ಉತ್ತರಾಖಂಡದ ಅಲ್ಮೋರಾದಲ್ಲಿ ಸೋಮವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮರ್ಚುಲಾ ಬಳಿ ಪ್ರಯಾಣಿಕರ ಬಸ್ ಹಳ್ಳಕ್ಕೆ ಬಿದ್ದಿದೆ. ಬಸ್ ಅಪಘಾತದಲ್ಲಿ ಒಟ್ಟು 45 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ 20 ಜನರ ಸಾವನ್ನು ವಿಪತ್ತು ನಿರ್ವಹಣಾ ಇಲಾಖೆ ದೃಢಪಡಿಸಿದ್ದು, 20 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಕ್ಷಣಾ ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಸದ್ಯ ಎಸ್‌ಎಸ್‌ಪಿ ಅಲ್ಮೋರಾ ಕೂಡ ಸ್ಥಳಕ್ಕೆ ತೆರಳಿದ್ದಾರೆ. ನೈನಿತಾಲ್ ಪೊಲೀಸ್ ತಂಡ ಸ್ಥಳಕ್ಕೆ ತಲುಪುತ್ತಿದೆ. ಮೂರು ಜಿಲ್ಲೆಗಳ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದು, 6 ಎಸ್‌ಡಿಆರ್‌ಎಫ್ ತಂಡಗಳು ಸಹ ಸ್ಥಳಕ್ಕೆ ತೆರಳಿವೆ.
ಮಾಹಿತಿಯ ಪ್ರಕಾರ, ಇದುವರೆಗೆ 15 ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇರೆಡೆಗೆ ಕಳುಹಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಎಸ್‌ಎಸ್‌ಪಿ ಅಲ್ಮೋರಾ ದೇವೇಂದ್ರ ಪಿಂಚಾ ಹೇಳಿದ್ದಾರೆ. ಹಲವು ಮೃತದೇಹಗಳು ಬಸ್ಸಿನಲ್ಲಿ ಸಿಲುಕಿಕೊಂಡಿವೆ. ಬಸ್ ಕಟ್ ಮಾಡಿ ಶವ ತೆಗೆಯುವ ಯತ್ನ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಘಟನೆಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿವೆ. ಅಗತ್ಯವಿದ್ದರೆ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಏರ್‌ಲಿಫ್ಟ್ ಮಾಡಲು ಸಹ ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.