- ಎಂ ನಾಗರಾಜ ಶೆಟ್ಟಿ
ಹಣವಂತರು ಕೈ ಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ ……
ಬಿchi ಯವರ ತಿಂಮ ಬೆಂಗಳೂರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಸಂಬಳದ ದಿನ. ಆಗೆಲ್ಲ ಸಂಬಳ ರೆವಿನ್ಯೂ ಸ್ಟಾಂಪ್‌ಮೇಲೆ ಸಹಿ ಹಾಕಿಸಿ ಒಟ್ಟಿಗೇ ಕೊಡುತ್ತಿದ್ದುದರಿಂದ ಪಗಾರದ ಮೊತ್ತವನ್ನು ಜೇಬಲ್ಲಿ ಜೋಪಾನವಾಗಿರಿಸಿ, ಆಗಾಗ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದ. ಅವನ ದುರಾದೃಷ್ಟಕ್ಕೆ ಕಳ್ಳರು ಅಡ್ಡಗಟ್ಟಿದರು. ತಿಂಮ ಜೇಬಲ್ಲಿ ಕೈಯಿಟ್ಟುಕೊಂಡೇ ಪಾರಾಗಲು ನೋಡಿದ. ಅವರು ಬಿಡಲಿಲ್ಲ. ಹಣವನ್ನೆಲ್ಲಾ ಕೊಟ್ಟು ಬಿಡು ಎಂದು ಬಲವಂತ ಮಾಡಿದರು. ತಿಂಮ ನಿರಾಕರಿಸಿದ. ಕಳ್ಳರು ” ಹಣ ಕೊಡದಿದ್ದರೆ ತಲೆ ತೆಗೆಯುತ್ತೇವೆ ” ಎಂದು ಬೆದರಿಸಿದರು. ತಿಂಮ ಅಂಜದೆ, ಅಳುಕದೆ ಹೇಳಿದ ” ಬೆಂಗಳೂರಲ್ಲಿ ತಲೆ ಇಲ್ಲದೆ ಬದುಕಬಹುದು. ಹಣ ಇಲ್ಲದೆ ಬದುಕಲು ಸಾಧ್ಯವಿಲ್ಲ! “
ತಿಂಮನ ಮಾತು ಆ ಕಾಲಕ್ಕೂ ಸತ್ಯ, ಈ ಕಾಲಕ್ಕೂ ಸತ್ಯ! ಬೆಂಗಳೂರಲ್ಲಿ ಮಾತ್ರವಲ್ಲ, ಎಲ್ಲೂ ಹಣವಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ವರದರಾಜ ಮುದಲಿಯಾರ್( ನಾಯಗನ್ ಸಿನಿಮಾ ಇವರ ಬದುಕನ್ನು ಆಧರಿಸಿದ್ದು ) ಜೇಬಲ್ಲಿ ಒಂದು ರೂಪಾಯಿಯನ್ನು ಇಟ್ಟುಕೊಳ್ಳುತ್ತಿರಲಿಲ್ಲವಂತೆ. ಹೋದಲ್ಲಿ ಬಂದಲ್ಲಿ ನೋಡಿಕೊಳ್ಳುವವರು ಇದ್ದುದರಿಂದ ಹಣ ಇಟ್ಟುಕೊಳ್ಳುವ ಅಗತ್ಯ ಇರಲಿಕ್ಕಿಲ್ಲ. ಈ ರೀತಿ ಯಾರಾದರೂ ನೋಡಿಕೊಳ್ಳುವವರು ಇಲ್ಲದಿದ್ದರೆ ದುಡ್ಡಿಲ್ಲದೆ ಬದುಕಲು ಸಾಧ್ಯವೇ ಇಲ್ಲ!
ಹಣ ಚಲಾವಣೆಗೆ ಬರುವ ಮೊದಲು ಇದ್ದಿದ್ದು ವಸ್ತು, ಸೇವೆಗಳ ವಿನಿಮಯ ಪದ್ಧತಿ ( Barter System). ಈ ಪದ್ಧತಿ ಹಲವು ವರ್ಷ ಜಾರಿಯಲ್ಲಿದ್ದು, ಅದರಲ್ಲಿ ಅನುಕೂಲಗಳೂ, ಕೊರತೆಗಳೂ ಇದ್ದವು. ಆದ್ದರಿಂದ, ಇದರ ಬದಲಾಗಿ ಹಣದ ಚಲಾವಣೆ ರೂಢಿಗೆ ಬಂತು. ನವೀನ ಅರ್ಥಶಾಸ್ತ್ರದ ಜನಕನೆಂದು ಹೆಸರು ವಾಸಿಯಾದ ಆಡಂ ಸ್ಮಿತ್ ಪ್ರಕಾರ ವಿನಿಮಯ ಪದ್ಧತಿ ಬದಲಾಗಲು ಸರ್ಕಾರಗಳು ಕಾರಣವಲ್ಲ. ಅದೇನೆ ಇರಲಿ, ಹಣದ ಚಲಾವಣೆ ರೂಢಿಯಾದ ಮೇಲೆ ವಸ್ತು ವಿನಿಮಯ ಪದ್ಧತಿ ಸಾರ್ವತ್ರಿಕವಾಗಿ ನಿಂತೇ ಹೋಯಿತು.
ಹಣದ ಚಲಾವಣೆಯಿಂದ ಹಲವು ಅನುಕೂಲತೆಗಳು ಒದಗಿದರೂ ಇಂದು ಜಗತ್ತನ್ನು ಹಣವೇ ಆಳುತ್ತಿದೆ ಎಂದರೆ ತಪ್ಪಾಗದು. ನಮ್ಮಲ್ಲಿ ರೂಪಾಯಿ ಇರುವಂತೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನ ಚಲಾವಣೆಯ ಮಾಧ್ಯಮ ( ಕರೆನ್ಸಿ ) ಗಳಿವೆ; ಡಾಲರ್, ಯುರೋ, ಯೆನ್, ಪೌಂಡ್ ಇತ್ಯಾದಿ ಕರೆನ್ಸಿಗಳನ್ನು ಚಲಾವಣೆ ಮಾಡಲಾಗುತ್ತಿದೆ.
ದೇಶದ ಆರ್ಥಿಕತೆಯನ್ನು ಹೊಂದಿಕೊಂಡು ಕರೆನ್ಸಿಗಳ ಮೌಲ್ಯ ನಿರ್ಣಯವಾಗುತ್ತದೆ. ಅಮೇರಿಕದ ಡಾಲರ್ ಪ್ರಬಲ ಚಲಾವಣಾ ಮಾಧ್ಯಮವಾಗಿದ್ದು ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುತ್ತಿದೆ. ನಮ್ಮ ಯುವ ಜನರು ಅಮೇರಿಕಕ್ಕೆ ಹಾರಲು ಹಾತೊರೆಯಲು ಕಾರಣ ಡಾಲರ್ ಮೌಲ್ಯವೇ. ಡಾಲರ್ ಜಗತ್ತಿನ ಕರೆನ್ಸಿಗಳ ಮಾನಕವಾಗಿ ಇರುವುದರಿಂದ ಅಮೇರಿಕಾ ದೊಡ್ಡಣ್ಣನೆನಿಕೊಂಡಿದೆ.
ಇದು ಕೇವಲ ದೇಶಗಳ ವಿಷಯವಷ್ಟೇ ಅಲ್ಲದೆ, ಜನಜೀವನದಲ್ಲೂ ʼ ದುಡ್ಡೇ ದೊಡ್ಡಪ್ಪ ʼ ಅಥವಾ ʼ ದುಡ್ಡಿರುವವನೇ ದೊಡ್ಡಪ್ಪ ʼ ಎನ್ನುವಂತ ವಾತಾವರಣ ಇದೆ. ಸಾರ್ವಜನಿಕರಲ್ಲಿ ಹಣ ಇದ್ದವ- ಆತ ಯಾವ ರೀತಿಯಲ್ಲಾದರೂ ಸಂಪಾದಿಸಲಿ- ದೊಡ್ಡ ಮನುಷ್ಯ ಎನಿಸಿಕೊಳ್ಳುತ್ತಾನೆ. ಅವನು ಹಣ ಸಂಪಾದಿಸಿದ ಮಾರ್ಗವನ್ನು ಜನರು ಮರೆತೇ ಬಿಡುತ್ತಾರೆ. ಹಣ ಇದ್ದರೆ ಅತ್ಯಂತ ಭ್ರಷ್ಟನೆನಿಸಿಕೊಂಡವನೂ ಗೌರವಾರ್ಹ ವ್ಯಕ್ತಿಯಾಗುತ್ತಾನೆ. ಹಣ ಬಲದಿಂದಲೇ ಭ್ರಷ್ಟರು, ಸುಳ್ಳರು, ಕಪಟಿಗಳು ಚುನಾವಣೆಗಳಲ್ಲಿ ಅಯ್ಕೆಯಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ.
ರಾಮ ಮನೋಹರ ಲೋಹಿಯಾ ನೆಹರೂ ವಿರುದ್ಧ ಫೂಲ್‌ಪುರದಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ ಠೇವಣಿ ಕಟ್ಟುವಷ್ಟು ಹಣವೂ ಅವರಲ್ಲಿರಲಿಲ್ಲ. ಪ್ರಚಾರಕ್ಕೆ ಕಾರು ಜೀಪು ಇಲ್ಲದೆ- ಯಾರಾದರೂ ಹಿತೈಷಿಗಳು ಒದಗಿಸಿದಾಗಷ್ಟೇ ಬಳಸಬಹುದಾಗಿತ್ತು. ಲೋಹಿಯಾ ನೆಹರೂ ವಿರುದ್ಧ ಸ್ಪರ್ಧಿಸಿ ಸೋತರೂ ಗಣನೀಯ ಪ್ರಮಾಣದಲ್ಲಿ ಮತ ಪಡೆದರು. ಈಗ ಅಂತಹಾ ಪರಿಸ್ಥಿತಿ ಇಲ್ಲ. ಲೋಹಿಯಾ, ಶಾಂತವೇರಿ ಯಾರೇ ಆಗಲಿ, ಹಣದ ಪ್ರಭಾವದ ಮುಂದೆ ಇಡುಗಂಟು ಕಳೆದುಕೊಳ್ಳುತ್ತಿದ್ದರು.
ಹಣದ ಪ್ರಭಾವ ಸಾರ್ವಜನಿಕ ಜೀವನವನ್ನು ಕಲುಷಿತಗೊಳಿಸುತ್ತಿದೆ. ಹಣ ಗಳಿಸುವುದೇ ಬದುಕಿನ ಪರಮೋಚ್ಛ ಗುರಿ ಎಂಬಂತಾಗಿದೆ.
ಹಣದಿಂದ ನೆಮ್ಮದಿ, ಸಂತೋಷ ಸಿಗುತ್ತದೆ ಎನ್ನುವುದು ಮರೀಚಿಕೆಯನ್ನು ಹಿಡಿಯ ಹೊರಟಂತೆ! ಆದರೆ ಹಣದ ಅವಶ್ಯಕತೆಯೂ ಇದೆ. ಹಣ ಇಲ್ಲದೆ ಸಂತನಂತೆ ಬದುಕಲು ಸಾಧ್ಯವಿಲ್ಲ. ಹಣಕ್ಕೆ ಬದುಕನ್ನು ನಿಯಂತ್ರಿಸುವ ಶಕ್ತಿ ಇದೆ. ಹೊಟ್ಟೆ ತುಂಬಿಸಲು ಹಣ ಎಷ್ಟು ಅಗತ್ಯವೋ ಹಾಗೇ ಎಷ್ಟೋ ಪ್ರತಿಭಾವಂತರು ಬದುಕಿಗೆ ಆಸರೆ ಇಲ್ಲದೆ ಬಯಸಿದ್ದನ್ನು ಸೃಷ್ಟಿಸಲಾರದೆ ಸೊರಗಿದ್ದಾರೆ. ಹಸಿವಿನಲ್ಲಿ ಚಿಂತನೆ, ವಿಚಾರ, ಅನ್ವೇಷಣೆ, ಸೃಜನ ಕ್ರಿಯೆಗಳು ಹುಟ್ಟಲಾರವು.
ಪ್ರವಚನ ಕೇಳಲು ದನಗಳನ್ನು ಹಟ್ಟಿಯಲ್ಲಿ ಬಿಟ್ಟು ಓಡಿ ಬಂದ ದನಕಾಯುವವನೊಬ್ಬನನ್ನು ಬುದ್ಧ “ ಬಂಧು, ನೀನು ಊಟ ಮಾಡಿದ್ದೀಯಾ? ” ಕೇಳುತ್ತಾನೆ. ಆತ ಇಲ್ಲವೆನ್ನಲು “ಮೊದಲು ಊಟ ಮಾಡು ಆಮೇಲೆ ಪ್ರವಚನ ಕೇಳು” ಎನ್ನುತ್ತಾನೆ. ನೆರೆದಿದ್ದವರಿಗೆ ಆಶ್ಚರ್ಯವಾಗುತ್ತದೆ. ಬುದ್ಧ “ ಹಸಿದ ಹೊಟ್ಟೆಗೆ ಧರ್ಮವನ್ನು ತುಂಬಲಾಗುವುದಿಲ್ಲ ” ಎಂದು ಅವರಿಗೆ ಹೇಳುತ್ತಾನೆ.
ವಿಕಾಸವಾದದ ಮೂಲಕ ಹೊಸ ಆಲೋಚನೆಗಳಿಗೆ ನಾಂದಿ ಹಾಡಿದ ಚಾರ್ಲ್ಸ್ ಡಿಕನ್ಸ್ ತಂದೆ ಅಪಾರ ಸಂಪತ್ತುಳ್ಳವರಾಗಿದ್ದರು. ತಂದೆ ಡಾರ್ವಿನ್ನನ ಸಂಶೋಧನೆಗಳನ್ನು ಪ್ರೋತ್ಸಾಹಿಸಿ, ಖರ್ಚು ವೆಚ್ಚದ ಹೊಣೆ ಹೊತ್ತ ದ್ದರಿಂದ, ಆತ ಹಲವು ದೇಶಗಳನ್ನು ಸುತ್ತಿ, ಅಪಾರ ಪ್ರಮಾಣದಲ್ಲಿ ಮಾದರಿಗಳನ್ನು ಸಂಗ್ರಹಿಸಿ ವಿಕಾಸವಾದವನ್ನು ರೂಪಿಸಲು ಸಾಧ್ಯವಾಯಿತು.
ಭಾರತದಲ್ಲಿಯೂ ಇಂತಹ ಪ್ರತಿಭಾವಂತರು ಇದ್ದಿರಬಹುದು; ಈಗಲೂ ಇರುತ್ತಾರೆ. ಸಾಮಾಜಿಕ ಕಟ್ಟು ಪಾಡುಗಳು ಮತ್ತು ದಿನ ನಿತ್ಯದ ಕೋಟಲೆಗಳು ಹಲವರ ಪ್ರತಿಭೆಯನ್ನು ನುಂಗಿ ಹಾಕಿದೆ. ಹೊಟ್ಟೆ ತುಂಬಿಸುವ ಚಿಂತೆ ಕಡಿಮೆಯಾಗದೆ ಬೇರೆ ಚಿಂತನೆಗಳು ಹುಟ್ಟುವುದು ಕಷ್ಟವೆನ್ನುವುದನ್ನು ಅಲ್ಲಗಳೆಯಲಾಗದು.
ನಮ್ಮ ಸಂವಿಧಾನದ ನಿರ್ಮಾತೃಗಳಿಗೆ ಈ ಚಿಂತನೆ ಇದ್ದಿರಬಹುದು. ಆ ಕಾರಣದಿಂದಲೇ ಸಂವಿಧಾನದ ಪ್ರಸ್ತಾವನೆಯಲ್ಲಿ ಅವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಗಳನ್ನು ಒದಗಿಸುವ ನಿರ್ಣಯ ಮಾಡಿರಬೇಕು. ಗಮನಿಸಬೇಕಾದ ವಿಷಯವೆಂದರೆ ಸಂವಿಧಾನದ ಪ್ರಸ್ತಾಪನೆಯಲ್ಲಿ ಸಾಮಾಜಿಕ ನ್ಯಾಯದ ಜತೆಗೇ ಆರ್ಥಿಕ ನ್ಯಾಯ ಬಂದಿದೆ. ರಾಜಕೀಯ ನ್ಯಾಯ ಆ ನಂತರ ಬರುತ್ತದೆ.
ಅವುಗಳಲ್ಲಿ ಯಾವುದು ಅನುಷ್ಠಾನಕ್ಕೆ ಬಂದಿದೆ ಎನ್ನುವ ಪ್ರಶ್ನೆ ಈಗ ಬೇಡ. ಆದರೆ ಆರ್ಥಿಕ ಸಬಲತೆ ಬಹಳ ಮುಖ್ಯವಾದುದು ಅನ್ನುವುದರಲ್ಲಿ ಅನುಮಾನವಿಲ್ಲ. ನಮ್ಮ ದೇಶದಲ್ಲಿ ಏಳು ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ ಎಪ್ಪತ್ತಕ್ಕಿಂತಲೂ ಹೆಚ್ಚು ಅಪೌಷ್ಟಿಕತೆ ಇದೆ. 70 ರಿಂದ 80 ಲಕ್ಷ ಭೂ ರಹಿತ ಕಾರ್ಮಿಕರಿದ್ದಾರೆ. ಕೋಟ್ಯಂತರ ಜನ ಅರೆ ಉದ್ಯೋಗಿಳು, ನಿರುದ್ಯೋಗಿಗಳು ಇದ್ದಾರೆ. ಇವರಿಗೆಲ್ಲ ಆರ್ಥಿಕ ನ್ಯಾಯ ಗಗನ ಕುಸುಮವಾಗಿದೆ. ಕೌಶಲಗಳು, ಪ್ರತಿಭೆಗಳು ಹೊರ ಹೊಮ್ಮಲು ಸರಿಯಾದ ವಾತಾವರಣ ಬೇಕು. ಕೆಲವು ವರ್ಷಗಳಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ದೇಶ ನಮ್ಮದಾಗುವುದಾದರೂ ಆ ಮಟ್ಟದಲ್ಲಿ ನಾವು ಕಲೆ, ಸಾಹಿತ್ಯದಲ್ಲಿ ಉನ್ನತಿಯನ್ನು ಪಡೆದಿಲ್ಲ. ಒಲಿಂಪಿಕ್ ಕ್ರೀಡೆಗಳಲ್ಲಾಗಲೀ, ನೊಬೆಲ್ ಬಹುಮಾನದಲ್ಲಾಗಲೀ, ವೈಜ್ಞಾನಿಕ ಅನ್ವೇಷಣೆಯಲ್ಲಾಗಲೀ ನಾವು ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಇದ್ದಕ್ಕೆ ಸಾಮಾಜಿಕ ಅನಿಷ್ಟಗಳು ಕಾರಣವಾಗಿರುವಂತೆ ಹಸಿವೂ ಕಾರಣ.
ಅಭಿವೃದ್ಧಿ ಹೊಂದುವುದೆಂದರೆ ಒಂದು ವರ್ಗದ, ಬಂಡವಾಳಶಾಹಿಗಳ, ರಾಜಕಾರಣಿಗಳ, ಮಠಾಧೀಶರ ಅಭಿವೃದ್ಧಿಯಲ್ಲ; ಸಂಪತ್ತು ಕೆಲವೇ ವ್ಯಕ್ತಿಗಳ ಪಾಲಾಗುವುದಲ್ಲ. ಅಭಿವೃದ್ಧಿಯ ಫಲ ಅತ್ಯಂತ ಕೆಳಗಿನವರಿಗೂ ತಲುಪಬೇಕು. ಸಾಮಾನ್ಯ ಮನುಷ್ಯನೂ ಗೌರವದಿಂದ ಬಾಳುವಂತಾಗಬೇಕು; ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ನಿತ್ಯದ ಅಗತ್ಯಗಳಿಗೆ ಕೊರತೆಯಾಗಬಾರದು. ಆಗ ಸಂವಿಧಾನ ಹೇಳುವ ಆರ್ಥಿಕ ನ್ಯಾಯ ಸಕಲರಿಗೂ ದೊರಕುತ್ತದೆ.