54 ಕೋಟಿ ಸರ್ಕಾರಿ ಜಮೀನು ಕಬಳಿಕೆ ಆರೋಪ -ಬಾಲಕೃಷ್ಣ ವಿರುದ್ಧ ತನಿಖೆಗೆ ಆಗ್ರಹ

ಬೆಂಗಳೂರು: ರಾಜ್ಯದ ಪೌರಾಡಳಿತ ಸಚಿವ ಎಚ್. ಸಿ. ಬಾಲಕೃಷ್ಣ (HC Balakrishna) ಮತ್ತು ಅವರ ಧರ್ಮಪತ್ನಿ ಶ್ರೀಮತಿ ರಾಧಾ ಬಾಲಕೃಷ್ಣ ಅವರು ಸುಮಾರು 54 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ (Corruption) ಎಂದು ಜಿಬಿಎ ಮಾಜಿ ಆಡಳಿತ ಪಕ್ಷದ ನಾಯಕ ಎನ್. ಆರ್. ರಮೇಶ್ (NR Ramesh) ಗಂಭೀರ ಆರೋಪ ಮಾಡಿದ್ದಾರೆ. ಈ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಅವರ ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ತನಿಖೆ ನಡೆಸಲು ತನಿಖೆಗೆ ಅನುಮತಿ ನೀಡಬೇಕೆಂದು ಅವರು ಗೌರವಾನ್ವಿತ ರಾಜ್ಯಪಾಲರಿಗೆ (Governor) ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 158 ರಲ್ಲಿರುವ ಸುಮಾರು 8 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಹಡಪ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನರಸಿಂಹಯ್ಯ, ಗಂಗೂಬಾಯಿ, ನಾಗಮ್ಮ ಮತ್ತು ನೀಲಮ್ಮ ಎಂಬುವವರ ಹೆಸರಿಗೆ ಈ ಭೂಮಿ ಸರ್ಕಾರದಿಂದ ಮಂಜೂರಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಹೊಸದಾಗಿ ಸರ್ವೆ ಸಂಖ್ಯೆ 233, 234, 235 ಮತ್ತು 236 ಎಂದು ಕಾನೂನುಬಾಹಿರವಾಗಿ ಪೋಡಿ ಮಾಡಿಸಲಾಗಿತ್ತು.

ಬಿಕರಿಯಾದ ಈ 8 ಎಕರೆ ಜಮೀನನ್ನು ಕೆಂಗೇರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 2025ರ ಏಪ್ರಿಲ್ 3 ಮತ್ತು ಮೇ 15 ರಂದು ಸಚಿವ ಎಚ್. ಸಿ. ಬಾಲಕೃಷ್ಣ ಅವರ ಪತ್ನಿ ರಾಧಾ ಬಾಲಕೃಷ್ಣ ಅವರ ಹೆಸರಿಗೆ ಕ್ರಯ ಪತ್ರ (ಸೇಲ್ ಡೀಡ್) ಮಾಡಿಸಿಕೊಳ್ಳಲಾಗಿದೆ. ತಮ್ಮ ರಾಜಕೀಯ ಪ್ರಭಾವ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಚಿವರು ಈ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ತಮ್ಮ ಕುಟುಂಬದ ಹೆಸರಿಗೆ ಸೇರಿಸಿಕೊಂಡಿದ್ದಾರೆ ಎಂದು ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

2006 ರಲ್ಲೇ ಸಲ್ಲಿಕೆಯಾದ ಪ್ರಸಿದ್ಧ ‘ಎ. ಟಿ. ರಾಮಸ್ವಾಮಿ ಆಯೋಗ’ದ ವರದಿಯಲ್ಲೂ ಕುರುಬರಹಳ್ಳಿ ಗ್ರಾಮದ ಈ ಸರ್ವೆ ಸಂಖ್ಯೆಯ ಜಮೀನು ‘ಸರ್ಕಾರಿ ಗೋಮಾಳ’ ಎಂದೇ ಸ್ಪಷ್ಟವಾಗಿ ನಮೂದಾಗಿದೆ. ಹೀಗಿದ್ದರೂ, ಭ್ರಷ್ಟ ಅಧಿಕಾರಿಗಳ ಸಾಥ್‌ನಿಂದ ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ.

ಈ ಜಮೀನು ಕಬಳಿಕೆಯಲ್ಲಿ ಭಾಗಿಯಾಗಿರುವ ಸಚಿವ ಎಚ್. ಸಿ. ಬಾಲಕೃಷ್ಣ, ಅವರ ಧರ್ಮಪತ್ನಿ ರಾಧಾ ಬಾಲಕೃಷ್ಣ ಹಾಗೂ ಇದಕ್ಕೆ ಸಹಕರಿಸಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ. ಇದೀಗ ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಸಚಿವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರ ಅನುಮತಿ ಕೋರಲಾಗಿದ್ದು, ಶೀಘ್ರದಲ್ಲೇ ‘ಜನಪ್ರತಿನಿಧಿಗಳ ನ್ಯಾಯಾಲಯ’ದಲ್ಲೂ (ವಿಶೇಷ ನ್ಯಾಯಾಲಯ) ಖಾಸಗಿ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು