ಆಹಾರದ ಬಿಲ್ ಮೇಲೆ ಆಟೋಮ್ಯಾಟಿಕ್ ಆಗಿ ಸರ್ವಿಸ್ ಚಾರ್ಜ್ ವಿಧಿಸಲು ರೆಸ್ಟೋರೆಂಟ್‌ಗಳಿಗೆ ಯಾವುದೇ ಕಾನೂನು ಬೆಂಬಲವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಇಂತಹ ಕ್ರಮಗಳು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗುತ್ತವೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ತಿಳಿಸಿದೆ. ಈ ನಿಯಮವನ್ನು ಪಾಲಿಸದ ರೆಸ್ಟೋರೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು CCPA ಗೆ ಸಂಪೂರ್ಣ ಅಧಿಕಾರವಿದೆ ಎಂದು 2025 ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಅನೇಕ ರೆಸ್ಟೋರೆಂಟ್‌ಗಳು ಬಿಲ್ ಮೇಲೆ ಶೇ. 10 ರಷ್ಟು ಸರ್ವಿಸ್ ಚಾರ್ಜ್ ಅನ್ನು ಕಡ್ಡಾಯವಾಗಿ ವಿಧಿಸುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರುಗಳು ಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿದ CCPA, ದೇಶದಾದ್ಯಂತ ಈಗಾಗಲೇ 27 ರೆಸ್ಟೋರೆಂಟ್‌ಗಳ ವಿರುದ್ಧ ಕ್ರಮ ಜರುಗಿಸಿದೆ.
2022ರಲ್ಲಿ ಬಿಡುಗಡೆಯಾದ ಮಾರ್ಗಸೂಚಿಗಳ ಪ್ರಕಾರ, ಸರ್ವಿಸ್ ಚಾರ್ಜ್ ಬಗ್ಗೆ ಗ್ರಾಹಕರಿಗೆ ಮೊದಲೇ ಮಾಹಿತಿ ನೀಡಬೇಕು ಮತ್ತು ಅದನ್ನು ಪಾವತಿಸುವುದು ಅಥವಾ ಬಿಡುವುದು ಸಂಪೂರ್ಣವಾಗಿ ಗ್ರಾಹಕರ ಇಚ್ಛೆಗೆ ಬಿಟ್ಟಿದ್ದಾಗಿರಬೇಕು.
ಸರ್ವಿಸ್ ಚಾರ್ಜ್ ಪಾವತಿಸಲು ನಿರಾಕರಿಸುವ ಗ್ರಾಹಕರನ್ನು ರೆಸ್ಟೋರೆಂಟ್‌ಗೆ ಪ್ರವೇಶಿಸದಂತೆ ತಡೆಯುವುದು ಅಥವಾ ಅವರಿಗೆ ಸೇವೆ ನೀಡಲು ನಿರಾಕರಿಸುವುದು ಕಾನೂನುಬಾಹಿರವಾಗಿದೆ. ಗ್ರಾಹಕರನ್ನು ಯಾವುದೇ ಕಾರಣಕ್ಕೂ ಸರ್ವಿಸ್ ಚಾರ್ಜ್ ನೀಡಲು ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೆ, ಆಹಾರದ ಬಿಲ್‌ನಲ್ಲಿ ಸರ್ವಿಸ್ ಚಾರ್ಜ್ ಅನ್ನು ಸೇರಿಸಿ, ಅದರ ಮೇಲೆ ಮತ್ತೆ ಜಿಎಸ್‌ಟಿ (GST) ವಿಧಿಸುವುದು ಕೂಡ ನಿಯಮಗಳ ಬಾಹಿರವಾಗಿದೆ ಎಂದು ಸಚಿವಾಲಯ ಎಚ್ಚರಿಸಿದೆ.
