ಬೆಂಗಳೂರು: ಮಹಿಳೆಯ ದೇಹದ ಆಕಾರ, ದೈಹಿಕ ನೋಟ ಅಥವಾ ಬಾಡಿ ಶೇಮಿಂಗ್ ಕುರಿತು ಮಾಡಿರುವ ಅವಹೇಳನಕಾರಿ ಟೀಕೆಗಳನ್ನು ಆಧರಿಸಿ ಮಾತ್ರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509ರಡಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ಇಬ್ಬರು ಮಹಿಳೆಯರ ವಿರುದ್ಧ ನಡೆಯುತ್ತಿದ್ದ ಕ್ರಿಮಿನಲ್ ವಿಚಾರಣೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು ಈ ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
2023ರ ಆಗಸ್ಟ್ನಲ್ಲಿ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ದೂರುದಾರರು ಹಾಗೂ ಅವರ ಸ್ನೇಹಿತರನ್ನು ಆರೋಪಿಗಳು ದೈಹಿಕ ನೋಟದ ವಿಚಾರದಲ್ಲಿ ಅವಹೇಳನ ಮಾಡಿದ್ದಾರೆ. ಫ್ಯಾಟ್ ಶೇಮಿಂಗ್, ಬಾಡಿ ಶೇಮಿಂಗ್ ಜತೆಗೆ ಜನಾಂಗೀಯ ಹಾಗೂ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪ್ರಕರಣದಲ್ಲಿದ್ದ ಇಬ್ಬರು ಮಹಿಳೆಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ಇದೇ ಪ್ರಕರಣದಲ್ಲಿ ಮೂರನೇ ಆರೋಪಿಯ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ಈ ಹಿಂದೆ ರದ್ದುಗೊಳಿಸಿರುವ ಅಂಶವನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ದಾಖಲೆ ಪರಿಶೀಲಿಸಿದ ನ್ಯಾಯಾಲಯ
ದೂರು, ಆರೋಪಪಟ್ಟಿ ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಐಪಿಸಿ ಸೆಕ್ಷನ್ 509ರಡಿ ಅಪರಾಧವಾಗಲು ಅಗತ್ಯವಿರುವ ಕಾನೂನುಬದ್ಧ ಅಂಶಗಳು ಪ್ರಕರಣದ ದಾಖಲೆಗಳಲ್ಲಿ ಸ್ಪಷ್ಟವಾಗಿ ಕಂಡುಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆಯ ದೈಹಿಕ ನೋಟದ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಲಾಗಿದೆ ಎಂಬ ಆರೋಪವೊಂದೇ ಸೆಕ್ಷನ್ 509ರಡಿ ಅಪರಾಧವನ್ನು ರೂಪಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಗತ್ಯ ಕಾನೂನು ಅಂಶಗಳು ದಾಖಲೆಗಳಲ್ಲಿ ಕಾಣಿಸದ ಹಿನ್ನೆಲೆಯಲ್ಲಿ, ಅರ್ಜಿದಾರರ ವಿರುದ್ಧದ ಮುಂದಿನ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ತಿಳಿಸಿದ ನ್ಯಾಯಾಲಯ, ಇಬ್ಬರು ಮಹಿಳೆಯರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
