬದಲು ರೆಸಾರ್ಟ್‌ಗಳಲ್ಲಿ ಪರೀಕ್ಷೆ?
ಪ್ರಕರಣದ ತನಿಖೆಯಲ್ಲಿ ಮತ್ತೊಂದು ಗಂಭೀರ ಆರೋಪವೂ ಬೆಳಕಿಗೆ ಬಂದಿದೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಅಭ್ಯರ್ಥಿಗಳ ಕೈ ಸೇರಿತ್ತು ಎನ್ನಲಾಗಿದ್ದು, ನಂತರ ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಿಗೆ ಖಾಸಗಿ ಸ್ಥಳಗಳಲ್ಲಿ ಪರೀಕ್ಷೆ ಬರೆದಿರುವ ಆರೋಪ ಕೂಡಾ ಇದೆ.
ಬೆಂಗಳೂರಿನ ಖಾಸಗಿ ರೆಸಾರ್ಟ್, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ಕೆಲವು ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಸಿಐಡಿ ವಿಚಾರಣೆಯಲ್ಲಿ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಮಧ್ಯವರ್ತಿ ಬಸವರಾಜ್ ಕನ್ನಾಳೆ
ಈ ಅಕ್ರಮದ ಹಿಂದೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಹಲವು ವ್ಯಕ್ತಿಗಳ ಪಾತ್ರವಿರುವ ಶಂಕೆಯನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬಂಧಿತ ಅಭ್ಯರ್ಥಿಗಳ ಹೇಳಿಕೆಗಳ ಆಧಾರದ ಮೇಲೆ ಹಣದ ವಹಿವಾಟು, ಮಧ್ಯವರ್ತಿಗಳ ಸಂಪರ್ಕ ಹಾಗೂ ಅಕ್ರಮದ ಜಾಲದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಕುರಿತು ತನಿಖೆ ಮುಂದುವರಿದಿದೆ.
ಯಾರಿಗೆ ಎಷ್ಟು ಹಣ ನೀಡಲಾಗಿದೆ? ಹಣದ ವಹಿವಾಟು ಹೇಗೆ ನಡೆದಿದೆ? ಪ್ರಶ್ನೆಪತ್ರಿಕೆ ಅಭ್ಯರ್ಥಿಗಳಿಗೆ ಹೇಗೆ ತಲುಪಿತು? ರೆಸಾರ್ಟ್‌ಗಳಲ್ಲಿ ಪರೀಕ್ಷೆ ನಡೆಸಲು ಯಾರು ವ್ಯವಸ್ಥೆ ಮಾಡಿದರು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಿಐಡಿ ಅಧಿಕಾರಿಗಳು ತನಿಖೆಯನ್ನು ವಿಸ್ತರಿಸಿದ್ದಾರೆ.
ಸುಮಾರು 400 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ, ಅಕ್ರಮದ ಜಾಲ ಮತ್ತಷ್ಟು ವಿಸ್ತಾರವಾಗಿರುವ ಸಾಧ್ಯತೆಯನ್ನೂ ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
