Home ಬೆಂಗಳೂರು ನರೇಗಾ ಚರ್ಚೆಗೆ ನಾನು ಸಿದ್ಧ, ‘ಡೈಲಾಗ್ ವೀರ’ ಕುಮಾರಸ್ವಾಮಿ ಬರಲಿ: ಡಿ.ಕೆ. ಶಿವಕುಮಾರ್ ಪಂಥಾಹ್ವಾನ

ನರೇಗಾ ಚರ್ಚೆಗೆ ನಾನು ಸಿದ್ಧ, ‘ಡೈಲಾಗ್ ವೀರ’ ಕುಮಾರಸ್ವಾಮಿ ಬರಲಿ: ಡಿ.ಕೆ. ಶಿವಕುಮಾರ್ ಪಂಥಾಹ್ವಾನ

0

ನರೇಗಾ ವಿಚಾರದಲ್ಲಿ ಚರ್ಚೆ ನಡೆಸಲು ತನಗೆ ಯಾವುದೇ ವಿಶೇಷ ಸಿದ್ಧತೆಯ ಅಗತ್ಯವಿಲ್ಲ, ಎಲ್ಲಾ ಅಂಕಿ-ಅಂಶಗಳು ತನ್ನ ಬೆರಳ ತುದಿಯಲ್ಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದರು. “ಇಂದು ಸಂಜೆಯಿಂದಲೇ ಚರ್ಚೆಗೆ ಬರಲಿ. ಕನಕಪುರ ತಾಲೂಕು ನರೇಗಾ ಜಾರಿಯಲ್ಲಿ ನಂ.1 ಎಂದು ಕೇಂದ್ರದ ಬಿಜೆಪಿ ಸರ್ಕಾರವೇ ಪ್ರಶಸ್ತಿ ನೀಡಿದೆ. ಈ ಸತ್ಯ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅಥವಾ ವಿಜಯೇಂದ್ರ ಅವರಿಗೆ ತಿಳಿದಿದೆಯೇ?” ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ಕನಕಪುರದಲ್ಲಿ ಅಕ್ರಮ ನಡೆದಿದೆಯೇ ಎಂದು ತಿಳಿಯಲು ಕೇಂದ್ರ ಸರ್ಕಾರ ಈಗಾಗಲೇ ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿದೆ ಎಂದು ನೆನಪಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನರೇಗಾ (MNREGA) ಯೋಜನೆಯ ಅನುಷ್ಠಾನದ ಕುರಿತು ಬಹಿರಂಗ ಚರ್ಚೆ ನಡೆಸುವಂತೆ ವಿರೋಧ ಪಕ್ಷಗಳು ನೀಡಿದ್ದ ಸವಾಲನ್ನು ಸ್ವೀಕರಿಸುವುದಾಗಿ ಘೋಷಿಸಿದರು. ಅಧಿವೇಶನ, ಮಾಧ್ಯಮ ಅಥವಾ ಯಾವುದೇ ಸಾರ್ವಜನಿಕ ವೇದಿಕೆಯಲ್ಲಾದರೂ ಚರ್ಚೆಗೆ ಬರಲು ತಾನು ಸಿದ್ಧ ಎಂದು ಅವರು ಗುಡುಗಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಡೈಲಾಗ್ ವೀರ’ ಎಂದು ಲೇವಡಿ ಮಾಡಿದ ಶಿವಕುಮಾರ್, “ಚರ್ಚೆಗೆ ಮೊದಲು ಕುಮಾರಸ್ವಾಮಿ ಅವರೇ ಬಂದರೆ ಬಹಳ ಒಳ್ಳೆಯದು, ಅವರನ್ನು ಸ್ವಾಗತಿಸುತ್ತೇನೆ” ಎಂದರು. ಸಿಎಂ ಸಿದ್ದರಾಮಯ್ಯ ಅವರನ್ನು ‘ಲೀಸ್ಡ್ ಸಿಎಂ’ ಎಂದು ಟೀಕಿಸಿರುವ ಕುಮಾರಸ್ವಾಮಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಂತಹ ಟೀಕೆಗಳಿಗೆ ತಿರುಗೇಟು ನೀಡುವ ಸಾಮರ್ಥ್ಯ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಅವರು ತಿಳಿಸಿದರು.

ಒಕ್ಕಲಿಗ ಯುವ ಉದ್ಯಮಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಶ್ರಮವಹಿಸಿ ಕೆಲಸ ಮಾಡುತ್ತಿರುವ ಯುವ ಉದ್ಯಮಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಎಲ್ಲಿ ಶ್ರಮವಿದೆಯೋ ಅಲ್ಲಿ ಫಲ ಸಿಕ್ಕೇ ಸಿಗುತ್ತದೆ” ಎಂದು ಹೇಳುವ ಮೂಲಕ ಉದ್ಯಮಿಗಳಿಗೆ ಶುಭ ಹಾರೈಸಿದರು. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರು ಹಳ್ಳಿಯಿಂದಲೇ ರಾಜಕಾರಣ ಮಾಡಲಿ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

You cannot copy content of this page

Exit mobile version