Home ಅಂಕಣ ಕಠಾರಿ ಅಂಚು: Simply Horrible ; ಸರಳಾ ನಾಣಿ ಕಪಲ್

ಕಠಾರಿ ಅಂಚು: Simply Horrible ; ಸರಳಾ ನಾಣಿ ಕಪಲ್

0

ಸಾಮಾಜಿಕ, ಆರ್ಥಿಕ ಜನಗಣತಿಯಲ್ಲಿ ಭಾಗಿಯಾಗಲು ತಮ್ಮ ಸಿಂಪ್ಲಿಸಿಟಿಯನ್ನೇ ಮುಂದಿಟ್ಟು ತಪ್ಪಿಸಿಕೊಂಡ ಕರ್ನಾಟಕದ ಸಿಂಪಲ್ ಕಪಲ್ ‘ಸರಳಾ ನಾಣಿ’ ಬಗ್ಗೆ ಚಿಂತಕರಾದ ಚಂದ್ರಪ್ರಭ ಕಠಾರಿಯವರ ಒಂದು ಕಾಲ್ಪನಿಕ ವಿಡಂಬನಾತ್ಮಕ ಬರಹ “ಕಠಾರಿ ಅಂಚು”ನಲ್ಲಿ.. ತಪ್ಪದೇ ಓದಿ

ಬೆಳಗಿನ ಚುಮುಚುಮುಗುಟ್ಟುವ ಚಳಿಯಲ್ಲಿ ತಲೆಗೆ ಮಫ್ಲರ್, ಸೊಂಟಕ್ಕೆ ದಟ್ಟಿ ಸುತ್ತಿಕೊಂಡು  ಮನೆ ಮುಂದಿದ್ದ ಹುಲ್ಲುಹಾಸಿನಲ್ಲಿ ನಾಲಾಯಕ್ ಮೂರ್ತಿ ಕುಳಿತಿದ್ದ. ಇಂಗ್ಲೀಷ್ ವಾಣಿಜ್ಯ  ದಿನಪತ್ರಿಕೆಗಳೆಲ್ಲವನ್ನು ಒಂದೊಂದಾಗಿ ತಿರುವು ಹಾಕುತ್ತ ಕುಳಿತವನ ಮುಖ ಬಾಡಿದ ಕಮಲವಾಗಿತ್ತು. ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಯಾ ಹೆಣದ ವ್ಯಾಪಾರಿ ಟ್ರಂಪಣ್ಣ ಇತ್ತೀಚಿಗೆ ಹೆಂಡ ಕುಡಿದ ಮಂಗನಂತೆ ಆಡುತ್ತಿದ್ದದ್ದು ಅವನ ಚಿಂತೆಯನ್ನು ಹೆಚ್ಚಿಸಿತ್ತು. ತನ್ನ ದೇಶದ ಹಿತಾಸಕ್ತಿ ಕಾಯುವುದಕ್ಕಾಗಿ ಟ್ರಂಪಣ್ಣ ಹುಚ್ಚಾಪಟ್ಟೆ ಏರಿಸುತ್ತಿದ್ದ ಆಮದು ಸುಂಕದಿಂದ ನಾಕ್ ಮೂರ್ತಿಯ ಬಿಜಿನೆಸ್ ಗೆ ಹೊಡೆತ ಬಿದ್ದು, ರೂಪಾಯಿ ಬೆಲೆ ಡಾಲರ್ ಎದುರು ಮಕಾಡೆ ಮಲಗಿತ್ತು. ಅದೇ ಕಾರಣವಾಗಿ ತನ್ನದೇ ಕಂಪೆನಿಯ ಶೇರ್ ಗಳ ಮೌಲ್ಯ ಇಳಿಮುಖವಾಗುತ್ತಿದ್ದು – ಟ್ರಂಪಣ್ಣನ ಮೇಲೆ ಕೋಪಗೊಳ್ಳುವುದೊ ಅಥವಾ ವಿದೇಶಾಂಗ ನೀತಿಯ ಬಗ್ಗೆ ಕಡಲೆಕಾಯಿ ಸಿಪ್ಪೆಯಷ್ಟು ಜ್ಞಾನವಿರದ ನಮೋವನ್ನು ಜರೆಯಬೇಕೊ ಎಂದು ಗೊಂದಲದಲ್ಲಿದ್ದ.

ಅದೇನಾದರೂ ಇರಲಿ…ನಾಲ್ಕು ತಿಂಗಳ ಮೊಮ್ಮಗನಿಗೆ ಏನಾದರೂ ಉಡುಗೊರೆ ಕೊಡಲೇಬೇಕಲ್ಲವೇ?

“ಸರಳ…ಸರಳಾ…”
“ಏನೂಂದ್ರೆ…ಕರೆದ್ರಾ?”
ಕೈಮಗ್ಗದ ಕಾಟನ್ ಸೀರೆ ಉಟ್ಟು, ಕೈಲಿ ಸೌಟು ಹಿಡಿದು ಧಾವಿಸಿದ ಆ ಗೃಹಿಣಿಯ ಹಣೆಯ ಮೇಲೆ ಕಪ್ಪುಮಸಿ ತಾಗಿತ್ತು.
“ಇದೇನು ಮುಖವೆಲ್ಲಾ ಮಸಿ ಮಾಡ್ಕೊಂಡಿದ್ದೀಯ?”
“ಓಹ್…ಅದಾ…ಪುಳೀವಗರೆ ಮಾಡ್ತಿದ್ದೆ. ಬಾಂಡ್ಲಿ ಮಸಿ ತಾಗಿರಬೇಕು”
“ಬಟ್ಟೆಯಿಂದ ಒರೆಸಿಕೊಳ್ಳೋದು ತಾನೇ? ಅದು ಇರಲಿ…ಪಾಪು…ಮೊಮ್ಮಗನಿಗೆ ಏನು ಗಿಫ್ಟ್ ಕೊಡ್ಬೇಕು ಅಂತ ಡಿಸೈಡ್ ಮಾಡ್ಡೆ? ಶೇರ್ ಪ್ರೈಜ್ ಬೇರೆ ಕಮ್ಮಿಯಾಗ್ತಿದೆ!!”
“ಏನೂಂದ್ರೆ…ಅದಕ್ಯಾಕೆ ಅಷ್ಟು ಯೋಚ್ನೆ ಮಾಡ್ತೀರ? ಸಿಂಪಲ್ಲಾಗಿ ಒಂದು 240 ಕೋಟಿ ಕೊಟ್ಟರಾಯಿತು…ಹಾಗೆ ತಿರುಪತಿ ದೇವಸ್ಥಾನಕ್ಕೆ ಒಂದೆರೆಡು ಕೆಜಿ ಚಿನ್ನದ ಶಂಖ ಕೊಡೋಣ. ಪಾಪುಗೆ ತಿಮ್ಮಪ್ಪ ಸ್ವಾಮಿ ಆರ್ಶೀವಾದ ಬೇಕಲ್ವ?”
“ಕರೆಕ್ಟ್…ಯು ಆರ್ ಬ್ರಿಲೆಯೆಂಟ್…ಹಾಗೆ ಮಾಡುವ…ಸಧ್ಯಕ್ಕೆ ಒಂದು ಲೋಟ ಬಿಸಿ ಕಾಫಿ ಕೊಡ್ತಿಯ?”
“ಆಗಲಿ ಅಂದ್ರೆ…ಒಂದೇ ನಿಮಿಷ. ಡಿಕಾಕ್ಷನ್ ಇಳಿತಿದೆ. ಬಂದೆ…ಫ್ರೆಶ್ ಸ್ಟ್ರಾಂಗ್ ಕಾಫಿ ಮಾಡಿ ತರ್ತೇನೆ”
“ಓಡ ಬೇಡ…ನಿಲ್ಲು…ಇಂಟರ್ ವ್ಯೂ ಮಾಡೋದಿಕ್ಕೆ ಯಾವ್ದೋ ಮೀಡಿಯಾದವ್ರು ಬರ್ತಾರೆ ಅಂದಿದ್ದೆಯಲ್ಲ. ಎಷ್ಟೊತ್ತಿಗೆ ಬರೋದು?”
“ಈಗಾಗಲೇ ಬರಬೇಕಿತ್ತು…ಒಂಭತ್ತುವರೆ ಆಯ್ತು” 

ಅವಳು ಅಡುಗೆಮನೆಯತ್ತ ಓಡುವ ಹೊತ್ತಿಗೆ ನಾಯಿ ಬೊಗಳ ತೊಡಗಿತು. ಗೇಟಲ್ಲಿ ಯಾರೋ ಬಂದಿರಬೇಕು.

“ಯಾರು ನೀವು? ಏನು ಬೇಕಿತ್ತು?”

“ಗುಡ್ ಮಾರ್ನಿಂಗ್…ಸರ್. ನಾನು ಕನ್ನಡ ಪತ್ರಿಕೆ ಜರ್ನಲಿಸ್ಟ್ ಮುಕುಂದ. ಮೇಡಮ್…ಇಂಟರ್ ವ್ಯೂ ಕೊಡ್ತೀನಿ. ಬಾ ಅಂದಿದ್ರು”

“ಏನಪ್ಪ…ನೀವುಗಳು ಯಂಗ್ ಇದ್ದೀರ! ಟೈಮ್ ಸೆನ್ಸ್ ಇಲ್ವಾ? ನಾನು ನೋಡು ಈ ವಯಸ್ಸಲ್ಲೂ ಒಂದೊಂದು ನಿಮಿಷ ವೇಸ್ಟ್ ಮಾಡದೆ ಡಾಲರ್ ಲೆಕ್ಕ ಹಾಕ್ತಿದ್ದೀನಿ. ಈ ದೇಶ ಉದ್ಧಾರ ಆಗಬೇಕು ಅಂದ್ರೆ ನೀವೆಲ್ಲ ವಾರಕ್ಕೆ 70 ಗಂಟೆ…ದಿನಕ್ಕೆ 12 ಗಂಟೆ ದುಡಿಯಬೇಕು. ನಮ್ಮ ಪಿಎಮ್ ನಮೋನೇ ನೋಡು…ಪಾಪ…ದೇಶದ ಬಗ್ಗೆ ಚಿಂತಿಸುತ್ತ, ಎಲೆಕ್ಷನ್ ಗಳಲ್ಲಿ ಸ್ಪೀಚ್ ಮಾಡ್ತ, ಫಾರಿನ್ ಟೂರ್ ಅಂತ ತಿರುಗಾಡ್ತ, ಸಿಕ್ಕ ಸಿಕ್ಕ ಕಡೇಲೆಲ್ಲಾ ಇನಾಗರೇಷನ್ ಮಾಡ್ತಾ…ದಿನಕ್ಕೆ 18 ಗಂಟೆ ಬೆವರು ಸುರಿಸಿ ಎಷ್ಟು ಕಷ್ಟ ಪಟ್ಟು ವಿಲವಿಲಾಂತ ಒದ್ದಾಡ್ತಿದ್ದಾರೆ. ನಾವು ಅವರಂತೆ ಆಗಬೇಕಲ್ವ?….”

ಒಂದೇ ಸಮನೆ, ಸಮಯ ಅಂದರೆ ದುಡ್ಡು ಎಂದು ಯದ್ವಾತದ್ವಾ ಬೋಧಿಸುತ್ತಿದ್ದ ನಾಕ್ ಮೂರ್ತಿಯ ಮಾತುಗಳು ವ್ಯಾಕ್ ಕೊರೆತಗಳಾಗಿ, ಬೆಳಗ್ಗೆ ಎದ್ದು ಯಾವ ಗೂಬೆ ಮುಖ ನೋಡಿದೆ ಎಂದು ಪತ್ರಕರ್ತ ಗೇಟಾಚೆಯೇ ನಿಂತು ಚಡಪಡಿಸಿದ. ತಟ್ಟನೆ ಹೊಳೆದು….

“ಸರ್…ಒಂದ್ನಿಮಿಷ…ಮೊಬೈಲ್ ಕಾಲ್…ಎಡಿಟರ್ ಕಾಲ್ ಮಾಡ್ತಿದ್ದಾರೆ” ಎಂದು ಬೂಸಿ ಬಿಟ್ಟು, ಕರೆ ಮಾಡುವ ನಾಟಕವಾಡಿ ಉಸ್ಸಪ್ಪ ಎಂದು ಉಸಿರು ಬಿಟ್ಟು ಸುಧಾರಿಸಿಕೊಂಡು, “ಸರ್…ಸಾರಿ…ನಂಗೆ ಬೇರೆ ಯಾವುದೋ ಪ್ರೊಗ್ರಾಮ್ ಕವರ್ ಮಾಡೋಕೆ ಎಡಿಟರ್ ಹೇಳ್ತಿದ್ದಾರೆ. ಇನ್ನೊಮ್ಮೆ ಬಂದು ಮೇಡಮ್ ಇಂಟರ್ ವ್ಯೂ ಮಾಡ್ತೀನಿ” ಎಂದು ಅಲ್ಲಿಂದ ಕಳಚಿಕೊಳ್ಳೋ ಹೊತ್ತಿಗೆ ಸರಿಯಾಗಿ….

“ನಾನ್ ನೋಡ್ದೆ…ನಾನ್ ಕೇಳ್ದೆ…ನಾನ್ ಬಂದೇ…” ಎಂದು ಕೂಗುತ್ತ ಸ್ಲೊ ಮೋಶನ್ ನಲ್ಲಿ ಬಂದ ಸರಳಾಮೂರ್ತಿ “ಏನೂಂದ್ರೆ…ಅವ್ರು ಮುಕುಂದ…ನಮ್ಮವರೇ…ಒಳಗೆ ಕರೀರಿ” ಅಂದಳು.

ತಿರುಚಿದ ಮೂತಿಯ ನಾಕ್ ಮೂರ್ತಿ ಒಲ್ಲದ ಮನಸ್ಸಿಂದ ಪತ್ರಕರ್ತನನ್ನು ಒಳ ಬರಮಾಡಿಕೊಂಡ.
ಮತ್ತೆ ಸೀರೆ ಬದಲಿಸಿ ಖಾದಿ ಸೀರೆ ತೊಟ್ಟು ಬಂದ ಸರಳಾಮೂರ್ತಿ ಸಂದರ್ಶನಕ್ಕೆ ಸಿಂಪಲ್ ನಗೆ ಬೀರುತ್ತ ಕೂತರು. ಪುಳೀವಗರೆ ತಿಂದು ಕಾಫಿ ಹೀರಿದ ಪತ್ರಕರ್ತ ನೋಟ್ ಬುಕ್ಕನ್ನು ಕೈಲಿ ಹಿಡಿದು ಪ್ರಶ್ನಾವಳಿ ಆರಂಭಿಸಿದ.

“ಮೇಡಮ್…ನೀವು ಅಷ್ಟು ದೊಡ್ಡ ಪ್ರತಿಷ್ಠಿತ ಕಂಪನಿಯ ಮಾಲೀಕರು. ಆದ್ರೂ ನೀವು ಬಹಳ ಸಿಂಪಲ್. ಈ ಸಿಂಪ್ಲಿಸಿಟಿಯನ್ನು ನೀವು ಎಂದಿನಿಂದ ಪಾಲಿಸುತ್ತಿದ್ದೀರ?”

“ಐ ಆಮ್ ಸಿಂಪ್ಲಿ ಬಾರ್ನ್ …ಹುಟ್ಟಿದಂದಿನಿಂದ ನಾನು ಸಿಂಪಲ್…ಅದಕ್ಕೆ ನನಗೆ ಸರಳಾ ಎಂದು ಹೆಸರು ಇಟ್ಟಿದ್ದಾರೆ. ನಾನು ಕುಂತ್ರೆ…ಎದ್ರೆ ಸಿಂಪಲ್…ನಡಿಯೋದು…ಓಡಾಡೋದು ಸಿಂಪಲ್…ತಿನ್ನೋದು…ಉಡೋದು ಎಲ್ಲಾ ಸಿಂಪಲ್ಲೇ…ಸಿಂಪ್ಲಿಸಿಟಿ ನನ್ನ ಉಸಿರು…ನಮ್ ಮನೆ ನೋಡಿ…ಎಷ್ಟು ಸಿಂಪಲ್ಲಾಗಿದೆ”

ವಿಶಾಲ ಮನೆಯ ಒಳಾಂಗಣದ ಸುತ್ತ ಕಣ್ಣಾಡಿಸಿದ ಪತ್ರಕರ್ತ, ನಿಟ್ಟುರಿಸಿಟ್ಟು…
“ದಟ್ಸ್ ವಂಡರ್ ಪುಲ್ ಮೇಡಮ್…ನಮ್ಮ ವಾಚಕರ ಮಾಹಿತಿಗಾಗಿ ಒಂದು ಸಿಂಪಲ್ ಕ್ವಸ್ಚೆನ್…ನಿಮ್ಮ ಸಿಂಪ್ಲಿಸಿಟಿ ಆಚರಣೆ ಬಗ್ಗೆ ಒಂದಷ್ಟು ಹೇಳಬಹುದೇ?”
“ಬೇಕಾದಷ್ಟು ಹೇಳಬಹುದು. ಫಾರ್ ಎಕ್ಸಾಂಪಲ್…ನಾನು ಎಲ್ಲಿಗೆ ಹೋಗಲಿ ತಿನ್ನೋದಕ್ಕೆ ಮನೆಯಿಂದಲೇ ಸ್ಪೂನ್ ತಗೊಂಡು ಹೋಗ್ತೀನಿ…”
“ಓಹ್…ಬರೀ ಚಮಚನಾ? ತಟ್ಟೆ ಲೋಟ…”
“ನೋಡಿ…ತಟ್ಟೆ ಲೋಟ ತಗೊಂಡೊಗಲ್ಲ. ನೆಸೆಸಿಟಿ ಇಲ್ಲ. ಯಾಕೆಂದ್ರೆ ತಿನ್ನೋದಕ್ಕೆ ಸ್ಪೂನ್ ಇದ್ರೆ ಸಾಕು. ಹೊರಗಡೆ ಯಾರ್ಯಾರೊ ತಿಂದ ಸ್ಪೂನಲ್ಲಿ ನಾನು ತಿನ್ನೋದಿಲ್ಲ”
“ಹಂಗೆ…ಸರಿ. ನೀವು ತರಕಾರಿ, ಹಣ್ಣು ಖರೀದಿ ಮಾಡುವಾಗ ಚೌಕಾಶಿ ಮಾಡೋಲ್ಲ ಅಂತ ಕೇಳಿದ್ದೆ!!”
“ಹೌದು…ನೋಡಿ…ಅಲ್ಲೇ ಸಿಂಪ್ಲಿಸಿಟಿ ಇರೋದು. ತರಕಾರಿ, ಹಣ್ಣು ಮಾರೋರು ಮಳೆಬಿಸಿಲಲ್ಲಿ ಪುಟ್ ಪಾತಲ್ಲಿ ಕೂತು ಬಿಜಿಸೆನ್ ಮಾಡ್ತಾರೆ…ಪಾಪ…ಅವರತ್ರನೂ ಬಾರ್ಗೈನ್ ಮಾಡೋದು ಮೊರಾಲಿಟಿ ಅಲ್ಲ…ಅಲ್ವಾ?”

ಕ್ಯಾಮೆರಾ ಹಿಂದೆ ಕೂತು ಸಂದರ್ಶನವನ್ನು ಗಮನಿಸುತ್ತಿದ್ದ ನಾಕ್ ಮೂರ್ತಿ “ಎಕ್ಸ್ ಕ್ಯೂಸ್ ಮಿ. ಸರಳ… ಅವರಿಗೆ ಲೈವ್ ಡೆಮಾನ್ ಟ್ರೆಷನ್ ಯಾಕೆ ಕೊಡಬಾರದು? ಮಿಸ್ಟರ್ ಮುಕುಂದ್…ನಾಳೆ ಬೆಳಿಗ್ಗೆ ತಡ ಮಾಡ್ದೆ ಎಂಟು ಗಂಟೆಗೆ ಬನ್ನಿ. ತರಕಾರಿ ಮಾದಮ್ಮ ಅಷ್ಟೊತ್ತಿಗೆ ಬರೋದು. ನಿಮ್ಮ ಕಣ್ಣಲ್ಲೇ ಸಿಂಪ್ಲಿಸಿಟಿನಾ ನೋಡಬಹುದು. ಆಗ ಸಿಂಪ್ಲಿಸಿಟಿಗೆ ಒಂದು ಅಥೆಂಟಿಸಿಟಿ ಇರ್ತದೆ”

ಮಾರನೇ ದಿನ ಭೀಮನ ಅಮಾವಾಸ್ಯೆ. ಸೂರ್ಯ ಕಣ್ಣು ಬಿಡುವ ಮುನ್ನವೇ ಎದ್ದ ಸರಳಮೂರ್ತಿ, ಬೆಳಗಿನ ಕೆಲಸಗಳನ್ನು ಮುಗಿಸಿ ದೇವರಿಗೆ ಕೈ ಮುಗಿದು, ಗೊರಕೆ ಹೊಡೆಯುತ್ತಲೇ ʼಡಾಲರ್…ಡಾಲರ್ʼ ಎಂದು ಕನವರಿಸುತ್ತಿದ್ದ ನಾಕ್ ಮೂರ್ತಿಯನ್ನು ಎಬ್ಬಿಸಿದಳು.  

“ಏನೂಂದ್ರೆ…ಏಳಿ. ಬೇಗ ಎದ್ದು ಸ್ನಾನ ಮಾಡಿ ರೆಡಿಯಾಗಿ. ಇವತ್ತು ಗಂಡನ ಹಬ್ಬ. ನಿಮ್ಮ ಮುಖಕ್ಕೆ  ಮಂಗಳಾರತಿ ಎತ್ತಿ, ಪಾದಪೂಜೆ ಮಾಡ್ಬೇಕು”
“ಓ…ನೊ…ಐ ವಾಂಟ್ ಟು ಸ್ಲೀಪ್ ಲಿಟಲ್ ಮೋರ್…ರಗ್ಗನ್ನು ಸರಿಸಿ ಹಾಗೆ ಪಾದಪೂಜೆ ಮಾಡಬಾರದೇ?”
“ಅಯ್ಯೊಯ್ಯೋ…ದೇವ್ರೇ…ದೇವ್ರೆ…ಹಬ್ಬದ ದಿನ ಏನೂಂದ್ರೆ…ಅಪಶಕುನ ಮಾತಾಡ್ತಿದ್ದೀರ? ಮಲಗಿದ್ದಾಗ ಕಾಲಿಗೆ ಬೀಳುವುದಾ? ಶಾಂತಮ್ ಪಾಪಮ್…ಮೊದಲು ಎದ್ದೇಳಿ” ಎಂದು ಕೆನ್ನೆ ಕೆನ್ನೆ ಬಡಿದುಕೊಂಡು, ತಾಳಿಸರವನ್ನು ಕಣ್ಣಿಗೆ ಒತ್ತಿಕೊಂಡಳು.

ಟಿಕ್ ಟಾಕಾಗಿ ಕುರ್ಚಿಯಲ್ಲಿ ಸ್ಟಾಚುನಂತೆ ಕೂತ ನಾಕ್ ಮೂರ್ತಿಯ ಪಾದವನ್ನು ಚಿನ್ನದ ಚೊಂಬಿದ ನೀರು ಹನಿಸಿ ತೊಳೆದು, ಅರಿಶಿನ ಕುಂಕುಮ ಹಚ್ಚಿ, ಆರತಿ ಎತ್ತಿ, ಸಾಷ್ಟಾಂಗ ಬಿದ್ದು ಸರಳಾ ನಮಸ್ಕರಿಸಿದಳು. ನಾಕ್ ಮೂರ್ತಿ ತಲೆಯ ಮೇಲೆ ಕೈಯಿಟ್ಟು ʼತಥಾಸ್ತುʼ ಎಂದು ಮರು ವಂದಿಸಿದ.

ಅಷ್ಟೊತ್ತಿಗೆ ಹೊರಗಡೆ “ತರಕಾರಿ…ತರಕಾರಿ” ಎಂದು ಕೂಗುವುದು ಕೇಳಿಸಿತು. “ಈ ಅನ್ ಡಿಸಿಪ್ಲಿನ್ ಮುಕುಂದ್…ಇನ್ನೂ ಬಂದಿಲ್ಲ” ಎಂದು ನಾಕ್ ಮೂರ್ತಿ ಗೊಣಗಿ, ಮೂತಿ ಸೊಟ್ಟ ಮಾಡಿಕೊಂಡ.

“ಸರಳಾ…ಒಂದ್ ಕೆಲಸ ಮಾಡು. ಮುಕುಂದ್ ಬರೋವರ್ಗು ನೀನು…ಮಾದಮ್ಮ…ರಿಹರ್ಸಲ್ ಮಾಡ್ತೀರಿ. ಅಷ್ಟರಲ್ಲಿ ಅವನಿಗೆ ಬೇಗ ಬರೋದಿಕ್ಕೆ ಫೋನ್ ಮಾಡ್ತೀನಿ”

ಸರಳಮೂರ್ತಿ ಹೂ ನಗೆ ಚೆಲ್ಲುತ್ತ ವೈರ್ ಬುಟ್ಟಿ ಕೈಲಿಡಿದು ಹೊರಬಂದು ಗಕ್ಕನೆ ನಿಂತಳು. ತರಕಾರಿ ಮಕ್ಕರಿ ಕೆಳಗಿಳಿಸಿ ಗೇಟಲ್ಲಿ ಕೂತ ಮಾದಮ್ಮನ ಹಿಂದೆ, ಕಾರಲ್ಲಿ ಬಂದ ಒಂದಷ್ಟು ಜನ ಕೈಲಿಗಳಲ್ಲಿ ಫೈಲ್ ಗಳನ್ನು ಹಿಡಿದು ನಿಂತಿದ್ದರು. ಸರ್ಕಾರಿ ಅಧಿಕಾರಿಗಳಂತೆ ಕಂಡ ಅವರನ್ನು ನೋಡಿ “ಇದ್ಯಾರಪ್ಪ…ಬೆಳಬೆಳಗ್ಗೆನೇ ವಕ್ಕರಿಸಿಕೊಂಡವ್ರೇ…ಇನ್ ಕಮ್ ಟ್ಯಾಕ್ಸ್ ನವ್ರಾ…ಪಕ್ಕದ ಕಾಂಗೀ ಎಮ್ ಪಿ ಬಂಗಲೆಗೆ ಹೋಗೊ ಬದಲಿಗೆ ಇಲ್ಲಿಗ್ಯಾಕೆ ಬಂದ್ರು?” ಎಂದು ಕೊಂಡುವಳ್ಳುವಾಗ, ಅವರಲ್ಲಿ ಒಬ್ಬಾತ “ಗುಡ್ ಮಾರ್ನಿಂಗ್…ಮೇಡಮ್. ನಾವು ಸೊಷಿಯೊ ಎಜುಕೇಷನಲ್ ಸರ್ವೆ ಮಾಡೋಕೆ ಬಂದಿದ್ದೀವಿ. ಒಂದ್ ಟೆನ್ ಮಿನಿಟ್ಸ್ ಟೈಮ್ ಕೊಡ್ತೀರ?” ಅಂದದ್ದೇ ಮಲ್ಲಿಗೆ ನಗೆ ಕೆಳಗೆ ಉದುರಿ ಮುಖ ಮುದುಡಿದ ತಾವರೆಯಾಯಿತು.

ಕೈಲಿ ದಿನಪತ್ರಿಕೆ ಹಿಡಿದು ಬಂದ ನಾಕ್ ಮೂರ್ತಿ “ಯಾರು ನೀವು? ಸಿಂಪಲ್ಲಾಗಿ ಹೇಳೋದಾದ್ರೆ ನಾವು ತುಂಬಾ ಪ್ರಾಮ್ಟ್…ನಮ್ಮಂತವರು ನಿಯತ್ತಾಗಿ ಟ್ಯಾಕ್ಸ್ ಕಟ್ತಾ ಇರೋದಿಕ್ಕೆ ಈ ದೇಶ ಉಳಿದಿರೋದು. ನೋಟಿಸ್ ಕೊಡ್ದೆ ಹೇಗೆ ಬಂದ್ರಿ?” ಎಂದು ಬಡಬಡಿಸುತ್ತಿದ್ದಾಗ, ಅವನ ರಟ್ಟೆ ಎಳೆದು ಸರಳಮೂರ್ತಿ ಕಿವಿಯಲ್ಲಿ ಏನನ್ನೋ ಊದಿದಳು.
“ಓಹ್…ಬಿಟ್ಟಿ ಭಾಗ್ಯದವರ…” ಎಂದು ಪಿಸು ನುಡಿದು “ನೋಡಿ…ನೀವ್ ಪುಕ್ಕಟ್ ಅಂತ ಕೊಟ್ಟೊ 200 ಯೂನಿಟ್ ಕರೆಂಟ್ ನಮ್ಮನೆ ಒಂದು ಎಸಿಗೂ ಸಾಕಾಗಲ್ಲ…ನಮಗೆ ಯಾವ ಸರ್ವೆಲೂ ಇಂಟರೆಸ್ಟಿಲ್ಲ…ಇಷ್ಟಕ್ಕೂ ಯಾರ್ಯಾರೊ ಜನಗಳನ್ನ ಮನೆ ಒಳಗೆ ಬಿಟ್ಕೊಳ್ಳೊದಿಲ್ಲ…” ಎಂದು ನ್ಯಾಕ್ ಮೂರ್ತಿ ಹೇಳುವ ಮಾತಿನಾರ್ಥ ಗ್ರಹಿಸಿದ ಅಧಿಕಾರಿ “ಸಾರ್…ಕ್ಷಮಿಸಿ. ನಾವು ಯಾರ್ಯಾರೊ ಅಲ್ಲ. ನಾವು ಗೌರ್ನಮೆಂಟಲ್ಲಿ ಎ ಗ್ರೇಡ್ ಆಫೀಸರ್ಸ್…ನೀವು ವಿವಿಐಪಿ ಕ್ಯಾಟೊಗರಿಲಿ ಬರ್ತೀರ ಅಂತ ಸರ್ವೆಗೆ ನಮ್ಮನ್ನ ನೇಮಕ ಮಾಡಿದ್ದಾರೆ…ನಾವು ಒಳಗೆ ಬರೋದಿಲ್ಲ. ಇಲ್ಲೇ ವಿವರ ಕೊಟ್ರೆ ಆಯ್ತು. ತಾವು ಸಹಕರಿಸಬೇಕು” ಎಂದ. ಸಿಂಪಲ್ ದಂಪತಿಗಳಿಗೆ ಗಂಟಲೊಳಗೆ ಕಡಬು ಸಿಕ್ಕಿ ಬಿದ್ದಂತಾಯಿತು.

ಇಸ್ತ್ರೀ ಇರದ ಚೂಡಿದಾರ ತೊಟ್ಟಿದ್ದ ಹೆಣ್ಣುಮಗಳೊಬ್ಬಳು ಮೊಬೈಲ್ ಹಿಡಿದು ವಿವರ ಪಡೆಯಲು ಮುಂದೆ ಬಂದಳು. ಅವಳನ್ನು ನೋಡಿದ್ದೇ ತರಕಾರಿ ಮಾದಮ್ಮ “ನಮಸ್ಕಾರ ಮೇಡಮ್…ಚೆಂದಾಗಿದ್ದೀರ” ಎಂದು ನಮಸ್ಕರಿಸಿದಳು.

“ಅಮ್ಮಾವ್ರೇ…ಈ ಮೇಡಮ್ ನಮ್ ಊರಿನವರೆ…ಹೈಸ್ಕೂಲ್ ಟೀಚರ್ರು…ನಮ್ ಮನೆಗೂ ಬಂದಿದ್ರು. ಬಾಳ ಒಳ್ಳೇವ್ರು…ನನ್ ಮಗನ ಸ್ಕೂಲ್…ಮಗಳು ಕಂಪ್ಯೂಟರ್ ಇಂಜಿನಿಯರ್ ಓದ್ತಿರೋದು…ಹಿಂದುಳಿದ ಜಾತಿ ಸ್ಕಾಲರ್ ಶಿಪ್…ಬ್ಯಾಂಕ್ ಸಾಲ…ಎಲ್ಲಾ ಬರ್ಕೊಂಡು ಹೋದ್ರು…ಹ…ರೆಪ್ರಿಜಿರೇಟರ್…ಕಾರು…ಸ್ವಂತ ಮನೆ ಅಂತೆಲ್ಲಾ ಕೇಳಿದ್ರು…ನಮ್ಗೆ ಅದೆಲ್ಲಿಂದ ಬರ್ಬೇಕು…ಟೀವಿ ಐತೆ ಅಂತ ಹೇಳ್ದೆ…”

ಒಂದೇ ಸಮನೆ ಮಾತಾಡುತ್ತಿದ್ದ ಮಾದಮ್ಮನಿಗೆ ಕೈ ಸನ್ನೆ ಮಾಡಿದ ಸರಳಾಮೂರ್ತಿ “ನಾವು ಹಿಂದುಳಿದ ಜಾತಿಗೆ ಸೇರಿಲ್ಲ. ನಮ್ಮದು ಮಾನವ ಜನಾಂಗದಲ್ಲೇ ಶ್ರೇಷ್ಠ ಸನಾತನ ಹಿಂದುಧರ್ಮ…ಟು ಬಿ ಮೊರ್ ಸ್ಪೆಸಿಫಿಕ್ ಬ್ರಾಹ್ಮಣರು” ಎನ್ನುವಾಗ ನ್ಯಾಕ್ ಮೂರ್ತಿ ಮುಂದುವರೆಸಿದ “ಡಾಲರ್ ಕೌಂಟು ಮಾಡೋ ಹೊತ್ತಲ್ಲಿ ಇದೆಲ್ಲಾ ವೇಸ್ಟ್ ಆಫ್ ಟೈಮ್ ಅಂಡ್ ರಿಸೋಸರ್ಸ್…ಜಾತಿ ಏಲ್ಲಿದೆ? ಒಟ್ಟಿಗೆ ಎಲ್ರೂ ಬಸ್ನಲ್ಲಿ…ಟ್ರೈನಲ್ಲಿ ಹೋಗ್ತಾರೆ. ಹೋಟೆಲ್ಲಿನಲ್ಲಿ ತಿಂತಾರೆ. ಸೇರಿ ಸಿನಿಮಾ ನೋಡ್ತಾರೆ…ರೆಡಿಕುಲಸ್” ಎಂದು ಮತ್ತೆ ನೆಟ್ಟಗಿದ್ದ ಮೂತಿಯನ್ನು ಸೊಟ್ಟ ಮಾಡಿದ.

ಬೇಸತ್ತ ಅಧಿಕಾರಿ “ ಸಾರ್…ವೈಯಕ್ತಿಕ ಕಾರಣದಿಂದ ಸರ್ವೆ ತಗೊಳ್ಳಲ್ಲ ಅಂದ್ರೆ ಅದಕ್ಕೂ ಅಪ್ಷನ್ ಇದೆ. ಈ ಫರಮ್ ನಲ್ಲಿ ಸಹಿ ಹಾಕಿ ಕೊಡಿ” ಎಂದು ಅರ್ಜಿಯನ್ನು ಮುಂದೆ ಮಾಡಿದ. ನ್ಯಾಕ್ ಮೂರ್ತಿ ಅದನ್ನು ಕಸಿದುಕೊಂಡು “ನಾವು ಹಿಂದುಳಿದ ಯಾವ ಜಾತಿಗೂ ಸೇರುವರಲ್ಲ. ಅದರಿಂದ…ಈ ಸಮೀಕ್ಷೆ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಇದರಲ್ಲಿ ಭಾಗವಹಿಸುವುದಿಲ್ಲ” ಎಂದು ಗೀಚಿ, ಸಿಂಪಲ್ ದಂಪತಿಗಳು ಸಹಿ ಮಾಡಿ ವಾಪಸ್ಸು ಕೊಟ್ಟರು.

ಮಾದಮ್ಮನಿಂದ ಚೌಕಾಶಿ ಮಾಡದೆ ತರಕಾರಿಯನ್ನು ಕೊಂಡು ಸರಳಾಮೂರ್ತಿ ಒಳ ನಡೆದಾಗ “ಅಮ್ಮಾವ್ರೇ…ನನ್ ಮಗಳು ಇಂಜಿನಿಯರ್ ಒದ್ತಾಳ್ವೆ. ಮುಂದೆ ನಿಮ್ಮಂಗೆ ದೊಡ್ಡ ಕಂಪ್ಯೂಟರ್ ಕಂಪನಿಗೆ ಯಾಜಮಾನ್ತಿ ಆಗಬಹುದಲ್ವ?” ಎನ್ನುವಾಗ ಅವಳ ಕಣ್ಣುಗಳು ಹೊಳೆಯುತ್ತಿದ್ದವು.

ಹಿಂತಿರುಗಿ ನೋಡಿದ ಸರಳಾಮೂರ್ತಿ “ಹು…ಆಗಬಹುದು. ಆದರೆ ಅದರ ಅವಶ್ಯಕತೆ ಏನಿದೆ? ತರಕಾರಿ ವ್ಯಾಪಾರದಲ್ಲಿ ಒಳ್ಳೇ ಲಾಭ ಇದೆಯಲ್ಲ? ನಾನು ಕೂಡ ಚೌಕಾಶಿ ಮಾಡ್ದೆ ತಗೊತ್ತಿದ್ದೀನಿ!” ಅಂದಳು.

ಅದಾಗಲೇ ಬಂದು ಎಲ್ಲವನ್ನೂ ನೋಡುತ್ತಿದ್ದ ಪತ್ರಕರ್ತ “ಶ್ರೀಮಂತಿಕೆಯನ್ನು ಸರಳತೆಯಲ್ಲಿ ಮುಚ್ಚಿಡಬಹುದು. ಜಾತಿ ಶ್ರೇಷ್ಠತೆಯನ್ನು ಮುಚ್ಚಿಡಲು ಸಾಧ್ಯವೇ? ಸಿಂಪ್ಲಿ ಹಾರಿಬಲ್ ಸರಳಾ ನಾಣಿ ಕಪಲ್” ಎಂದು ಉದ್ಘರಿಸಿದ.

You cannot copy content of this page

Exit mobile version