ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ‘ಪುತ್ತೂರು ಚಲೋ’ ಪ್ರತಿಭಟನಾ ರ‍್ಯಾಲಿಯ ವೇಳೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿರುವ ಸಿಪಿಐ(ಎಂ) ಮುಖಂಡ ಮುನೀರ್ ಕಾಟಿಪಳ್ಳ, ತಪ್ಪಿತಸ್ಥರು ಹಾಗೂ ರ‍್ಯಾಲಿಯ ಸಂಘಟಕರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪುತ್ತೂರಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳು ಆಯೋಜಿಸಿದ್ದ ‘ಪುತ್ತೂರು ಚಲೋ’ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾತ್ಮಕ ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕವಾಗಿ ಇಂತಹ ದ್ವೇಷಪೂರಿತ ಘೋಷಣೆಗಳನ್ನು ಕೂಗುವುದು ಜಿಲ್ಲೆಯ ಶಾಂತಿ ಮತ್ತು ಸಾಮರಸ್ಯಕ್ಕೆ ಗಂಭೀರ ಧಕ್ಕೆ ತರುತ್ತದೆ ಎಂದು ಮುನೀರ್ ಕಾಟಿಪಳ್ಳ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಂತಿ ಭಂಗ ತರಲು ಯತ್ನಿಸಿದವರು ಹಾಗೂ ಇಂತಹ ಕೃತ್ಯಗಳಿಗೆ ಅವಕಾಶ ಮಾಡಿಕೊಟ್ಟ ಸಂಘಟಕರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
