Home ಅಂಕಣ ಮೊಗಳ್ಳಿ ಗಣೇಶ್ ಅವರ ‘ನಾನೆಂಬುದು ಕಿಂಚಿತ್ತು’ ಆತ್ಮಕಥೆಯ ಸಂವಾದದಲ್ಲಿ ಡಾ.ಎಂ.ಎಸ್ ಆಶಾದೇವಿ ಮಾತುಗಳು..

ಮೊಗಳ್ಳಿ ಗಣೇಶ್ ಅವರ ‘ನಾನೆಂಬುದು ಕಿಂಚಿತ್ತು’ ಆತ್ಮಕಥೆಯ ಸಂವಾದದಲ್ಲಿ ಡಾ.ಎಂ.ಎಸ್ ಆಶಾದೇವಿ ಮಾತುಗಳು..

0

ನಾನೆಂಬುದು ಕಿಂಚಿತ್ತು ಬಗೆಗೆ ಕಿಂಚಿತ್ತಾಗಲಿ, ಕುಚ್ಯುತಿವಾಗಿ ಆಗಲಿ ಮಾತಾಡೋದು ತುಂಬಾ ಕಷ್ಟ. ಆ ಕಷ್ಟ ಯಾಕೆಂಬುದನ್ನು ಹೇಳುತ್ತೇನೆ; ಮೊದಲನೆಯದಾಗಿ ಈ ಆತ್ಮಕಥನದ ಬಗೆಗೆ ಅಂದ್ರೆ ಇದೊಂದು Path braking ಅಂತ ಕರೆಯಬಹುದಾದ ಆತ್ಮಕಥನ. ಒಟ್ಟು ಆತ್ಮಕಥನಗಳ ಒಂದು ಇತಿಹಾಸ, ಪರಂಪರೆ ಏನಿದೆಯೋ ಭಾರತದ ಮಟ್ಟಿಗೆ ಅದರಲ್ಲಿ ಜಾಗತಿಕವಾಗಿ ಕೆಲವು ಮಾದರಿಗಳು ಇವೆ ಮತ್ತು ಆತ್ಮಕಥನಗಳ ಕುರಿತಾಗಿಯೇ ನಮ್ಮ ಗ್ರಹಿಕೆಗಳಿದ್ದಾವೆ.

ಆದರೆ ನನಗನ್ನಿಸಿದ್ದು ಇದನ್ನು ಎರಡು ಸಲ ಓದಿದೆ. ನಾನು ಹಾಗೇ ಓದಿದ ಎರಡನೇ ಓದಿನ ಕೊನೆಗೆ ಅನ್ನಿಸಿದ್ದು ಏನೆಂದರೆ ಇದೊಂದು Path breaking ಅಂತಾ ಕರೆಯಬಹುದಾದ ಆತ್ಮಕಥನ. ಅನೇಕ ಸಲ ಇದಕ್ಕೆ ಹೆಸರು ಆತ್ಮಕಥನ ಅಂತಾ ಇದ್ದಾವಾಗಲೂನೂ, ಅನೇಕ ಆತ್ಮಕಥನಗಳಲ್ಲಿ ಆತ್ಮ ಇರಲ್ಲ ಅನ್ನುವುದು ನಮಗೆ ಗೊತ್ತಿದೆ. ಕೆಲವು ಸಲ ಅಲ್ಲಿ ಚರಿತ್ರೆ ಇರುತ್ತೆ, ಇನ್ನೂ ಕೆಲವು ಸಲ ಬುದ್ಧಿ ಅಥವಾ ಭಾವ ಎರಡರಲ್ಲಿ ಯಾವುದೋ ಒಂದು ಆ ಇಡೀ ನಿರೂಪಣೆಯನ್ನು ನಿರ್ದೇಶಿಸಿರುತ್ತದೆ ಮತ್ತು ತುಂಬಾ ಆತ್ಮಕಥನಗಳಲ್ಲಿ ನಮ್ಮ ಅನುಭವಕ್ಕೆ ಬರುವುದು ಏನೆಂದರೆ ತನ್ನ ಬದುಕಿನ ಬಗೆಗೆ, ತನ್ನ ವ್ಯಕ್ತಿತ್ವದ ಬಗೆಗೆ ತಾನೇನು ಹೇಳಬೇಕು ಅನ್ಕೊಂಡಿದ್ದೀನಿ ಅನ್ನುವ ಒಂದು Outline map ಇರುತ್ತಲ್ಲಾ, ಅದನ್ನು ಸೃಷ್ಟಿಮಾಡಿಕೊಂಡೇ ಅದರೊಳಗಡೆ ಏನು ಬೇಕು-ಏನು ಬೇಡ ಅನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಆ ಮ್ಯಾಪಿನೊಳಗೆ ತುಂಬಿಸಲಿಕ್ಕೆ ಪ್ರಯತ್ನಪಡುತ್ತಾರೆಂದು ನಮಗೆಲ್ಲರಿಗೂ ಗೊತ್ತಿದೆ.

ಆದ್ದರಿಂದ ಆತ್ಮಕಥನ ಅನ್ನುವುದನ್ನು ತುಂಬಾ ಸಲ ಚರಿತ್ರೆಕಾರರು ಅನಾತ್ಮಕಥನ ಅಂತಾ ಕರೆಯುತ್ತಾರೆ. ಅದರಲ್ಲಿ ಆತ್ಮಾನೇ ಇರೋದಿಲ್ಲ, ತುಂಬಾ ಆತ್ಮವಂಚನೆ ಇರುತ್ತೆ ಅನ್ನುವ ಕಾರಣಕ್ಕೆ. ನನಗೆ ಬದಲಾದ ಒಂದು ಗ್ರಹಿಕೆ ಏನು ಅಂದರೆ ಇದನ್ನು ಓದಿ; ನಾನು ಒಂದು Hypotheses ಕಟ್ಟಿಕೊಂಡು ಇದ್ದೆ ಇಲ್ಲಿಯ ತನಕ ಮತ್ತು ಅದಕ್ಕೆ ಎಲ್ಲಾ ಪುರಾವೆಗಳು ನನಗೆ ಸಿಕ್ತಾನೇ ಇದ್ವು ಇಲ್ಲಿಯತನಕನೂ!

ನಾನು ಪುರುಷರು, ಗಂಡಸರು ಬರೆದ ಆತ್ಮಕಥನಗಳನ್ನು ಆರೋಹಣ ಪರ್ವದ ಆತ್ಮಕಥನಗಳು ಮತ್ತು ಹೆಣ್ಮಕ್ಕಳ ಆತ್ಮಕಥನಗಳನ್ನು ಅನಾವರಣ ಪರ್ವದ ಆತ್ಮಕಥನಗಳು ಅಂತಾ ಯಾವಾಗಲೂ ಗುರುತಿಸುಕೊಳ್ಳುವುದಕ್ಕೆ ಪ್ರಯತ್ನಪಡುತ್ತಾ ಇರ್ತೀನಿ. ಯಾಕೆಂದರೆ, ಪುರುಷರಿಗೆ ಅವರ ಆತ್ಮಕಥನಗಳನ್ನು ಬರೆಯುವಾಗ ನಾನೆಂಬುದು ಕಿಂಚಿತ್ತು ಅಲ್ಲಾ, ನಾನೆಂಬುದೇ ಸರ್ವಸ್ವ ಆಗಿರುತ್ತೆ ಅನೇಕ ಸಲ. ನಾನು-ನಾನು, ನಾನು ಅದ್ನಾ-ಇದ್ನಾ ಮಾಡಿದೆ ಅಂತ ಹೀಗೆಯೇ ಅವರು ಹತ್ತಿ-ಹತ್ತಿ ಹೋಗೋದನ್ನು ಸಾಮಾನ್ಯವಾಗಿ ಅದು ಹೇಳುತ್ತಾ ಇರುತ್ತದೆ. ಆದರೆ ಹೆಣ್ಮಕ್ಕಳ ವಿಷಯದಲ್ಲಿ ಏನಾಗುತ್ತೆ ಅಂದರೆ, ಆ ಆತ್ಮಕಥನಗಳಲ್ಲಿ ಹೆಣ್ಮಕ್ಕಳು ತಮಗೊಂದು ಆತ್ಮ ಇರೋದು ಹೌದಾ ಅನ್ನೋದನ್ನು ಹುಡುಕೊಂಡು ಹೋಗ್ತಾ ಇರ್ತಾರೆ ಯಾವಾಗಲೂ, ಆದ್ದರಿಂದಲೇ ಅದು ನನಗೆ ಅನಾವರಣ ಅಂತನ್ನಿಸುತ್ತದೆ. ಯಾವುದನ್ನು ಬಿಡುಬೀಸಾಗಿ ಹೇಳೋಕೆ ಆಗೋದಿಲ್ವೋ ಹೆಣ್ಮಕ್ಕಳು. ಅವರು ಆತ್ಮನೇ ಇಲ್ಲ ಅಂತಾ ತಾನೇ ಮೊದಲನೆಯದಾಗಿ ಹೇಳಿರುವುದು. ಅಂತಹದ್ದರಲ್ಲಿ ಅವರು ಆತ್ಮನ ಹುಡುಕಿಕೊಂಡು ಆತ್ಮ ಇದಾ-ಇದಾ ಅಂತಾ ಅವರು ಹುಡುಕ್ತಾ ಇರೋದು ನಮಗೆ ಕಾಣಿಸ್ತಾ ಇರುತ್ತದೆ.

ಆದರೆ ಮೊಗಳ್ಳಿ ಅವರ ಈ ಆತ್ಮಕಥನ ಗಂಡು ಮತ್ತು ಹೆಣ್ಣಿನ ಈ ಎರಡನ್ನೂ ಒಳಗೊಂಡ ಒಂದು ಆತ್ಮಕಥನ ಅಂತಾ ಅನಿಸುತ್ತದೆ. ಇಲ್ಲೊಂದು ಆರೋಹಣಪರ್ವ ಇದೆ, ಇಲ್ಲೊಂದು ಅನಾವರಣ ಪರ್ವ ಎರಡೂ ಇದೆ. ಆ ಹೆಣ್ಣಿನ ಸಂವೇದನೆ ಇದರೊಳಗಡೆ ಬಂದಿದೆಯಲ್ಲಾ, ಅದು ನನಗೆ ತುಂಬಾ ಮುಖ್ಯವಾದ ಒಂದು ಸಂಗತಿ ಅನ್ನಿಸುತ್ತದೆ. ಇನ್ನೊಂದು ನೆಲೆಯಲ್ಲಿ ನೋಡಿದಾಗ ನನಗೆ ಈ ಇಡೀ ಆತ್ಮಕಥನ ಇದೆಯಲ್ಲಾ, ಇದನ್ನು ಮೊಗಳ್ಳಿಯವರ ಆತ್ಮಕಥನ ಅಂತಾ ಕರೆಯದೇ ಇದ್ದರೂ ನಡೆಯುತ್ತದೆ ಅಂತಾನೂ ನನಗೆ ಅನ್ನಿಸ್ತು. At one point ಯಾಕೆಂದರೆ, ಇದರಲ್ಲಿ ಮೊಗಳ್ಳಿ ತಮ್ಮನ್ನು, ತಮ್ಮ ಬದುಕಿನ ಕಥನವನ್ನು, ತಮ್ಮ ಬದುಕಿನ ಹೋರಾಟವನ್ನು, ಸಂಬಂಧಗಳು ಅದರ ಬಿಕ್ಕಟ್ಟುಗಳು, ಬದುಕಿನ ನೂರು-ನೂರು ಸಂಘರ್ಷದ ಮಾದರಿಗಳು ಇದನ್ನೆಲ್ಲಾ ಹೇಳ್ತಾ-ಹೇಳ್ತಾ, ಇರುವಾಗ್ಲೂನೂ ಅದು ನಾನು ಅಂತಾ ಹೇಳುತ್ತಿರೋದನ್ನು ಎಲ್ಲೋ ಕೆಲವು ಘಳಿಗೆಗಳಲ್ಲಿ ಮೀರಿಕೊಂಡಿದ್ದಾರೆ ಅನಿಸುತ್ತದೆ. ಅದನ್ನು ಮೀರಿಕೊಂಡು ಒಂದು ಅಪ್ಪಟ ಕಲಾಕೃತಿ ಇರುತ್ತಲ್ಲಾ, ಆ ಕಲಾಕೃತಿಯನ್ನು ರಚಿಸುವಾಗ ಒಂದು ತನ್ಮಯತೆ ಬರುತ್ತಲ್ಲಾ, ಆತ್ಮಕಥನಗಳನ್ನು ಬರೆಯುವಾಗ ತನ್ಮಯತೆ ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ ಯಾಕೆಂದರೆ, ನಾವು ಯಾವುದನ್ನು ಎಷ್ಟು ಬರೆಯಬೇಕು, ಎಷ್ಟು ಗ್ರಾಂ, ಎಷ್ಟು ಕೆಜಿ ಎಲ್ಲಾ ತೀರ್ಮಾನ ಮಾಡುತ್ತಿರುತ್ತೇವೆ ಆದರೆ ಎಷ್ಟೋ ಕಡೆಗಳಲ್ಲಿ ಮೊಗಳ್ಳಿಗೆ ಅದನ್ನು ಮೀರಿಕೊಳ್ಳುವುದಕ್ಕೆ ಸಾಧ್ಯ ಆಗಿದೆ ಅನ್ನೋದು ಇದೆಯಲ್ಲಾ, ಅದು ಈ ಕಥನವನ್ನು Path breaking ಅನ್ನುವ ಹಾಗೆ ಮಾಡಿದೆ ಅಂತಾ ನನಗನ್ನಿಸುತ್ತದೆ.

ಇದರ ಮೊದಲ ಓದು ಇದೆಯಲ್ಲಾ ಅದು ನನಗೆ ತುಂಬಾ ಕಷ್ಟ ಕೊಡ್ತು ಪ್ರಾಮಾಣಿಕವಾಗಿ! ನಾನಿದನ್ನು 20-30 ಪುಟ ಓದ್ಬಿಟ್ಟು ಮುಚ್ಚಿಟ್ಟು ಬಿಟ್ಟೆ. ಯಾಕೆಂದರೆ, ನನ್ನೊಳಗಿಂದ ಒಂದು ಭಯ ಹುಟ್ಟಿ ಬಿಡ್ತು. ಯಾಕೇ ಭಯ ಹುಟ್ತು ಅಂದರೆ, ಎರಡು ಕಾರಣಗಳಿವೆ. ಒಂದು; ಅವರ ಬಾಲ್ಯದ ಆ ಹಿಂಸಾತ್ಮಕವಾದ ಅನುಭವಗಳು ಇದಾವಲ್ಲಾ ಅದನ್ನು ಇನ್ನೂ ತಡ್ಕೊಳ್ಳಲಿಕ್ಕೆ ಆಗಲ್ಲವೇನೋ ಅನ್ನಿಸಿಬಿಡ್ತು ನನಗೆ(ನಾನೇ ದುರ್ಬಲ ಇರಬಹುದು ಗೊತ್ತಿಲ್ಲ) ನಂಗೆ ಇದಕ್ಕಿಂತ ಹೆಚ್ಚು ತಗೊಳ್ಳಲಿಕ್ಕೆ ಆಗಲ್ಲ ಅನ್ನಿಸ್ತು. ಇನ್ನೊಂದು; ಒಂದು ಅಸಾಧಾರಣವಾದ ಪಾಪಪ್ರಜ್ಞೆ ಅಂದ್ರೆ ನಮ್ಮ ಜೊತೆಯಲ್ಲೇ, ನಮ್ಮ ನಡುವಿನಲ್ಲೇ ಇರುವವರ ಬದುಕು ಹೀಗೆಲ್ಲಾ ಇದ್ದಿರಬಹುದು. ಅದು ಅವರೊಬ್ಬರದ್ದು ಅಲ್ಲವಲ್ಲ. ಅಂತಹ ಇನ್ನೆಷ್ಟೋ ಜನರ ಇಂತಹದೊಂದು ಬದುಕಿನ ಮುಖ ಇದೆಯಲ್ಲಾ, ಅದು ನಮ್ಮೊಳಗೆಯೇ ಇದೆ. ಆದರೆ ಅದು ನಮಗದರ ಸ್ಪರ್ಶವೇ ಇಲ್ಲದೇ ಇರುವ ಹಾಗೆ ಬದುಕಿಬಿಟ್ಟಿರುತ್ತೀವಿ ಅಲ್ಲಾ ಅನ್ನುವ ಒಂದು ಪಾಪಪ್ರಜ್ಞೆ ನನಗೆ ಹುಟ್ತಾ ಇತ್ತು. ಆತಂಕ ಹುಟ್ತು. ಆಮೇಲೆ ಒಂಚೂರು ಸುಧಾರಿಸಿಕೊಂಡು ಮಾರನೇ ದಿವಸ ಅದನ್ನು ಪೂರ್ತಿಯಾಗಿ ಓದಿದೆ. ಅದಾದ ಮೇಲೆ ಇನ್ನೊಂದು ಮೂರು ನಾಲ್ಕು ದಿನ ಅಂತರ ಕೊಟ್ಟುಬಿಟ್ಟು ನಾನು ಇನ್ನೊಂದು ಸಲ ಇಡಿಯಾಗಿ ಓದಿದೆ.

ಆವಾಗ ನನಗೆ ಅನ್ನಿಸಿದ ಕೆಲವು ಅಂಶಗಳು(ಸ್ವಲ್ಪ ಏನೋ ವಿಲಕ್ಷಣ ಅಂತ ನಿಮಗೆ ಅನ್ನಿಸಬಹುದು) ಮೊಗಳ್ಳಿ ಅವರ ಈ ಇಡೀ ಬದುಕು ಆ ಬದುಕಿನ ಏರಿಳಿತಗಳು ಅಥವಾ ಯಾವ ಬದುಕಿನಲ್ಲಿ ನಾನೀಗೆ ಬದುಕಿದ್ದೀನಿ. ಇನ್ನೂ ಕೆಲವು ಸಲ ಸೋತಿದ್ದೀನಿ, ನಾನು ತುಂಬಾ ಹಿಂದೆ ಉಳಿದುಕೊಂಡು ಬಿಟ್ಟಿದ್ದೀನಿ. ಇಂತಹದ್ದು ಏನೇನೋ ಇದ್ದಾವಲ್ಲ. ಆ ಬದುಕಿನ ಎಲ್ಲಾ ಕಷ್ಟದ ಗಳಿಗೆಗಳಲ್ಲಿ ಅವರು ಮತ್ತೆ ಬದುಕಿ ಬಂದಿದ್ದು ಕಲೆಯ ಸ್ಪರ್ಶದಿಂದ ಅನ್ನೋದು ಇದೆಯಲ್ಲಾ, ಅದು ನನಗೆ ಬಹಳ ಮುಖ್ಯವಾದ ಸಂಗತಿಯಾಗಿ ಕಾಣಿಸುತ್ತದೆ. ಅವರು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರಲ್ಲ(ನನ್ನ ತಿಳುವಳಿಕೆ ಸರಿಯಾಗಿದ್ದರೆ) ಆದರೆ ಕಿಶೋರಿ ಅಮೋನ್‌ಕರ್ ಕಚೇರಿಯನ್ನ ಕೇಳಿದ ಒಂದು ಅನುಭವವನ್ನು ಮೊಗಳ್ಳಿ ಬರೆಯುತ್ತಾರೆ. ಹಾಗೆಯೇ ಬರೆಯುವ ಹೊತ್ತಿನಲ್ಲಿ ಅವರ ಮನಸ್ಥಿತಿ ಅದಕ್ಕೆ ಏನೆಂದು ಕರೆಯಬಹುದು ತುಂಬಾ ಕಷ್ಟದಲ್ಲಿರುತ್ತದೆ. ಒಂದು ದಿಕ್ಕೆಟ್ಟ ಮನಸ್ಥಿತಿಯಲ್ಲಿ ಅವರು ಆ ಹಿಂದೂಸ್ತಾನಿ ಸಂಗೀತದ ಬಗೆಗಿನ ಆಳವಾದ ಅರಿವಿಲ್ಲದೇ, ತಿಳುವಳಿಕೆಯಿಲ್ಲದೇ ಅವರು ಆ ಕಚೇರಿಗೆ(ಕಿಶೋರಿ ಅಮೋನ್‌ಕರ್ ಕಚೇರಿ) ಅವರು ಹೋಗುತ್ತಾರೆ. ಆ ಕಚೇರಿಗೆ ಮುಗಿಯುವ ಹೊತ್ತಿಗೆ ಅವರಿಗೆ ಏನಾಯ್ತು ಎನ್ನುವುದನ್ನು ಅವರೇ ಹೇಳುತ್ತಾರೆ.

ತುಂಬಾ ಮನಸ್ಸಿಗೆ ಕಷ್ಟವಾದ ಹೊತ್ತಿನಲ್ಲಿ ಲೈಬ್ರರಿಗೆ ಹೋಗುತ್ತಾರೆ, ಯಾವುದೋ ಒಂದು ಪುಸ್ತಕ ತಗೋತಾರೆ. ಓದೋಕೆ ಶುರು ಮಾಡುತ್ತಾರೆ. ಎಷ್ಟೋ ಹೊತ್ತು ಆದಮೇಲೆ ಅವರಿಗೆ ಆ ಬದುಕಿನ ಅಗ್ನಿದಿವ್ಯದಿಂದ ಒಂಚೂರು ಹೊರಗೆ ಬಂದ ಹಾಗೆ. ಅನಿಸುವುದಕ್ಕೆ ಶುರುವಾಗುತ್ತದೆ. ಇನ್ಯಾವುದೋ ಒಂದು ಇದರಲ್ಲಿ ಹೋಗ್ತಾರೆ. ತುಂಬಾ ಮನಸ್ಸು ಘಾಸಿ ಆಗಿರುತ್ತೆ, ಒಳಗೆ ಬರುತ್ತಾರೆ. ಒಳಗೆ ಬಂದು ಏನೋ ಬರೆಯಬೇಕೆಂಬ ತಹತಹ ಇರುತ್ತೆ, ಹುಡುಕಿದರೆ ವೈಟ್ ಪೇಪರ್ರೇ ಸಿಗಲಿಲ್ಲ ಅಂತ ಹೇಳ್ತಾರೆ. ಝರಾಕ್ಸ್ ಶೀಟ್‌ಗಳ ತಗೊಂಡೇ ಅದರ ಹಿಂಭಾಗದಲ್ಲಿ ನಾನು ಬರೆದೆ ಅದು ಕನ್ನಡದ ಅತ್ಯುತ್ತಮ ಕಥೆ ಆಗಿತ್ತು ಎನ್ನುವುದನ್ನು ಅವರು ಹೇಳುತ್ತಾರೆ.

ಅದು ಸಾಹಿತ್ಯ, ಸಂಗೀತ ಇರಬಹುದು. ಈ ಕಲೆಯ ಸ್ಪರ್ಶ ಇದೆಯಲ್ಲಾ; ಕಲೆಯ ಸ್ಪರ್ಶ ಮೊಗಳ್ಳಿಯವರಿಗೆ ಬದುಕಿನ ನಂಬಿಕೆ ಮತ್ತು ಅಪನಂಬಿಕೆಯ ನಡುವಿನ ಒಂದು ಪ್ರಶ್ನೆಯಾಗಿ ಕಾಣುತ್ತದೆ ಎಂದು ನನಗನ್ನಿಸುತ್ತದೆ. ಯಾವಗವಾಗ ಬದುಕಿನ ಬಗೆಗೆ, ಮನುಷ್ಯರ ಬಗೆಗೆ, ತನ್ನದೇ ಬಗೆಗೆ ಒಂದು ನಂಬಿಕೆ ಕಳೆದು ಹೋಗುತ್ತೋ, ಆ ನಂಬಿಕೆಯನ್ನು ಅವರು ಮತ್ತೆ ಹೋಗಿ ಪಡೆದುಕೊಂಡು ಬರುವುದು ಯಾವುದರಿಂದ ಅಂದರೆ; ಈ ಕಲೆಗಳ ಸಾಂಗತ್ಯದಲ್ಲಿ ಅಂತಾ ನನಗನ್ನಿಸುತ್ತದೆ. ಇದು ಈ ಆತ್ಮಚರಿತ್ರೆಯನ್ನು ಒಂದು ವಿಶಿಷ್ಟ ಮಾಡಿರುವ ಸಂಗತಿ. ಈ ಆತ್ಮಕಥನ ಓದುವಾಗ ನನ್ನ ಮನಸ್ಸಲ್ಲಿ ಮತ್ತೆಮತ್ತೆ ಪುನರಾವರ್ತನೆ ಆಗುತ್ತಿದ್ದ ಒಂದು ಮಾತು, ಸಾಹಿತ್ಯದ ಬಗೆಗೆ ಇರುವ ಒಂದು ಮುಖ್ಯವಾದ ಒಂದು ಸ್ಟೇಟಮೆಂಟ್ ಇದೆಯಲ್ಲಾ; Literature is glorious madness but its a madness that our insert world needs to review its insanity.

ಇದರ ಮೊದಲ ಓದು ನನ್ನನ್ನು ಭಯಭೀತಳನ್ನಾಗಿಸಿತು. ಆದರೆ ಎರಡನೇ ಓದಿಗೆ ಬರುವ ಹೊತ್ತಿಗೆ ನನಗನ್ನಿಸಿದ್ದು; ನೀವು ಈ ಆತ್ಮಕಥನವನ್ನು ದಲಿತ ಆತ್ಮಕಥನಗಳು ಎನ್ನುವ ವರ್ಗೀಕರಣದಲ್ಲಿ ಇಡುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಆ ಚೌಕಟ್ಟನ್ನು ಕೂಡ ಈ ಆತ್ಮಕಥನ ಲೀಲಾಜಾಲವಾಗಿ ಮೀರಿಕೊಂಡುಬಿಟ್ಟಿದೆ. ಇದನ್ನು ಒಂಚೂರು ಹೆಂಗೂ ನನ್ನನ್ನು ಪರಿಭಾಷಾದೇವಿ ಎಂದು ಕರೆಯುವುದರಿಂದ ನನಗನ್ನಿಸಿದ್ದು ಏನೆಂದರೆ; ಇದು ಬದುಕಿನ ಅಸಂಗತತೆಯ ಜೊತೆಗಿನ ಒಂದು ಸಾಂಗತ್ಯ. ಬದುಕು ಅಸಂಗತ ಬದುಕಿನ ಏರಿಳಿತಗಳು, ಅದರ ಘಟನೆಗಳು ಯಾವುದನ್ನು ನಾನು ಬಯಸುತ್ತೇನೋ ಅದು ಸಿಗುವುದಿಲ್ಲ. ಯಾವುದು ನನಗೆ ಬೇಡವೋ ಅದು ನನಗೆ ಸಿಗುತ್ತದೆ. ಅಲ್ಲಿಗೆ ಹೋಗುವುದು ಬೇಡ ಅಂದುಕೊಳ್ಳುತ್ತೇನೆ, ಅಲ್ಲಿಗೆ ಹೋಗಬೇಕಾಗುತ್ತದೆ. ನನಗೆ ಈ ಕೆಲಸ ಬೇಡ ಅದು ಬೇಕು ಆದರೆ ನನಗದು ಸಿಗೋದಿಲ್ಲ ಹೀಗೆ ಬದುಕು ಅನ್ನೋದು ತನ್ನದೇಯಾದ ಒಂದು ಲಯವನ್ನು, ದಾರಿಯನ್ನು ಹಿಡಿದಿದೆ. ಅದರ ಜೊತೆಯಲ್ಲೊಂದು ನಿರಂತರವಾಗಿ ಹೋರಾಟ ಮಾಡುತ್ತಾ ಇಲ್ಲಾಇಲ್ಲಾ ನೀನೇನೋ-ನೀನೇನೋ ತೀರ್ಮಾನ ಮಾಡಿಟ್ಟಿದ್ದೀಯಾ ಬದುಕೇ ನನಗದು ಬೇಡ. ನನಗೆ ಬೇಕಾಗಿರುವುದು ತೊಗೋತಿನಿ, ಪಡ್ಕೋತಿನಿ ಎಂದು ಅವಿಲಕ್ಷಣವಾಗಿರುವ ಹೋರಾಟ ಇದೆಯಲ್ಲಾ ಆ ಹೋರಾಟದ, ಅಸಂಗತತೆಯ ಎಂಥಾ ಸೂಕ್ಷ್ಮಗಳನ್ನು ಈ ಕೃತಿ ಒಂದು ಕಾವ್ಯದ ಲಯದಲ್ಲಿ ಹಿಡಿದಿದೆ. ಎಷ್ಟೋ ಭಾಗಗಳನ್ನು ಓದುತ್ತಿರಬೇಕಾದರೆ ಇದು ಮೊಗಳ್ಳಿ ಅವರ ಆತ್ಮಕಥನ ಅಂತಾ ನಮಗೆ ಅನ್ಸೋದಿಲ್ಲ. ನಾವು ಒಂದು fictionನನ್ನು, ಕಾದಂಬರಿಯನ್ನು ಓದುತ್ತಿದ್ದೇವೆ ಅನ್ನುವ ಅನುಭವವನ್ನು ಕೊಡುತ್ತೆ ಅನ್ನೋದಾದರೆ ಇದು ನಮಗೆ ಯಾಕೇ ಮುಖ್ಯವಾಗಬೇಕು. ಒಟ್ಟು ಕನ್ನಡ ಆತ್ಮಕಥನಗಳ ಪರಂಪರೆಯಲ್ಲಿ ಅನ್ನೋದು ನಾವು ಇನ್ನೂ ಆಳವಾಗಿ ಯೋಚನೆ ಮಾಡಬೇಕು ಎಂದನ್ನಿಸುತ್ತದೆ.

ಇನ್ನೊಂದು ಎರಡು ಸಂದರ್ಭಗಳಲ್ಲಿ ನಾನು ನಂಬಿಕೆ ಮತ್ತು ಅಪನಂಬಿಕೆಗಳ ಮನುಷ್ಯರ ವಿಷಯದಲ್ಲಿ ಮೊಗಳ್ಳಿ ಅವರು ಅನುಭವಿಸಿದಷ್ಟು ಉತ್ಕಟವಾಗಿ ಅದರ ತೀವ್ರವಾದ ಏರಿಳಿತಗಳಲ್ಲಿ ತುಂಬಾ ಜನ ಅನುಭವಿಸಿರಲ್ಲ ಅಂತನ್ನಿಸುತ್ತೆ. ಯಾರೋ ಒಬ್ಬರು ಅವರು ಕೊಡುವ ನಂಬಿಕೆ, ಭರವಸೆ ತುಂಬಾ ದೊಡ್ಡದು ಅನ್ಸುತ್ತೆ. ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಹೊತ್ತಿಗೆನೇ ಅದು ಆಧಾರವೇ ಇಲ್ಲವೇನೋ ಅನ್ನುವ ಹಾಗೆ ಕಳಚಿ ಬಿದ್ದೋಗುತ್ತೆ. ಇನ್ಯಾರೋ ನನಗೆ ಅಪರಿಚಿತರು ಆದರೆ ಅವರು ದೊಡ್ಡ ಆಸರೆ ಆಗಿ ಬಿಡುತ್ತಾರೆ ಜೀವನದಲ್ಲಿ. ಇಲ್ಲೊಂದು ಪ್ರಸಂಗವನ್ನು ಅವರು ಹೇಳುತ್ತಾರೆ; ಗಾಂಧಿ ನಗರದ್ದು ಅಂತಾ ಕಾಣುತ್ತೆ, ಇವರು ನಡೆದುಕೊಂಡು ಹೋಗುತ್ತಿರುತ್ತಾರೆ. ಹಿಂದುಗಡೆಯಿಂದ ಯಾರೋ ಇವರ ಹೆಗಲ ಮೇಲೆ ಕೈ ಇಟ್ಟು “ಹಲೋ ಮೈ ಹೀರೋ” ಅಂತಾ ಹೇಳುತ್ತಾರೆ. ತಿರುಗಿ ನೋಡಿದರೆ It is ಅಗ್ರಹಾರ ಕೃಷ್ಣಮೂರ್ತಿ ಅವರು ಹೇಳುತ್ತಾರೆ; ನಾನು ನಿನ್ನನ್ನು ಗಂಟೆಯಿಂದ ಫಾಲೋ ಮಾಡುತ್ತಾ ಇದ್ದೇನೆ ಮಾರಾಯ ನೀನು ಎಲ್ಲೆಲ್ಲೋ ನಿಂತು ಕುಡಿದು ಕುಡಿದು ಮುಂದಕ್ಕೆ ಹೋಗುತ್ತಾ ಇದ್ದೀಯಾ, ನನಗೊಂದೇ ಭಯ ನೀನು ಎಲ್ಲಿ ಬಿದ್ದೋಗ್ತೀಯೋ ಅಂತಾ. ಒಂದು ಮನುಷ್ಯರ ಅಕಾರಣವಾದ ಪ್ರೀತಿ ಇದೆಯಲ್ಲಾ, ಅದು ಕಾರಣವಿರುವ, ವ್ಯವಹಾರಿಕವಾದ, ಉದ್ದೇಶವಿರುವ, ಸ್ವಾರ್ಥವಿರುವ ಅಂತಹದ್ದೇನೂ ಇಲ್ಲದ ಒಂದು ಸ್ನೇಹವನ್ನೂ ಇವರು ಅನುಭವಿಸಿದ್ದಾರೆ. ಅದರ ಉತ್ಕಟತೆಯಲ್ಲಿ ಅದೇ ಸಮಯದಲ್ಲಿ ಕಾರಣವೇ ಇಲ್ಲದೇ ಇವರ ಬದುಕನ್ನು ಮುಗಿಸಿಬಿಡಬೇಕೆಂದು ಹೊರಟವರನ್ನೂ ಇವರು ಎದುರಿಸಿ ನಿಂತಿದ್ದಾರೆ. ಆದರೆ ನಮ್ಮಲ್ಲಿ ಯಾವಾಗಲೂ ಫಿನಿಕ್ಸ್ ಅನ್ನೋದನ್ನು ರೂಪಕವಾಗಿ ನಾವು ಬಹಳ ಕಾಮನ್ ಆಗಿ ಬಳಸುತ್ತಾ ಇರುತ್ತೇವೆ ಅದು ಬಹಳ Approriate ಆಗೋದು ಮೊಗಳ್ಳಿಗೆ ಅಂತಾ ನನಗನ್ನಿಸುತ್ತದೆ.

ಓ! ಇವನ ಕತೆ ಮುಗಿತು ಅಂತಾ ಲೋಕ ಸರ್ಟಿಫಿಕೇಟ್ ಬರೆಯುತ್ತಿರುವ ಹೊತ್ತಿಗೆ ಮೊಗಳ್ಳಿ ಎದ್ದುನಿಂತು ಯಾವುದೋ ಒಂದು ಅದ್ಭುತವಾದ ಕಥೆ ಕೊಟ್ಟು, ಕಾದಂಬರಿ ಕೊಟ್ಟಿರುತ್ತಾರೆ. ಇದೆಲ್ಲದರ ಜೊತೆಗೆ ನನಗೆ ಇನ್ನೊಂದು ಬಹಳ ಮುಖ್ಯವಾದ ಅಂಶ ಅನ್ನಿಸಿದ್ದು ಏನೆಂದರೆ; ಮೊಗಳ್ಳಿ ಅವರ ಒಂದು ಅಪ್ಪಟ ಪ್ರತಿಭೆ ಇದೆಯಲ್ಲಾ, ಆ ಪ್ರತಿಭೆ ಎಂಥದ್ದು ಅಂದ್ರೆ ಹೀಗೆ ಮುಟ್ಟಿದನ್ನು ಕಾವ್ಯ ಮಾಡೋದು ಅಂತ ಅಂದುಕೊಳ್ಳುತ್ತೇವೆಯಲ್ಲಾ ಅದು ಹಾಗೆಯೇ ಮುಟ್ಟಿದ್ದನ್ನು ಇವರಿಗೆ ಕಾವ್ಯವಾಗಿಸುವ ಅದು ಯಾವುದೇ ಪ್ರಕಾರದಲ್ಲಿ ಇರಬಹುದೇನೋ. ಕಾದಂಬರಿ-ಕಥೆ ಇರಬಹುದು, What our it may be ಅಥವಾ ಅವರ ಸಂಶೋಧನಾ ಲೇಖನ ಇರಬಹುದು. Even ಅವರ ಪಾಠದ ಕ್ರಮದ ಬಗೆಯ ಕೂಡ ಕೆಲವು ಮಾತುಗಳು ಇಲ್ಲಿ ಬರುತ್ತವೆ. ಆ ಅಪ್ಪಟ ಪ್ರತಿಭೆ ಇದೆಯಲ್ವಾ, ಅದು ಇವರಿಗೆ ಕೊಟ್ಟಿರುವ ಒಂದು ಹಿಂಬು ಇದೆಯಲ್ಲಾ, ಅದು ಬಹಳ ದೊಡ್ಡದು ಅಂತಾ ನನಗೆ ಅನಿಸುತ್ತದೆ.

ಅದರಿಂದಲೇ ಕನ್ನಡ ಸಾರಸ್ವತ ಲೋಕದ ಎಲ್ಲರೂ ಇವರನ್ನು ಎಷ್ಟು ಹುಡ್ಕೊಂಡು-ಹುಡ್ಕೊಂಡು ಬಂದು ಇವರನ್ನು ಭೇಟಿಯಾಗೋದು, ಮಾತನಾಡಿಸೋದು ಅಥವಾ ಇವರು ಬದುಕಿನಲ್ಲಿ ಕಂಗಲಾಗಿ ಇದ್ದವಾಗ ನಾವಿದ್ದೀವಿ ಬಾರಯ್ಯ ಅಂತಾ ಕರಕೊಂಡು ಹೋಗೋದು. ಒಂದು ಅಗ್ರಹಾರದ ಸನ್ನಿವೇಶ, ಇನ್ನೊಂದು ಲಂಕೇಶ್. ಇವರು ಹೋಗಿದ್ದಾವಾಗ ನೀನೇನೂ ಯೋಚನೆ ಮಾಡಬೇಡ; ಜೀವನ ಹಾಳು ಮಾಡ್ಕೋಬೇಡ. ನಿನ್ನ ಹೆಂಡ್ತಿಗೆ ಇಲ್ಲೊಂದು ಫ್ಯಾನ್ಸಿ ಸ್ಟೋರ್ ಹಾಕಿಕೊಡುತ್ತೇನೆ ಗಾಂಧಿಬಜಾರಿನಲ್ಲಿ, ಅವರೇನೂ ಚಿಕ್ಕಪ್ಪ-ದೊಡ್ಡಪ್ಪನ ಮಗಾ ಆಗಿರಲಿಲ್ಲ ಅಲ್ಲಾ. ಆದರೆ ಲಂಕೇಶ್‌ಗೆ ಅದನ್ನು ಹೇಳೋದಕ್ಕೆ ಸಾಧ್ಯ ಆಯ್ತಲ್ಲಾ. ಮತ್ತೇನೂ ಅದು ಅವರು ಬರೀ ಬಾಯಿಮಾತಿಗೆ ಅದನ್ನು ಹೇಳಿದ್ದು ಅಲ್ಲವಲ್ಲಾ. ಪ್ರೀತಿ ಮತ್ತು ದ್ವೇಷ ಎರಡನ್ನೂ ಇವರಷ್ಟು ಸಮೃದ್ಧವಾಗಿ ಉಂಡವರು ಬಹಳ ಕಡಿಮೆ ಅಂತಾ ನನಗೆ ಅನ್ಸುತ್ತೆ.

ಆದರೆ ಇವರ ಮಹತ್ವಾಕಾಂಕ್ಷೆ ಇದೆಯಲ್ಲಾ; ಅಕಾಡೆಮಿಕ್ ಆಗಿ ನಾನು ಏನೋ ಆ ಫೆಲೋಶಿಪ್ ತಗೋ ಬೇಕಾಗಿತ್ತು. ಅಮೆರಿಕಾಗೆ ಹೋಗಬೇಕಾಗಿತ್ತು. ಇನ್ನೇನೋ ಮಾಡಬೇಕಾಗಿತ್ತು ಅಂತಾ ಅದೆಲ್ಲಾ ಅನ್ಕೊಳ್ಳೋದು ಇದೆಯಲ್ಲಾ. ಇವತ್ತು ಹಿಂದಿರುಗಿ ನೋಡಿದ ಹೊತ್ತಿನಲ್ಲಿ Thank God ಮೊಗಳ್ಳಿಗೆ ಅವು ಯಾವೂ ಸಿಗಲಿಲ್ಲವಲ್ಲಾ ಅಂತಾನೇ ಅನ್ಸುತ್ತೆ. ಜರ್ಮನ್‌ಗೆ ಹೋಗುತ್ತಾರೆ. Gunther forg cross ಅಲ್ಲಿ ಕುಳಿತುಕೊಳ್ಳುತ್ತಾರೆ. ಅದೆಲ್ಲಾ ಸರಿ ಆದರೆ ಈ ಫೆಲೋಶಿಪ್‌ಗೆ ಅಂತ ಅವರು ಅಪ್ಲೈ ಮಾಡೋದು, ಅದು ಆಗದೇ ಇರೋದು. ಅವರು ಅಮೇರಿಕಾಗೆ ಶೋಭಾನ ಕರೆದುಕೊಂಡು ಹೋಗಿಬಿಟ್ಟಿದ್ದಿದ್ದರೆ ಇಂತಹ ಮೊಗಳ್ಳಿ ಬಹುಶಃ ನಮಗೆ ಸಿಗುತ್ತಿರಲಿಲ್ಲವೇನೋ ಅಂತಲೇ ನನಗೆ ಅನ್ನಿಸುತ್ತದೆ. ಹಾಗಾಗಿ ಬದುಕಿನ ಅಸಂಗತತೆಯಲ್ಲಿ ಕನ್ನಡಕ್ಕೆ ಒಬ್ಬ ಇಂತಹ ಅಪರೂಪದ ಲೇಖಕ ಸಿಕ್ಕಿರುವುದು ಕೂಡ ಅದೊಂದು ಮುಖ್ಯವಾದ ಸಂಗತಿ.

ನನಗೆ ಅನ್ನಿಸಿದ್ದು ಏನೆಂದರೆ; ಒಂದನೆಯದ್ದು ಇದನ್ನು ಒಬ್ಬ ಕವಿ ಮಾತ್ರ ಬರೆಯಬಲ್ಲ, ಎರಡನೆಯದ್ದು ಬಹಳ ಧೈರ್ಯ ಮತ್ತು ಪ್ರಾಮಾಣಿಕತೆ ಎರಡೂ ಇದ್ದವರು ಮಾತ್ರ ಇದನ್ನು ಬರೆಯುವುದಕ್ಕೆ ಮಾತ್ರ ಸಾಧ್ಯ. ಅವರ ಅಪ್ಪನ ಹಿಂಸಾತ್ಮಕವಾದ ಒಂದು ಮುಖವನ್ನು ಅವರು ತೋರಿಸಿದ್ದು ಆಗಿರಬಹುದು ಅಥವಾ ಅವರದ್ದೆ ಕೆಲವು ದೌರ್ಬಲ್ಯಗಳು; ಅದು ಕುಡಿತವೋ, ಮತ್ತೊಂದೋ ಆ ದೌರ್ಬಲ್ಯಗಳಿಗೆ ತಾನು ಹೆಂಗೆ ಮುಳುಗಿ ಹೋಗಿಬಿಟ್ಟಿದ್ದೆ. ಅದರಿಂದ ತನ್ನ ಸಂಸಾರ ಹೆಂಗಾ ಕಂಗಾಲಾಗಿ ಹೋಗಿತ್ತು ಅನ್ನೋದನ್ನು ಬಹಳ ಪ್ರಾಮಾಣಿಕವಾಗಿ ಇವರು ಹೇಳ್ತಾರೆ. ಹಾಗೆಯೇ ಪ್ರಾಮಾಣಿಕವಾಗಿ ಹೇಳುವ ಹೊತ್ತಿನಲ್ಲೂ, ಓದುತ್ತಾ ಇರೋರು ನಮಗೆ ಅದು ಎಲ್ಲೂ ತೋರುಗಾಣಿಕೆಯದ್ದು ಅಂತಾ ಅನ್ಸೋದು ಇಲ್ಲವಲ್ಲಾ ಅದು ನನಗೆ Remarkable ಅಂತಾ ಅನ್ಸುತ್ತದೆ.

ಅನೇಕ ಅಧ್ಯಾಯಗಳಿದ್ದಾವಲ್ಲ. ಅದರಲ್ಲಿ ಅವರು ಕೊಟ್ಟಿರುವ ಟೈಟಲ್‌ಗಳಲ್ಲೇ ಇವರು ಏನೂ ಅನ್ನೋದನ್ನು ತೋರಿಸುತ್ತದೆ. ಇವರ ಕವಿತ್ವ ಎಷ್ಟು ಚೆನ್ನಾಗಿ ತೋರ್ಪಡಿಸುತ್ತೆ ನೋಡಿ, “ನನ್ನ ತಾಯಿಯ ಕತೆಯ ನೆರಳು ನಾನು”. ಅನಂತಮೂರ್ತಿಯವರು ಬರುತ್ತಾರೆ; ಹೋ ಅಂತಾ ತಬ್ಬಿಕೊಂಡು ಎಷ್ಟು ಸಂತೋಷ ಪಡ್ತಾರೆ ಇವರನ್ನು(ಮೊಗಳ್ಳಿ) ನೋಡಿ ಅನಂತಮೂರ್ತಿ ಅವರಿಗೆ ಇವರ ಸಾಮಾಜಿಕ ಹಿನ್ನೆಲೆಯನ್ನು, ವಿವರಗಳನ್ನು ತಿಳಿದುಕೊಳ್ಳಬೇಕು ಅಂತಾ‌ ಅದನ್ನು ಇವರಿಗೆ ಹೇಳೋಕೆ ಸಂಕೋಚ. ಯಾವುದೋ ಒಂದು ಸಂದರ್ಭದಲ್ಲಿ ಅವರು ಬಾಯಿಬಿಟ್ಟು ಹೇಳ್ತಾರೆ. ನನ್ನಮ್ಮನೆ ನನಗೆಲ್ಲವೂ!, ಇವತ್ತು ನಾನೇನಾದರೂ ಬರಿತಿದ್ದೇನೆ ಅಂದ್ರೆ ಅವಳ ನೆರಳಷ್ಟೇ ಇದನ್ನು ಬರೀತಾ ಇರೋದು ನನ್ನಮ್ಮಾನೇ. ಅಷ್ಟು ಸಣ್ಣವಯಸ್ಸಿನಲ್ಲಿ ಮೊಗಳ್ಳಿ ಅಮ್ಮನನ್ನು ಕಳೆದುಕೊಳ್ಳುತ್ತಾರೆ. ಮೈಸೂರಿನಲ್ಲಿ ಎರಡ್ಮೂರು ಸಲ ಯಾರ‌್ಯಾರೋ ಹೆಣ್ಮಕ್ಕಳನ್ನು ನೋಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇವರು ನಮ್ಮಮ್ಮ ಇರಬಹುದು, ಇವರು ನಮ್ಮಮ್ಮ ಇರಬಹುದು. ಇವರು ನನ್ನಮ್ಮಾನ ತರಾನೇ ಇದಾರೆ ಅನ್ಕೊಂಡು ಅವರತ್ರ ಹೋಗಿ ಅವರು ಯಾರೋ ಪೋಲಿಸ್ ಕಂಪ್ಲೆಂಟು ಕೊಟ್ಟು, ಅವರು ಬೈಯ್ದು. ಇದೆಲ್ಲಾ ಆಗುತ್ತೆ ಆದರೆ, ಕೊನೆಗೂ ಬದುಕು ಅನ್ನೋದು ಒಂದು ಪ್ರೀತಿಯ ಹುಡುಕಾಟ ಅನ್ನೋದಾದ್ರೆ, ಅದೊಂದು ಜೀವಂತಿಕೆಯ ಹುಡುಕಾಟ ಅನ್ನೋದಾದ್ರೆ, ಸೃಜನಶೀಲತೆಯ ಹುಡುಕಾಟ ಅನ್ನೋದಾದ್ರೆ ಅಂತಹ ಒಂದು ಅಪ್ಪಟ ಬದುಕನ್ನು ಮೊಗಳ್ಳಿ ಬದುಕಿದ್ದಾರೆ.

ಇದು ಇಂಗ್ಲೀಷಿಗೆ ಅನುವಾದ ಇನ್ನೂ ಆಗಿಲ್ಲ ಅನಿಸುತ್ತೆ, ಇಂಗ್ಲೀಷಿಗೆ ಅನುವಾದ ಆಗುವುದು ಒಂದು ದೊಡ್ಡ ಪ್ಯಾರಾಮೀಟರ್ ಅಂತಾ ನಾನು ಹೇಳುತ್ತಿಲ್ಲ. ಆದರೆ ಇಂತಹ ವಿಶಿಷ್ಟವಾದ, Path breaking ಆದ ಆತ್ಮಕಥನ ಖಂಡಿತವಾಗಿಯೂ ಬೇರೆ ಬೇರೆ ಭಾಷೆಗಳಿಗೆ ಹೋಗಬೇಕು ಎಂದು ನನಗೆ ಅನಿಸುತ್ತದೆ. ಇನ್ನೊಮ್ಮೆ ಮೊಗಳ್ಳಿ ಅವರಿಗೆ ಅಭಿನಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ!

-ಡಾ. ಎಂ. ಎಸ್ ಆಶಾದೇವಿ
ಖ್ಯಾತ ವಿಮರ್ಶಕರು, ಬೆಂಗಳೂರು

ನಿರೂಪಣೆ: ಶಿವರಾಜ್ ಮೋತಿ
8884262860

(ಮಾರ್ಚ್ 17, 2024 ರಂದು Banglore international Centre ಅಲ್ಲಿ ನಡೆದ ಮೊಗಳ್ಳಿ ಗಣೇಶ್ ಅವರ ನಾನೆಂಬುದು ಕಿಂಚಿತ್ತು ಎಂಬ ಅನುಭವ ಕಥನದ ಚರ್ಚೆಯಲ್ಲಿ ಈ ನಾಡಿನ ಖ್ಯಾತ ವಿಮರ್ಶಕಿ ಡಾ. ಎಂ. ಎಸ್ ಆಶಾದೇವಿ ಅವರು ಕೃತಿಯ ಬಗ್ಗೆ ಮಾತನಾಡಿದನ್ನು ಅಕ್ಷರರೂಪಕ್ಕೆ ಶಿವರಾಜ್ ಮೋತಿ ಅವರು ತಂದುಕೊಟ್ಟಿದ್ದಾರೆ.)

You cannot copy content of this page

Exit mobile version