Home ರಾಜಕೀಯ ದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

ದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

0

ಮೈತ್ರಿ ಆಗುವುದು ಸಮಾನ ಮನಸ್ಥಿತಿ ತತ್ವ ಸಿದ್ದಾಂತ ಇದ್ದವರಲ್ಲಿ ಹಾಗೂ ಸಮಾನ ಸಾಮರ್ಥ್ಯವಿದ್ದವರ ನಡುವೆ. ಆದರೆ ರಕ್ಕಸ ವಿನಾಶಕಾರಿ ಶಕ್ತಿ ಹೊಂದಿರುವ ಸಂಘಪರಿವಾರದ ಜೊತೆ ಸೋತು ತನ್ನ ಅಸ್ತಿತ್ವಕ್ಕಾಗಿ ಪರದಾಡುವ ಚಿಕ್ಕ ಪಕ್ಷ ಮಾಡಿಕೊಳ್ಳುತ್ತಿರುವುದು ಮೈತ್ರಿಯಲ್ಲಾ ಶರಣಾಗತಿ. ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡುವ ಉದ್ದೇಶದ ಪಕ್ಷವೊಂದು, ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡಿ ಏಕಾಧಿಪತ್ಯ ಸ್ಥಾಪಿಸಬಯಸುವ ವಿಧ್ವಂಸಕ ಪಕ್ಷದ ಜೊತೆ ಕೈಜೋಡಿಸುವುದು ಅಪಾಯಕಾರಿ ನಿರ್ಧಾರ ಶಶಿಕಾಂತ ಯಡಹಳ್ಳಿ .

ದೀಪದಹುಳು ಬೆಳಕೆಂದು ಆಕರ್ಷಿತವಾಗಿ ಬೆಂಕಿಗೆ ಬಿದ್ದು ರೆಕ್ಕೆ ಸುಟ್ಟುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ದೇವೇಗೌಡರಿಗೇನಾಗಿದೆ ಅದೂ ಈ ವಯಸ್ಸಲ್ಲಿ? ಅಸ್ತಿತ್ವ ಉಳಿಸಿಕೊಳ್ಳುವ ಧಾವಂತದಲ್ಲಿ ಬಿಜೆಪಿ ಎಂಬ ಬೆಂಕಿಯ ಜ್ವಾಲೆಗೆ ಬೀಳುವ ಆತುರ ಯಾಕೆ? ಜೀವನ ಪರ್ಯಂತ ಅದು ಹೇಗೋ ಕಾಪಿಟ್ಟುಕೊಂಡು ಬಂದಿದ್ದೇನೆ ಎಂದು ನಂಬಿಸಿದ್ದ ಜ್ಯಾತ್ಯಾತೀತ ಸಿದ್ದಾಂತಕ್ಕೆ ಹೀಗೆ ಹಾಡುಹಗಲೇ  ಎಳ್ಳು ನೀರು ಬಿಟ್ಟು ಕೋಮುವಾದಿಗಳೊಂದಿಗೆ ಕೈಜೋಡಿಸುವ ಅನಿವಾರ್ಯತೆ ಈ ರಾಜಕೀಯ ಭೀಷ್ಮನಿಗೆ ಇತ್ತಾ?

ಇಲ್ಲಿಯವರೆಗೂ ಬಿಜೆಪಿ ಪಕ್ಷದ ಜೊತೆಗೆ ಹೋದ ಯಾವುದಾದರೂ ಪಕ್ಷ ತನ್ನ ಮೂಲ ಅಸ್ತಿತ್ವವನ್ನು ಉಳಿಸಿಕೊಂಡು ತಲೆ ಎತ್ತಿದ ಉದಾಹರಣೆ ಇದೆಯಾ? ಬಿಎಸ್ಪಿ ಅಂತಾ ಬಹುಜನರ ಪಕ್ಷ ದುರ್ಬಲಗೊಂಡು ಸರ್ವನಾಶವಾಗಿದ್ದು ಇದೇ ಬಿಜೆಪಿ ಸಾಂಗತ್ಯದಿಂದ. ಕೈಜೋಡಿಸಿ ಕೈಬಿಟ್ಟ ಶಿವಸೇನೆ ಚಿಂದಿಯಾಗಿದ್ದೂ ಈ ಬೆಂಕಿ ಪಕ್ಷದ ಸಹವಾಸದಿಂದ. ಜೊತೆಯಾದ ಪಕ್ಷಗಳನ್ನು ಒಡೆದ ಸಾಧನೆ ಬಿಜೆಪಿಗರದು. ಎಲ್ಲರನ್ನೂ ಎಲ್ಲವನ್ನೂ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಬೇಡಾದಾಗ ಬಿಸಾಕಿ ಬೆಳೆಯುವ ರಕ್ಕಸ ತಾಕತ್ತು ಸಂಘಪರಿವಾರಕ್ಕಿದೆ. ಇದು ಗೊತ್ತಿದ್ದೂ ದೇವೇಗೌಡರು ಬಿಜೆಪಿ ಜೊತೆ ಮೈತ್ರಿಗೆ ಮುಂದಾದರಾ? 

ಜೆಡಿಎಸ್ ಎನ್ನುವುದು ಪಕ್ಕಾ ಜಾತಿವಾದಿ, ಅವಕಾಶವಾದಿ ಪಕ್ಷ ಎಂದು ಗೊತ್ತಾದಾಗ, ಬಿಜೆಪಿ ಯ ಬಿ ಟೀಮ್ ಎಂದು ರಾಜ್ಯದ ಜನತೆಗೆ ಅರಿವಾದಾಗ ಆ ಪಕ್ಷವನ್ನು 2023 ರ ಚುನಾವಣೆಯಲ್ಲಿ ನೆಲಕಚ್ಚಿಸಿದ್ದರು. ತೆರೆಮರೆಯ ಬಿಜೆಪಿ ಸಹವಾಸ ಬಿಟ್ಟಿದ್ದರೆ, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ನಾಡು, ನುಡಿ, ನೆಲ, ಜಲ, ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದರೆ, ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣದಿಂದ ದೂರಾಗಿದ್ದರೆ, ಕುಟುಂಬ ರಾಜಕಾರಣದ ನೆಗೆಟಿವ್ ಇಮೇಜಿನಿಂದ ಹೊರಬರಲು ಪ್ರಯತ್ನಿಸಿದ್ದರೆ, ಇವತ್ತು ದೇವೇಗೌಡರು ಕಟ್ಟಿ ಬೆಳೆಸಿದ ಈ ಪಕ್ಷಕ್ಕೆ ಇಂತಹ ದುರ್ಗತಿ ಬರುತ್ತಿರಲಿಲ್ಲ. ಹೀನಾಯ ಸೋಲಿನ ನಂತರವಾದರೂ ತನ್ನ ತಪ್ಪು ನಿರ್ಧಾರಗಳನ್ನು ಸರಿಪಡಿಸಿಕೊಂಡು ಇನ್ನು ಐದು ವರ್ಷಗಳ ಕಾಲ ಜನರ ಧ್ವನಿಯಾಗಿದ್ದರೆ, ನಿಜವಾದ ಅರ್ಥದಲ್ಲಿ ಕರ್ನಾಟಕದ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷವಾಗಿದ್ದರೆ ಮತ್ತೆ ಪುಟಿದೇಳಬಹುದಾಗಿತ್ತು. ಆದರೆ ಸೋಲಿನ ಹತಾಶೆ, ಅಧಿಕಾರವಿಲ್ಲದ ನಿರಾಶೆಗಳು ದೇವೇಗೌಡರನ್ನು ಹೀಗೆ ತಪ್ಪು ನಿರ್ಧಾರ ತೆಗೆದು ಕೊಳ್ಳುವಂತೆ ಮಾಡಿದೆ. ಅಪಾತ್ರರ ಜೊತೆ ಕೈಜೋಡಿಸುವಂತೆ ಪ್ರೇರೇಪಿಸಿದೆ. ಹಾಗೂ ಅವರ ಧೃತರಾಷ್ಟ್ರ ಮೋಹವೂ ಮಗನ ಮಾತಿಗೆ ಕಟ್ಟು ಬೀಳುವಂತೆ ಮಾಡಿದೆ. 

ಇದು ಬೇಕಿರಲಿಲ್ಲ. ಬಿಜೆಪಿ ಜೊತೆ ಸೇರಿ ಲೋಕಸಭೆ ಚುನಾವಣೆಯಲ್ಲಿ ಎರಡೋ ಮೂರೋ ಸೀಟು ಗೆದ್ದರೂ, ದೇವೇಗೌಡರ ಕುಟುಂಬದ ಯಾರೋ ಒಬ್ಬರು ಕೇಂದ್ರ ಸರಕಾರದಲ್ಲಿ ಮಂತ್ರಿಯಾದರೂ ಕರ್ನಾಟಕದಲ್ಲಿ ಬೇರುಗಳನ್ನು ಕಳೆದುಕೊಂಡಿರುವ ಜೆಡಿಎಸ್ ಪಕ್ಷ ಮತ್ತೆ ಚಿಗುರಲು ಸಾಧ್ಯವಿಲ್ಲ. ಚಿಗಿತು ಬೆಳೆಯಬೇಕೆಂದರೂ ಬಿಜೆಪಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಜೆಡಿಎಸ್ ಪಕ್ಷದ ಅಳಿದುಳಿದ ನಾಯಕರನ್ನೂ ಹಾಗೂ ಕಾರ್ಯಕರ್ತರನ್ನೂ ಮತ್ತು ಮತದಾರರನ್ನೂ ತನ್ನತ್ತ ಸೆಳೆದುಕೊಳ್ಳುವ ಮೂಲಕ ಬಿಜೆಪಿ ಬಲಿಷ್ಟವಾಗಲು ಸರ್ವರೀತಿಯಲ್ಲಿ ಪ್ರಯತ್ನಿಸುವುದಂತೂ ಸತ್ಯ. ಮೈಸೂರು ಮಂಡ್ಯ ಪ್ರಾಂತ್ಯದಲ್ಲಿರುವ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟೇ ಬಿಜೆಪಿ ಹೈಕಮಾಂಡ್ ದೇವೇಗೌಡರನ್ನು ಅಪ್ಪಿಕೊಳ್ಳುತ್ತಿದೆ. ಅದೇ ಮತದಾರರಿಗೆ ಕೋಮುವ್ಯಾಧಿಯ ಸೋಂಕನ್ನು ತಗುಲಿಸಿ, ಧರ್ಮಾಂಧತೆಯ ವಿಷವನ್ನು ಕುಡಿಸಿ, ಹುಸಿ ರಾಷ್ಟ್ರೀಯತೆಯ ಭಾವನೆ ಕೆರಳಿಸಿ ತಮ್ಮತ್ತ ಸೆಳೆಯುವ ಕೆಲಸವನ್ನು ಇಡೀ ಸಂಘ ಪರಿವಾರ ಸಂಘಟನಾತ್ಮಕವಾಗಿ ಮಾಡುವ ಮೂಲಕ ಜೆಡಿಎಸ್ ನೆಲೆಯನ್ನೇ ಆಕ್ರಮಿಸಿಕೊಳ್ಳುತ್ತದೆ. ಇದರ ಅರಿವಿದ್ದೋ ಇಲ್ಲಾ ತಕ್ಷಣದ ಅಸ್ತಿತ್ವದ ಸೆಳೆತಕ್ಕೆ ಒಳಗಾಗಿಯೋ ದೇವೇಗೌಡರು ತಮ್ಮದೇ ಪಕ್ಷವನ್ನು ಸಂಘಪರಿವಾರದ ಮನುವಾದಿ ಹೋಮಕ್ಕೆ ಹವಿಸ್ಸಾಗಿ ಅರ್ಪಿಸುತ್ತಿದ್ದಾರೆ. ಇದರ ಪರಿಣಾಮ ಮಾತ್ರ ಪ್ರಾದೇಶಿಕ ಪಕ್ಷವೊಂದರ ಅವನತಿ ಅಷ್ಟೇ. ಇದೆಲ್ಲಾ ಅಧಿಕಾರ ಮೋಹಿ ಕುಮಾರಸ್ವಾಮಿಯವರಿಗೆ ಅರ್ಥವಾಗದಿದ್ದರೂ ದೇವೇಗೌಡರು ಅರಿತಿಲ್ಲವೆಂದೇನಿಲ್ಲ. ಆದರೆ ಅವರು ಅಸಹಾಯಕರಾಗಿದ್ದಾರೆ. ಸ್ವಂತ ವಿವೇಚನೆಯನ್ನು ಕಳೆದುಕೊಂಡಿದ್ದಾರೆ. ಕುರುಕ್ಷೇತ್ರ ಯುದ್ದದಲ್ಲಿ ಶರಶಯ್ಯೆಯಲ್ಲಿ ಮಲಗಿ ಸಂಕಟಪಡುತ್ತಿದ್ದ ಭೀಷ್ಮನಂತಾಗಿದ್ದಾರೆ. 

ಮೈತ್ರಿ ಆಗುವುದು ಸಮಾನ ಮನಸ್ಥಿತಿ ತತ್ವ ಸಿದ್ದಾಂತ ಇದ್ದವರಲ್ಲಿ ಹಾಗೂ ಸಮಾನ ಸಾಮರ್ಥ್ಯವಿದ್ದವರ ನಡುವೆ. ಆದರೆ ರಕ್ಕಸ ವಿನಾಶಕಾರಿ ಶಕ್ತಿ ಹೊಂದಿರುವ ಸಂಘಪರಿವಾರದ ಜೊತೆ ಸೋತು ತನ್ನ ಅಸ್ತಿತ್ವಕ್ಕಾಗಿ ಪರದಾಡುವ ಚಿಕ್ಕ ಪಕ್ಷ ಮಾಡಿಕೊಳ್ಳುತ್ತಿರುವುದು ಮೈತ್ರಿಯಲ್ಲಾ ಶರಣಾಗತಿ. ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡುವ ಉದ್ದೇಶದ ಪಕ್ಷವೊಂದು, ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡಿ ಏಕಾಧಿಪತ್ಯ ಸ್ಥಾಪಿಸಬಯಸುವ ವಿಧ್ವಂಸಕ ಪಕ್ಷದ ಜೊತೆ ಕೈಜೋಡಿಸುವುದು ಅಪಾಯಕಾರಿ ನಿರ್ಧಾರ. ಇದು ಕನ್ನಡಿಗರಿಗೆ ಮಾಡಿದ ದ್ರೋಹ. ಈ ವಿದ್ರೋಹವನ್ನು ಮಾಡಿದ ಕುಮಾರಸ್ವಾಮಿಯವರನ್ನು, ಅದಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟು ಸಮರ್ಥಿಸಿಕೊಳ್ಳುತ್ತಿರುವ ದೇವೇಗೌಡರನ್ನು ಕನ್ನಡಿಗರು ಎಂದೂ ಕ್ಷಮಿಸಲಾರರು. ಕನ್ನಡಿಗರ ಸ್ವಾಭಿಮಾನವನ್ನು ಸರ್ವಾಧಿಕಾರಿಗೆ ಅಡವಿಟ್ಟ ಅಕ್ಷಮ್ಯಕ್ಕೆ ಕನ್ನಡಿಗರು ಪಾಠ ಕಲಿಸದೇ ಇರಲಾರರು. ಅವಕಾಶವಾದಿತನ, ಜಾತಿವಾದಿತನಗಳಿಗೆ ಮುಂದಿನ ಚುನಾವಣೆಗಳಲ್ಲಿ ಸೋಲಾಗದೇ ಇರದು. ಜೆಡಿಎಸ್ ಸರ್ವನಾಶವನ್ನು ಕಾಲಭೈರವೇಶ್ವರನಿಂದಲೂ ತಡೆಯಲಾಗದು. ಬಲಿಷ್ಟ ಪ್ರಾದೇಶಿಕ ಪಕ್ಷದ ಅಸ್ತಿತ್ವ ಇಲ್ಲದೇ ಇರುವಾಗ ಒಕ್ಕೂಟ ವ್ಯವಸ್ಥೆಗೆ ಈ ರಾಷ್ಟ್ರೀಯ ಪಕ್ಷಗಳಿಂದ ಹಾನಿ ಆಗದೇ ಇರದು. ರಾಷ್ಟ್ರೀಯ ಪಕ್ಷಗಳ ದಮನ ಲೂಟಿ ನಿಲ್ಲದು.

ಶಶಿಕಾಂತ ಯಡಹಳ್ಳಿ

ಲೇಖಕರು

ಇದನ್ನೂ ಓದಿ-

‘ಲೋಕ’ ಸಮರ : ಜೆಡಿಎಸ್ ಜೊತೆ ಕೈಜೋಡಿಸಲು ಹೈಕಮಾಂಡ್ ಒಪ್ಪಿಗೆ – ಯಡಿಯೂರಪ್ಪ https://peepalmedia.com/high-command-agrees-to-join-hands-with-jds/

You cannot copy content of this page

Exit mobile version