ಇಲ್ಲಿಯವರೆಗೂ ಹೆಜ್ಜೆ ಹೆಜ್ಜೆಗೂ ಬಿಜೆಪಿ ಪಕ್ಷದ ಅಣತಿಯಂತೇ ನಡೆಯುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊರೆ ಹೋಗಿದ್ದಾರೆ. ಆ ಮೂಲಕ ಹೊಸ ದೋಸ್ತಿಗೆ ಚನ್ನಪಟ್ಟಣದಲ್ಲಿ ಎಳ್ಳು ನೀರು ಬಿಡುವ ಮೂಲಕ ತಮ್ಮ ಸ್ವತಂತ್ರ ಸ್ಪರ್ಧೆಯ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ.
ಯೋಗೇಶ್ವರ್ ಈಗಾಗಲೇ ನಾನೇ ಮೈತ್ರಿ ಅಭ್ಯರ್ಥಿ ಎಂದು ಪತ್ರಿಕಾಗೋಷ್ಠಿಯೂ ನಡೆಸಿ, ಕುಮಾರಸ್ವಾಮಿಯವರೇ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆ ಪತ್ರಿಕಾಗೋಷ್ಠಿ ಹಿಂದೆ, ‘ಮಾತು ತಪ್ಪುತ್ತಿರುವ ಕುಮಾರಸ್ವಾಮಿ, ಮಾತಿಗೆ ತಪ್ಪದೇ ನಡೆಯಿರಿ’ ಎಂಬ ಸಂದೇಶ ಯೋಗೇಶ್ವರ್ ಕೊಟ್ಟಂತಿತ್ತು. ಯೋಗೇಶ್ವರ್ ಅದೊಂದು ಪತ್ರಿಕಾಗೋಷ್ಠಿ ಮೂಲಕ ಕುಮಾರಸ್ವಾಮಿಯವರಿಗೆ ಪರೋಕ್ಷವಾಗಿ ಕರೆ ನೀಡಿ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರು ಗ್ರಾಮಾಂತರ ಸಂಸದ ಸಿಎನ್ ಮಂಜುನಾಥ್ ಗೆಲುವಿನ ಹಿಂದೆ ತನ್ನದೂ ಪಾಲಿದೆ ಎಂಬುದನ್ನು ನೆನಪಿಸಿದ್ದಾರೆ.
ಯೋಗೇಶ್ವರ್ ಪತ್ರಿಕಾಗೋಷ್ಠಿಗೂ ಮೊದಲು ದೇವೇಗೌಡರ ಕುಟುಂಬ ಅನಸೂಯಾ ಮಂಜುನಾಥ್ ಅವರೇ ಚನ್ನಪಟ್ಟಣ ಅಭ್ಯರ್ಥಿ ಎಂದು ಗಟ್ಟಿ ನಿರ್ಧಾರ ಮಾಡಿತ್ತು ಎಂದು ಜೆಡಿಎಸ್ ಮೂಲಗಳಿಂದಲೇ ತಿಳಿದು ಬಂದಿದೆ. ಆದರೆ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಂಡು ಚನ್ನಪಟ್ಟಣ ಉಪಚುನಾವಣೆಗೂ ಅದನ್ನು ಮುಂದುವರೆಯಲು ಕರೆ ಕೊಟ್ಟ ನಂತರ ಸಂಸದ ಡಾ.ಮಂಜುನಾಥ್ ಅವರು, ಅನಸೂಯಾ ಯಾವ ಕಾರಣಕ್ಕೂ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಆದರೆ ಅನಸೂಯಾ ಮಂಜುನಾಥ್ ಅವರು ‘ಸೂಪರ್ ಎಂಪಿ’ಯಂತೆ ಇಡೀ ಗ್ರಾಮಾಂತರ ಕ್ಷೇತ್ರದಲ್ಲೇ ಅದರಲ್ಲೂ ವಿಶೇಷವಾಗಿ ಚನ್ನಪಟ್ಟಣದಲ್ಲೇ ಠೀಕಾಣಿ ಹೂಡಿದ್ದಾರೆ.
ಈ ನಡುವೆ ಕುಮಾರಸ್ವಾಮಿ ಕೂಡ ಚನ್ನಪಟ್ಟಣದಲ್ಲಿ ಮಗನ ಸ್ಪರ್ಧೆಗೆ ತರಾತುರಿಯ ತಯಾರಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಕೊಡುವ ಬಗ್ಗೆ ಕುಮಾರಸ್ವಾಮಿಗೆ ಸುತಾರಾಂ ಒಪ್ಪಿಗೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ತನ್ನ ಅಭಿಪ್ರಾಯವನ್ನು ಕಾರ್ಯಕರ್ತರ ತಲೆಗೆ ಕಟ್ಟಿ ಮಗ ನಿಖಿಲ್ ನನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕುಟುಂಬ ಸಮೇತರಾಗಿ ಕೇಂದ್ರ ಗೃಹ ಸಚಿವ ಅಮಿತ ಶಾ, ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷದ ಸ್ಪರ್ಧೆಯಿಂದಲೇ ಚನ್ನಪಟ್ಟಣ ಚುನಾವಣೆಗೆ ಹಸಿರು ನಿಶಾನೆ ಪಡೆದೇ ಬಂದಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಲೋಕಸಭೆ ಚುನಾವಣೆಯ ಸೋಲಿನ ನಂತರ ಚನ್ನಪಟ್ಟಣ ಕಾರ್ಯಕರ್ತರಿಂದ ಕ್ಷೇತ್ರದಲ್ಲಿ ನಿಲ್ಲಲು ಒತ್ತಡ ಬಂದ ನಂತರ ಡಿಕೆ ಸುರೇಶ್ ಯಾವುದೇ ಕಾರಣಕ್ಕೂ ತಾನು ಸ್ಪರ್ಧೆ ಮಾಡುವುದಿಲ್ಲ ಎಂಬ ಸಂದೇಶ ಕೊಟ್ಟರೂ “ಅಚ್ಚರಿಯ ಅಭ್ಯರ್ಥಿ”ಯ ಬಗ್ಗೆ ಕುತೂಹಲ ಮೂಡಿಸಿದ್ದರು. ಅದಾಗಿ ಒಂದೇ ದಿನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸ್ವತಃ ನಾನೇ ಅಭ್ಯರ್ಥಿ ಎಂಬಂತೆ ಅಖಾಡಕ್ಕಿಳಿದಿದ್ದರು. ಆದರೆ ಕಾಂಗ್ರೆಸ್ ಈವರೆಗೆ ಆ ಅಭ್ಯರ್ಥಿ ಯಾರು ಎಂಬ ಗೌಪ್ಯತೆ ಕಾಪಾಡಿಕೊಂಡೇ ಬಂದಿದೆ.
ಗಮನಿಸಬೇಕಾದ ವಿಚಾರ ಎಂದರೆ ಬಿಜೆಪಿ ಮೈತ್ರಿ ಅಭ್ಯರ್ಥಿಯೇ ಚನ್ನಪಟ್ಟಣದಲ್ಲಿ ನಿಲ್ಲಬೇಕು, ಅದೂ ಜೆಡಿಎಸ್ ಪಕ್ಷಕ್ಕೇ ಅಭ್ಯರ್ಥಿ ಆಯ್ಕೆಯ ಪರಮಾಧಿಕಾರ ನೀಡಿದರೆ ಯೋಗೇಶ್ವರ್ ಗೆ ಇತ್ತ ಬಿಜೆಪಿ ಬಾಗಿಲೂ ಮುಚ್ಚಿದಂತಾಗಲಿದೆ. ಚನ್ನಪಟ್ಟಣವೇ ಯೋಗೇಶ್ವರ್ ತವರು ಕ್ಷೇತ್ರವಾದರೂ ಪಕ್ಷೇತರ ನಿಂತು ಗೆಲ್ಲಲು ಹರಸಾಹಸ ಪಡಬೇಕಾದ ಸಂದರ್ಭ ಎದುರು ನೋಡಲಿದ್ದಾರೆ ಎಂದೇ ಚನ್ನಪಟ್ಟಣ ಮಂದಿ ಮಾತಾಡಿಕೊಂಡಿದ್ದಾರೆ.
ಈ ನಡುವೆ ಯೋಗೇಶ್ವರ್ ಗೆ ಬಿಜೆಪಿ ಟಿಕೆಟ್ ನೀಡದೇ ಹೋದರೆ ಅವರ ಮುಂದಿನ ನಡೆಯ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಸ್ವತಂತ್ರ ಸ್ಪರ್ಧೆಯ ಬಗ್ಗೆ ಆಲೋಚಿಸಿದರೂ ಗೆಲ್ಲುವುದು ಕಷ್ಟವೇ ಎಂಬ ಮಾತಿನ ನಡುವೆ, ಯೋಗೇಶ್ವರ್ ಗೆ ಇರುವ ಎರಡು ಆಯ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷ ಎಂಬುದು ಸ್ಪಷ್ಟ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯೋಗೇಶ್ವರ್ ಬಂದರೂ ಅವರ ಪರವಾಗಿ ಕೆಲಸ ಮಾಡಬೇಕು ಎಂಬ ಕರೆ ಕುಮಾರಸ್ವಾಮಿ ನೀಡಿದ್ದಾರೆ. ಆದರೆ ಬಿಜೆಪಿ ನಾಯಕನೊಬ್ಬ ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡೋದು ಬಿಜೆಪಿಯಂತಹ ದೊಡ್ಡ ಪಕ್ಷದಲ್ಲಿ ಗುರುತಿಸಿಕೊಂಡ ಯೋಗೇಶ್ವರ್ ಗೆ ಮುಜುಗರದ ಸಂಗತಿಯೇ ಸರಿ. ಹೀಗಿರುವಾಗ ಕಾಂಗ್ರೆಸ್ ಕೂಡ ಯೋಗೇಶ್ವರ್ ಗೆ ಪರೋಕ್ಷ ಆಹ್ವಾನ ನೀಡಿದೆ ಎನ್ನಲಾಗಿದೆ.
ಯೋಗೇಶ್ವರ್ ಗೆ ಕಾಂಗ್ರೆಸ್ ಪಕ್ಷ ಹೊಸತೇನೂ ಅಲ್ಲ. ಈ ಹಿಂದೆ ಕಾಂಗ್ರೆಸ್ ಒಳಗೆ ಹೋಗಿ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ಎಲ್ಲಾ ನಾಯಕರ ನಿಕಟ ಸಂಪರ್ಕವೂ ಯೋಗೇಶ್ವರ್ ಗೆ ಇದೆ. ಅಷ್ಟೇ ಅಲ್ಲದೇ ಪಕ್ಷ ಭೇದ ಹೊರತುಪಡಿಸಿ ಡಿಕೆ ಬ್ರದರ್ಸ್ ನಡುವೆ ಅಂತಹ ಯಾವುದೇ ವಯಕ್ತಿಕ ದ್ವೇಷವೂ ಇವರ ನಡುವೆ ಇಲ್ಲ ಎಂಬುದು ಗಮನಾರ್ಹ.
ಬಹುಶಃ ಯೋಗೇಶ್ವರ್ ಇನ್ನೊಂದು ವಾರದ ಗಡುವಿನ ನಂತರ ಚನ್ನಪಟ್ಟಣದ ಸ್ಪರ್ಧೆಯ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವರೆಂಬ ಬಗ್ಗೆ ಯೋಗೇಶ್ವರ್ ಆಪ್ತ ಮೂಲಗಳು ತಿಳಿಸಿವೆ. ಪಕ್ಷದ ದೃಷ್ಟಿಯಿಂದ ನೋಡಿದರೆ ಜೆಡಿಎಸ್ ಸೇರ್ಪಡೆಯ ಹಿಂದೆ ಕುಮಾರಸ್ವಾಮಿಯ ಹಠಮಾರಿತನ ಯೋಗೇಶ್ವರ್ ಗೆ ಇರಿಸು ಮುರಿಸು ತಂದಿದೆ. ಹೀಗಿರುವಾಗ ಯೋಗೇಶ್ವರ್ ಸ್ವತಂತ್ರ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಹಾಕುವುದೇ ಎಂಬ ಪ್ರಶ್ನೆ ಕೂಡ ಚನ್ನಪಟ್ಟಣದ ಬಿಸಿ ಚರ್ಚೆಯ ವಸ್ತುವಾಗಿದೆ.
ಒಟ್ಟಾರೆ ಯೋಗೇಶ್ವರ್ ಗೆ ಇತ್ತ ಬಿಜೆಪಿ ನಾಯಕರಿಂದಲೇ ಅನ್ಯಾಯವಾಗಿ, ಅತ್ತ ಜೆಡಿಎಸ್ ಹಠಮಾರಿತನವೂ ಅಪತ್ಯವಾದಾಗ ಉಳಿದಿರುವ ಏಕಮಾತ್ರ ಆಯ್ಕೆ ಕಾಂಗ್ರೆಸ್ ಆದರೂ ಅಚ್ಚರಿಯಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದೆ.