ಕಲಬುರಗಿ: ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸಾರ್ವಜನಿಕವಾಗಿ ಒಂದು ಸಣ್ಣ ಸಾಕ್ಷ್ಯವನ್ನಾದರೂ ಒದಗಿಸಿದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರಿಗೆ ದೆಹಲಿಯಲ್ಲಿ ಯಾವುದೇ ಕೆಲಸವಿಲ್ಲ, ಕರ್ನಾಟಕಕ್ಕೆ ಅವರ ಕೊಡುಗೆಯೂ ಶೂನ್ಯ. ಕೇವಲ ಹಿಟ್ ಆಂಡ್ ರನ್ ರಾಜಕಾರಣ ಮಾಡುತ್ತಾ ಈಗಾಗಲೇ ಮೂರು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದರೂ ಒಂದೇ ಒಂದು ದಾಖಲೆ ಅಥವಾ ಕಾಗದದ ಚೂರನ್ನು ಬಿಡುಗಡೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಮಾಜಿ ಮುಖ್ಯಮಂತ್ರಿಯಾಗಿ ಅವರು ಇನ್ನಾದರೂ ಜವಾಬ್ದಾರಿಯುತವಾಗಿ ಮಾತನಾಡಲಿ” ಎಂದು ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ, “ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದು, ಮಧ್ಯವರ್ತಿಗಳು ಮತ್ತು ಬಿಜೆಪಿ ನಾಯಕರ ನಂಟೀಗ ಬಯಲಾಗಿದೆ. ಬಿಜೆಪಿ ಆಡಳಿತದ ಭ್ರಷ್ಟಾಚಾರದಿಂದಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ. ಪಾದಯಾತ್ರೆ ನಡೆಸುವ ಮೊದಲು ಬಿಜೆಪಿ ನಾಯಕರು ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ಈ ಬಗ್ಗೆ ಸ್ಪಷ್ಟನೆ ನೀಡಲಿ” ಎಂದು ಆಗ್ರಹಿಸಿದರು.
