Home ಅಂಕಣ ಸಂಸತ್ತಿನ ಪೂರ್ವಸೂರಿಗಳು -12 : ಬಹುಮುಖ ಪ್ರತಿಭೆ ‘ಹೆಮ್ ಬರುವಾ’ : ಸ್ವಾತಂತ್ರ್ಯ ಹೋರಾಟ, ಸಾಹಿತ್ಯ...

ಸಂಸತ್ತಿನ ಪೂರ್ವಸೂರಿಗಳು -12 : ಬಹುಮುಖ ಪ್ರತಿಭೆ ‘ಹೆಮ್ ಬರುವಾ’ : ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಕೃಷಿ.. ಎಲ್ಲದಕ್ಕೂ ಸೈ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹನ್ನೆರಡನೇ ಲೇಖನ

ಜನಸೇವೆಯಲ್ಲಿ ಅಚಲ ನಂಬಿಕೆಯಿಟ್ಟು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ, ರಾಜಕೀಯ ಮತ್ತು ಸಾಹಿತ್ಯ ಒಟ್ಟೊಟ್ಟಿಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ಹೇಮ್‌ ಬರುವಾ.

ಕವಿ, ಭಾಷಣಕಾರ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಂಸದೀಯ ಪಟುವಾಗಿದ್ದ ಹೇಮ್ ಬರುವಾ ಬಹುಮುಖ ವ್ಯಕ್ತಿತ್ವ ಹೊಂದಿದ್ದವರು. ರಾಜಕೀಯ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಜನಸೇವೆಯಲ್ಲಿ ಅಚಲ ನಂಬಿಕೆಯಿಟ್ಟು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ, ರಾಜಕೀಯ ಮತ್ತು ಸಾಹಿತ್ಯ ಒಟ್ಟೊಟ್ಟಿಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ಹೇಮ್‌ ಬರುವಾ. ಅವರ ರಾಜಕಾರಣ ಮತ್ತು ಸಾಹಿತ್ಯಗಳೆರಡೂ ಜನಸೇವೆಯ ಗುರಿಯನ್ನೇ ಹೊಂದಿದ್ದವು.

ಒಬ್ಬ ಸಂಸದನಾಗಿ ಬರುವಾ ಅತ್ಯುತ್ತಮವಾಗಿ ಕೆಲಸ ಮಾಡಿದವರು. 1957 ರಿಂದ 1970 ರವರೆಗೆ ಲೋಕಸಭೆಯಲ್ಲಿ ತನ್ನ ಛಾಪು ಮೂಡಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ್ ಟೈಮ್ಸ್‌ ಪತ್ರಿಕೆಗಳು ಅವರನ್ನು ಜವಹರಲಾಲ್‌ ನೆಹರೂ, ಜಿ.ಬಿ. ಪಂತ್‌ ಮತ್ತು ಹಿರೇನ್‌ ಮುಖರ್ಜಿ ಮೊದಲಾದ ದಿಗ್ಗಜರ ಜೊತೆಗೆ ಹತ್ತು ಅಗ್ರಗಣ್ಯ ಸಂಸದರಲ್ಲಿ ಒಬ್ಬರು ಎಂದು ಗುರುತಿಸಿದ್ದವು. ತನ್ನ ಅವಧಿಯಲ್ಲಿ ವಿಯೆಟ್ನಾಂ ಯುದ್ಧದಿಂದ ಹಿಡಿದು ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟುವ ತನಕದ ವಿಷಯಗಳ ಕುರಿತು ಸುಮಾರು 850 ಕ್ಕೂ ಹೆಚ್ಚು ಭಾಷಣಗಳನ್ನು ಮಾಡಿದ್ದರು. ಅವರ ಪ್ರಶ್ನೆಗಳ ತೀವ್ರತೆ ಮತ್ತ ಸ್ಪಷ್ಟತೆ ಎಷ್ಟರ ಮಟ್ಟಿಗಿತ್ತೆಂದರೆ ಒಮ್ಮೆ ಸ್ವತಃ ನೆಹರೂ ಅವರು ಲೋಕಸಭಾ ಸ್ಪೀಕರ್‌ ಅವರಿಗೆ “ಈ ಪ್ರಶ್ನೆಗಳ ಬಾಲ ಮಾತ್ರ ತನಗೆ ಅರ್ಥವಾಗುತ್ತಿರುವುದು” ಎಂದು ದೂರು ನೀಡಿದ್ದರು.

ರಾಜಕಾರಣದ ಭ್ರಷ್ಟಾಚಾರದ ವಿರುದ್ಧ ಬರುವಾ ಕಟುವಾಗಿ ಟೀಕಿಸುತ್ತಿದ್ದರು. ತೈಲ ಸಚಿವಾಲಯದ ಒಳಗಿನ ಕೆಲಸಗಳನ್ನು ಸಾಕ್ಷ್ಯಾಧಾರ ಸಮೇತವಾಗಿ ಬಹಿರಂಗ ಪಡಿಸಿದ ಕಾರಣಕ್ಕೆ 1963 ರಲ್ಲಿ ಅಂದಿನ ಮಂತ್ರಿಯಾಗಿದ್ದ ಕೆ.ಡಿ. ಮಾಳವೀಯ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಬರುವಾ ಅವರ ಮಗ ಅಂಜನ್‌ ಬರುವಾ ಹೇಳುವಂತೆ “ಅವರ ದಿನಚರಿ ಶುರುವಾಗುವುದು ಬೆಳಿಗ್ಗೆ 7:30ರ ಹೊತ್ತಿಗೆ, ಒಂದು ಕಪ್‌ ಚಹಾ ಮತ್ತು ಪತ್ರಿಕೆಗಳ ಜೊತೆಗೆ. ಅವರು ಪತ್ರಿಕೆಗಳನ್ನು ಓದುವಾಗ ಅದರಲ್ಲಿ ಪ್ರಮುಖ ಸುದ್ದಿಗಳನ್ನು ಗೃಹ, ವಿದೇಶಾಂಗ, ಶಿಕ್ಷಣ, ರಾಸಾಯನಿಕ ಮತ್ತು ರಸಗೊಬ್ಬರ ಇತ್ಯಾದಿಯಾಗಿ ಗುರುತು ಮಾಡಿಕೊಳ್ಳುತ್ತಿದ್ದರು. ನಂತರ ಪತ್ರಿಕೆಯನ್ನು ನನ್ನ ಅಮ್ಮನ ಕೈಗೆ ನೀಡುತ್ತಿದ್ದರು. ಆಮೇಲೆ ಅಂದು ಸಂಸತ್ತಿನಲ್ಲಿ ಎತ್ತಬೇಕಾದ ಪ್ರಶ್ನೆಗಳನ್ನು ಸಿದ್ಧ ಪಡಿಸುತ್ತಿದ್ದರು. ಮೊದಲೆಲ್ಲ ಪ್ರಶ್ನೆಗಳನ್ನು ಅವರೇ ಸ್ವತಃ ಬರೆದುಕೊಳ್ಳುತ್ತಿದ್ದರು. ನಂತರ ಒಂದು ಟೈಪ್‌ರೈಟರ್‌ ಕೊಂಡು ಅದರಲ್ಲಿ ಟೈಪಿಸಲು ಆರಂಭಿಸಿದ್ದರು. ನಂತರ ಬೇಗಬೇಗನೇ ಸ್ನಾನ ಮುಗಿಸಿ, ಯೋಗ ಮಾಡಿ, ಉಪಹಾರ ಸೇವಿಸಿ ಹತ್ತು ಗಂಟೆ ಹೊತ್ತಿಗೆ ಸಂಸತ್ತಿಗೆ ಹೊರಡುತ್ತಿದ್ದರು. ಕೆಲವೊಮ್ಮೆ ಬಸ್‌ ಹತ್ತಿ ಹೋಗುತ್ತಿದ್ದರು. ಆದರೆ ಬಹುತೇಕ ದಿನಗಳಲ್ಲಿ ಅವರು ನಡೆದುಕೊಂಡೇ ಹೋಗುತ್ತಿದರು. ಬೆಳಗಿನ ಕಲಾಪಗಳ ನಂತರ ಮಧ್ಯಾಹ್ನ ಊಟದ ವಿರಾಮ ವೇಳೆಯಲ್ಲಿ ಅವರು ಪಾರ್ಲಿಮೆಂಟಿನ ಲೈಬ್ರರಿಗೆ ಹೋಗುತ್ತಿದ್ದರು. ಅಲ್ಲಿ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದರು. ಬಹುತೇಕ ಪ್ರಮುಖ ಚರ್ಚೆಗಳೆಲ್ಲ ಮಧ್ಯಾಹ್ನದ ನಂತರ ನಡೆಯುತ್ತಿದ್ದವು. ಆ ಚರ್ಚೆಗಳಿಗಾಗಿ ಮತ್ತೆ ಅವರು ಸದನಕ್ಕೆ ಬರುತ್ತಿದ್ದರು. ಬಹುತೇಕ ದಿನಗಳಲ್ಲಿ ಅವರು ಸಂಜೆಯ ಐದು ಗಂಟೆ ಹೊತ್ತಿಗೆ ಮನೆಗೆ ತಲುಪುತ್ತಿದ್ದರು. ತನಗೆ ಬಂದ ಪತ್ರಗಳಿಗೆ ತಕ್ಷಣವೇ ಉತ್ತರವನ್ನು ಬರೆಯುತ್ತಿದ್ದರು. ಸಂಜೆ ಆರೂವರೆ ಹೊತ್ತಿಗೆ ಅಮ್ಮ ಮತ್ತು ಅಪ್ಪ ಒಟ್ಟಿಗೆ ವಾಕಿಂಗ್‌ ಹೋದರೆ ಮತ್ತೆ ಮರಳುವುದು ಎಂಟು ಗಂಟೆಯ ಹೊತ್ತಿಗೆ. ರಾತ್ರಿ ಒಂಭತ್ತು ಗಂಟೆಗೆ ರೇಡಿಯೋ ವಾರ್ತೆಗಳನ್ನು ಕೇಳುತ್ತಾ ಒಟ್ಟಿಗೆ ಊಟ ಮಾಡುತ್ತಿದ್ದೆವು. ಸಂಸದರಾಗಿದ್ದ ಅವಧಿಯಲ್ಲಿ ಏಳು ತಿಂಗಳುಗಳು ಅಸ್ಸಾಂನಲ್ಲಿ ಕಳೆಯುತ್ತಿದ್ದರೆ, ಅಧಿವೇಶನ ನಡೆಯುವ ಐದು ತಿಂಗಳು ದೆಹಲಿಯಲ್ಲಿ ಕಳೆಯುತ್ತಿದ್ದರು.”

1915 ಏಪ್ರಿಲ್‌ 22 ರಂದು ಅಸ್ಸಾಂನ ತೇಜ್‌ಪುರದಲ್ಲಿ ಬರುವಾ ಅವರ ಜನನ. ಶಾಲಾ ಶಿಕ್ಷಣದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆಯುತ್ತಾರೆ. 1941 ರಲ್ಲಿ  ಜೋರ್ಹಟ್‌ನ ಜೆಬಿ ಕಾಲೇಜಿನಲ್ಲಿ ಅಸ್ಸಾಮಿ ಮತ್ತು ಇಂಗ್ಲಿಷ್‌ ಉಪನ್ಯಾಸಕರಾಗಿ ಕೆಲಸಕ್ಕೆ ಸೇರುತ್ತಾರೆ. ಕ್ವಿಟ್‌ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಜೈಲಿನಲ್ಲಿಟ್ಟ ಕಾರಣ ಆ ಕೆಲಸ ಕೇವಲ ಒಂದು ವರ್ಷಕ್ಕಷ್ಟೇ ಸೀಮಿತವಾಗಿತ್ತು. ಜೈಲಿನಿಂದ ಬಿಡುಗಡೆಗೊಂಡು ಬಂದ ನಂತರ ಅವರು ಗುವಾಹಟಿಯ ಬಿ. ಬರುವಾ ಕಾಲೇಜು ಸೇರುತ್ತಾರೆ. ಆ ಕಾಲೇಜು ಆಗ ಕಾಮರೂಪ ಅಕಾಡೆಮಿಯಲ್ಲಿ ನಡೆಯುತ್ತಿದ್ದ ರಾತ್ರಿ ಕಾಲೇಜಾಗಿತ್ತು. ಅಲ್ಲಿ ದಿವಂಗತ ಗೋಪಿನಾಥ್‌ ಬೋರ್ದೊಲೋಯ್‌ (ಅಸ್ಸಾಂನ ಮೊದಲ ಮುಖ್ಯಮಂತ್ರಿ) ಅವರಿಂದ ಕಾಲೇಜು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. 1967 ರವರೆಗೆ ಅವರು ಆ ಕೆಲಸದಲ್ಲಿ ಮುಂದುವರಿಯುತ್ತಾರೆ.

ಅವರು ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿದ್ದರು. 1948 ರಲ್ಲಿ ಆಚಾರ್ಯ ನರೇಂದ್ರ ದೇವಾ, ಜಯಪ್ರಕಾಶ್‌ ನಾರಾಯಣ್‌ ಮತ್ತು ರಾಮಮನೋಹರ್‌ ಲೋಹಿಯಾ ಮೊದಲಾದವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷ ಸೇರಲೆಂದು ಕಾಂಗ್ರೆಸ್‌ ತೊರೆಯುತ್ತಾರೆ. 1957 ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗುವಾಹಟಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1962 ರಲ್ಲಿ ಮತ್ತೆ ಗುವಾಹಟಿಯಿಂದ ಮತ್ತು 1971 ರಲ್ಲಿ ಮಂಗಲ್ಡೋಯ್‌ನಿಂದ ಲೋಕಸಭೆಗೆ ಆಯ್ಕೆಯಾಗುತ್ತಾರೆ. 1971 ರಲ್ಲಿ ಅಸ್ಸಾಂನಿಂದ ಪ್ರಕಟವಾಗುತ್ತಿದ್ದ ಅಸ್ಸಾಂ ಎಕ್ಸ್‌ಪ್ರೆಸ್‌ ಪತ್ರಿಕೆಯ ಸಂಪಾದಕರಾಗುತ್ತಾರೆ.

ಶಿಕ್ಷಣವೆಂಬುದು ಅವರಿಗೆ ರಕ್ತಗತವಾಗಿತ್ತೇನೋ! ದೆಹಲಿಯಲ್ಲಿ ತನ್ನ ಬಿಡುವಿಲ್ಲದ ಕೆಲಸಗಳ ನಡುವೆಯೂ ಅವರು ಸಂಸತ್ತಿನ ಕೆಲವು ಉದ್ಯೋಗಿಗಳಿಗೆ ಇಂಗ್ಲಿಷ್‌ ಭಾಷೆಯನ್ನು ಕಲಿಸಿಕೊಡುತ್ತಿದ್ದರು. ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ವ್ಯವಹರಿಸಲು ಇಂಗ್ಲಿಷ್‌ ಭಾಷೆ ಕಲಿಯಬೇಕೆಂದು ಬಯಸಿದ ಹರ್ಯಾಣದ ಸಂಸದರೊಬ್ಬರು, ಬರುವಾ ಅವರ ಇಂಗ್ಲಿಷ್‌ ತರಗತಿಗೆ ಹಾಜರಾಗುತ್ತಿದ್ದರು.

ರಾಷ್ಟ್ರೀಯ ರಾಜಕಾರಣಕ್ಕೆ ಬರುವಾ ಬಂದದ್ದು ಆಕಸ್ಮಿಕವಾಗಿದ್ದರೂ ಕೂಡ, ಸಾಹಿತ್ಯ ಪ್ರವೇಶ ಮಾತ್ರ ಅವರ ಸಮರ್ಪಣೆಯ ಫಲವಾಗಿತ್ತು. ಸ್ವತಃ ಬರುವಾ ಒಮ್ಮೆ ಹೀಗೆ ಹೇಳಿದ್ದರು, “ಈ ಬದುಕಿಗಾಗಿ ನಾನು ರಾಜಕೀಯದಲ್ಲಿದ್ದೇನೆ ಮತ್ತು ನಂತರದ ಬದುಕಿಗಾಗಿ ಸಾಹಿತ್ಯದ ಕೆಲಸ ಮಾಡುತ್ತಿದ್ದೇನೆ.” ಅವರನ್ನು ಅದಾಗಲೇ ಆಧುನಿಕ ಅಸ್ಸಾಮಿ ಕಾವ್ಯದ ಮೊದಲಿಗಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಸಂಸದರಾದ ನಂತರವೂ ತನ್ನ ಸಾಹಿತ್ಯ ಕೆಲಸವನ್ನು ಅವರು ಮುಂದುವರಿಸಿದ್ದರು.

1954 ರಲ್ಲಿ ಅವರ ಪ್ರಸಿದ್ಧ ಕೃತಿ ದಿ ರೆಡ್ ರಿವರ್ ಅಂಡ್ ದಿ ಬ್ಲೂ ಹಿಲ್ಸ್ ಪ್ರಕಟವಾಯಿತು. ಅದೊಂದು ದೊಡ್ಡ ಗೆಲುವಾಗಿತ್ತು. ವಿದ್ವಾಂಸರಾದ ಕೃಷ್ಣಕಾಂತ ಹಂಡಿಕ್ ಹೀಗೆ ಬರೆಯುತ್ತಾರೆ, “ಪ್ರಾಂಶುಪಾಲ ಹೆಮ್ ಬರುವಾ ಅವರ ದಿ ರೆಡ್ ರಿವರ್ ಅಂಡ್ ದಿ ಬ್ಲೂ ಹಿಲ್ಸ್  ಅಸ್ಸಾಮಿನ ಸುಸಂಸ್ಕೃತ ಪರಿಚಯ ನೀಡುತ್ತದೆ. ಚೆನ್ನಾಗಿ ಗ್ರಹಿಸಿಕೊಂಡು, ಆಹ್ಲಾದಕರ ಶೈಲಿಯಲ್ಲಿ ಬರೆಯಲ್ಪಟ್ಟಿದೆ. ಇತಿಹಾಸ, ಸಾಹಿತ್ಯ, ಜನಾಂಗಗಳು ಮತ್ತು ರಾಜಕೀಯದ ಕುರಿತು ಈ ಪುಸ್ತಕವು ಸಂಕ್ಷಿಪ್ತವಾಗಿ, ಆದರೆ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತದೆ. ಅಸ್ಸಾಂ ಮತ್ತು ಅದರ ಸಮಸ್ಯೆಗಳ ಕುರಿತು ಅರಿಯಲು ಬಯಸುವ ಯಾರಿಗೇ ಆದರೂ ಈ ಪುಸ್ತಕವನ್ನು ಶಿಫಾರಸು ಮಾಡಬಹುದು.”

ಇಂಗ್ಲಿಷ್ ಮತ್ತು ಅಸ್ಸಾಮಿ ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದ ಕೆಲವೇ ಲೇಖಕರಲ್ಲಿ ಬರುವಾ ಒಬ್ಬರು. ನಿಜದಲ್ಲಿ ಅವರು ಹೊರ ಜಗತ್ತನ್ನು ಅಸ್ಸಾಮಿಗೆ ಪರಿಚಯಿಸುವ ಜೊತೆಗೆ, ಅಸ್ಸಾಮನ್ನು ಹೊರ ಜಗತ್ತಿಗೆ ಪರಿಚಯಿಸಿದರು. ದಿ ರೆಡ್ ರಿವರ್ ಅಂಡ್ ದಿ ಬ್ಲೂ ಹಿಲ್ಸ್ , ಮಾಡರ್ನ್ ಅಸ್ಸಾಮಿ ಪೊಯೆಟ್ರಿ , ಫೋಕ್ ಸಾಂಗ್ಸ್ ಆಫ್ ಇಂಡಿಯಾ ಮತ್ತು ಅಸ್ಸಾಮಿ ಲಿಟರೇಚರ್ ಅವರು ಇಂಗ್ಲಿಷ್‌ನಲ್ಲಿ ಬರೆದ ಕೆಲವು ಕೃತಿಗಳು. ಅದೇ ರೀತಿ ಅವರ ನಾಲ್ಕು ಪ್ರವಾಸ ಕಥನಗಳು ಹೊರ ಜಗತ್ತನ್ನು ಅಸ್ಸಾಂ ಓದುಗರಿಗೆ ಪರಿಚಯಿಸಿದವು. ಅವರ ಕವಿತೆಗಳು ಸಾಂಪ್ರದಾಯಿಕ ಶೈಲಿಗಳನ್ನು ಮುರಿದವು. ಆ ಮೂಲಕ ಒಂದು ಹೊಸ ತಲೆಮಾರಿನ ಕವಿಗಳನ್ನೇ ಸೃಷ್ಟಿಸಿತು.

ತನ್ನ ಬಿಡುವಿಲ್ಲದ ಕೆಲಸಗಳ ನಡುವೆಯೂ ಬರುವಾ ಬಹಳವೇ ಓದುತ್ತಿದ್ದರು. ಅವರು ಯಾವಾಗಲೂ ಹೇಳುತ್ತಿದ್ದ ಮಾತೊಂದು ಹೀಗಿದೆ, “ನಮಗೆಲ್ಲರಿಗೂ ಓದದೇ ಇರುವುದಕ್ಕೆ ಹಲವು ನೆಪಗಳಿವೆ, ಆದರೆ ಓದು ಇಷ್ಟ ಪಡುವಾತ ಮಾತ್ರ ಅದಕ್ಕಾಗಿ ಸಮಯ ಕಂಡುಕೊಳ್ಳುತ್ತಾನೆ.” ಬಹುಷ ಅವರು ನೆಹರೂ ಅವರಿಂದ ಸ್ಪೂರ್ತಿ ಪಡೆದಿದ್ದರು ಎಂದು ಕಾಣುತ್ತದೆ. ನೆಹರೂರನ್ನು ಅವರು “ವಿಶ್ವದ ಅತ್ಯಂತ ಬಿಡುವಿಲ್ಲದ ವ್ಯಕ್ತಿ” ಎಂದು ಕರೆಯುತ್ತಿದ್ದರು. ಆದರೂ ನೆಹರೂ ಓದಿಗಾಗಿ ಸಮಯ ಕಂಡುಕೊಳ್ಳುತ್ತಿದ್ದರು. ಬರುವಾ ನಂತರದಲ್ಲಿ ಹೀಗೆ ನೆನೆಯುತ್ತಾರೆ, “ಅದು 1962 ಏಪ್ರಿಲ್‌ 17 ಬೆಳಿಗ್ಗೆ 10:45 ರ ಹೊತ್ತು. ಅಂದು ಪಂಡಿತ್‌ಜೀಗೆ ನಾನು ನನ್ನ ಎರಡು ಪುಸ್ತಕಗಳನ್ನು ನೀಡಿದೆ. ದಿ ರೆಡ್ ರಿವರ್ ಅಂಡ್ ದಿ ಬ್ಲೂ ಹಿಲ್ಸ್ ಮತ್ತು ಐಡಲ್‌ ಅವರ್ಸ್.‌ ಪುಸ್ತಕಗಳನ್ನು ಪಡೆದುಕೊಂಡ ಅವರು ಸದನದಲ್ಲಿಯೇ ಅದನ್ನು ಓದಲು ಪ್ರಾರಂಭಿಸಿದ್ದರು. ನಾನು ನಿಜಕ್ಕೂ ಸಂತೋಷಗೊಂಡಿದ್ದೆ. ಸದನದಲ್ಲಿ ಅಧಿವೇಶನ ನಡೆಯುತ್ತಿತ್ತು. ಆದರೆ ಅವರು ಮಾತ್ರ ಓದಿನಲ್ಲಿ ತಲ್ಲೀನರಾಗಿದ್ದರು. ಅದಾಗಿ ಒಂದು ವರ್ಷದ ನಂತರ ನನ್ನ ಇನ್ನೊಂದು ಪುಸ್ತಕ ದಿ ಫೋಕ್‌ ಸಾಂಗ್ಸ್‌ ಆಫ್‌ ಇಂಡಿಯಾ ವನ್ನು ಅವರಿಗೆ ನೀಡಿದೆ. ನನ್ನ ಕೈಯಿಂದ ಪುಸ್ತಕಗಳನ್ನು ಪಡೆದುಕೊಂಡ ಅವರು ಒಂದು ವರ್ಷದ ಹಿಂದೆ ನಾನು ನೀಡಿದ್ದ ಪುಸ್ತಕಗಳ ಕುರಿತು ಮಾತನಾಡಿದರು. ಅದರಲ್ಲೂ ಐಡಲ್‌ ಅವರ್ಸ್‌ ಕುರಿತು ಚರ್ಚೆಗೆ ಶರುವಿಟ್ಟರು. ನನಗೆ ನನ್ನ ಕುತೂಹಲವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರನ್ನು ಕೇಳಿದೆ, “ಮಾನ್ಯ ಪ್ರಧಾನಮಂತ್ರಿಗಳೇ, ನೀವು ಅದು ಹೇಗೆ ಇಷ್ಟೊಂದು ಸಂಗತಿಗಳನ್ನು ನೆನಪಿಟ್ಟುಕೊಳ್ಳುತ್ತೀರಿ? ನಿಮಗೆ ಓದಲು ಸಮಯ ಯಾವಾಗ ಸಿಗುತ್ತದೆ? ನೀವೊಬ್ಬ ಬಹಳ ಬ್ಯುಸಿ ವ್ಯಕ್ತಿ.” ಅದಕ್ಕೆ ನೆಹರೂ ಅವರು ನಗುತ್ತಾ ಹೀಗೆ ಹೇಳಿದರು, “ಹೇಮ್‌, ನಿಮಗೆ ಬರೆಯೋದಕ್ಕೆ ಎಲ್ಲಿಂದ ಸಮಯ ಸಿಗುತ್ತದೆ? ನೀವೇನೂ ಕಡಿಮೆ ಕೆಲಸ ಮಾಡುವ ವ್ಯಕ್ತಿಯೇ?”

ಮಾಜಿ ರಾಜ್ಯಸಭಾ ಸದಸ್ಯ ಕುಮಾರ್‌ ದೀಪಕ್‌ ದಾಸ್‌, ಬರುವಾ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ ನೆಹರೂ ಅವರ ಮಾತುಗಳನ್ನು ಅದು ಹೇಗೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರೆಂದೂ, ಅವರನ್ನು ಬೆಳಗಿನ ಉಪಹಾರಕ್ಕೆ ಮನೆಗೆ ಕರೆಯುತ್ತಿದ್ದರೆಂದೂ ನೆನಪಿಸಿಕೊಳ್ಳುತ್ತಾರೆ.

ಬರುವಾ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಅವರ ಆತ್ಮೀಯರೊಬ್ಬರು ಹೀಗೆ ಹೇಳಿದ್ದರಂತೆ, “ನೀವು ಚುನಾವಣೆಯಲ್ಲಿ ಗೆದ್ದಿರುವುದು ನನಗೆ ಸಂತಸ ತಂದಿದೆ. ಆದರೆ ಮತ್ತೊಂದು ಕಡೆ ನೀವು ಇನ್ನು ಮುಂದೆ ಸಾಹಿತ್ಯಕ್ಕೆ ಬೆನ್ನು ಹಾಕುತ್ತೀರಿ ಎಂಬ ವಿಷಯದಲ್ಲಿ ಬೇಸರವೂ ಇದೆ.” ಆದರೆ ಆ ಗೆಳೆಯನ ಮಾತನ್ನು ಬರುವಾ ತಪ್ಪೆಂದು ಸಾಬೀತು ಮಾಡಿದರು. ಅವರ ಕೆಲವು ಅತ್ಯುತ್ತಮ ಸಾಹಿತ್ಯ ಕೃತಿಗಳು ಅವರ ದೆಹಲಿ ವಾಸದ ಕಾಲದಲ್ಲಿಯೇ ಬರೆಯಲ್ಪಟ್ಟವು.

ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‌ ಒಮ್ಮೆ ಅವರ ಬಳಿ ಹೀಗೆ ಹೇಳಿದ್ದರಂತೆ, “ಹೇಮ್‌, ನೀವು ಬರೆಯುತ್ತಿರುವುದು ನನಗೆ ಬಹಳ ಸಂತಸ ತಂದಿದೆ. ಕೊನೆಗೆ ನಿಮ್ಮ ಬರವಣಿಗೆಯಲ್ಲದೆ ಬೇರೇನೂ ಇಲ್ಲಿ ಉಳಿಯುವುದಿಲ್ಲ.” ರಷ್ಯಾ, ಥಾಯ್ಲೆಂಡ್‌, ಕಾಂಬೋಡಿಯಾ, ಮಲೇಷ್ಯಾ, ಲಾವೋಸ್, ಸಿಂಗಾಪುರ್, ಇಸ್ರೇಲ್ ಮತ್ತು ಯುನೈಟೆಡ್ ಕಿಂಗ್‌ಡಮ್‌ ಮೊದಲಾದ ದೇಶಗಳಲ್ಲಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅವರ ಇಂತಹ ಪ್ರಯಾಣಗಳ ಅನುಭವಗಳನ್ನು ಮೂರು ಜನಪ್ರಿಯ ಪ್ರವಾಸಕಥನಗಳಾಗಿ ಬರೆದರು: ರೊಂಗಾ ಕೊರೊಬಿರ್ ಫುಲ್ , ಇಸ್ರೇಲ್ ಮತ್ತು ಮೆಕಾಂಗ್ ನೋಯಿ ದೇಖಿಲು. 1972 ರಲ್ಲಿ ಹೇಮ್‌ ಬರುವಾ ಅಸ್ಸಾಂ ಸಾಹಿತ್ಯ ಸಭಾದ ಅಧ್ಯಕ್ಷರಾಗಿಯೂ ಆಯ್ಕೆಯಾಗುತ್ತಾರೆ.

ತೈಲ ಸಂಸ್ಕರಣಾ ಘಟಕ, ಬ್ರಹ್ಮಪುತ್ರ ಸೇತುವೆ ಮತ್ತು ಗುವಾಹಟಿಯ ರೈಲ್ವೇ ಪ್ರಧಾನ ಕಛೇರಿಯ ಸ್ಥಾಪನೆಯ ಚಳುವಳಿಗಳಿಂದ ಹಿಡಿದು ಗುಜರಾತಿನ ಭಾರತ ಪಾಕಿಸ್ತಾನ ಗಡಿಯಲ್ಲಿ ಸತ್ಯಾಗ್ರಹ ನಡೆಸುವ ತನಕ, ಹೇಮ್‌ ಬರುವಾ ಇಂಗ್ಲಿಷ್‌ ಮತ್ತು ಅಸ್ಸಾಮಿ ಭಾಷೆಯಲ್ಲಿ ಬರೆದರು ಮತ್ತು ಹಲವಾರು ಪುಸ್ತಕಗಳನ್ನೂ ಲೇಖನಗಳನ್ನೂ ಪ್ರಕಟಿಸಿದರು. ಅವರು ಇದೆಲ್ಲದರ ಜೊತೆಗೆ ಮಹತ್ತರ ಸಾಧನೆಯನ್ನು ಮಾಡಿದರು.

1977 ಏಪ್ರಿಲ್ 9 ರಂದು ತಮ್ಮ 62 ನೇ ವಯಸ್ಸಿನಲ್ಲಿ ಬರುವಾ ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version