ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು ರಷ್ಯಾದಿಂದ ಅಡ್ಡದಾರಿಯಲ್ಲಿ ತೈಲ ಆಮದು ಮಾಡಿಕೊಳ್ಳಲು ಮೋದಿ ಸರ್ಕಾರ ಸಹಕರಿಸುತ್ತಿದೆ. ಆದರೆ, ಅದೇ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳ ಮೇಲೆ ಮಾತ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿದೆ.
ಯುಎಸ್ ನಿರ್ಬಂಧಗಳ ಕಾರಣದಿಂದಾಗಿ ಸ್ವಲ್ಪ ಕಾಲ ರಷ್ಯಾ ತೈಲ ಖರೀದಿಯನ್ನು ಸ್ಥಗಿತಗೊಳಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್, ಇತ್ತೀಚೆಗೆ ಮತ್ತೆ ಆಮದನ್ನು ಪ್ರಾರಂಭಿಸಿದೆ ಎಂದು ಬ್ಲೂಮ್‌ಬರ್ಗ್ ಸಂಚಲನ ಮೂಡಿಸುವ ವರದಿಯನ್ನು ಪ್ರಕಟಿಸಿದೆ. ರಷ್ಯಾದ ಕಚ್ಚಾ ತೈಲದಿಂದ ತುಂಬಿರುವ ಕನಿಷ್ಠ ಮೂರು ಬೃಹತ್ ನೌಕೆಗಳು ಪ್ರಸ್ತುತ ಗುಜರಾತ್ ಕರಾವಳಿಯ ರಿಲಯನ್ಸ್ ರಿಫೈನರಿ (ತೈಲ ಶುದ್ಧೀಕರಣ ಕೇಂದ್ರ) ಕಡೆಗೆ ಬರುತ್ತಿವೆ ಎಂದು ಅದು ವರದಿ ಮಾಡಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ರಷ್ಯಾದ ‘ಯೂರಿಲ್ಸ್’ ತಳಿಯ ಸುಮಾರು 22 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಹೊತ್ತ ವಿವಿಧ ನೌಕೆಗಳು ಭಾರತೀಯ ಕರಾವಳಿಯನ್ನು ತಲುಪುತ್ತಿವೆ. ‘ಕೆಪ್ಲರ್’ ಎಂಬ ಡೇಟಾ ಸಂಸ್ಥೆಯ ಮಾಹಿತಿಯಂತೆ, ಈ ತೈಲವು ಜನವರಿ ಮೊದಲ ವಾರದಲ್ಲೇ ಜಾಮ್‌ನಗರ ರಿಫೈನರಿಯನ್ನು ತಲುಪಬೇಕಿದೆ.
ಈ ತೈಲವನ್ನು ವಿದೇಶಗಳಿಗೆ ರಫ್ತು ಮಾಡಲು ಬಳಸದೆ, ಭಾರತದ ಅಗತ್ಯಗಳಿಗಾಗಿ ಇಂಧನವಾಗಿ ಪರಿವರ್ತಿಸಲು ರಿಲಯನ್ಸ್ ಬಳಸಲು ಯೋಜಿಸಿದೆ. ಈ ಹಿಂದೆ ರಷ್ಯಾದಿಂದ ರಿಲಯನ್ಸ್‌ಗೆ ಅತಿ ಹೆಚ್ಚು ತೈಲ ಪೂರೈಸುತ್ತಿದ್ದ ‘ರೋಸ್‌ನೆಫ್ಟ್’ ಮತ್ತು ‘ಲುಕೋಯಿಲ್’ ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಇದರಿಂದಾಗಿ ರಿಲಯನ್ಸ್ ಆ ದೇಶದಿಂದ ಖರೀದಿ ನಿಲ್ಲಿಸಿತ್ತು. ಆದರೆ ಈಗ ಇತರ ಮಧ್ಯವರ್ತಿಗಳ ಮೂಲಕ ರಿಲಯನ್ಸ್ ತೈಲವನ್ನು ಸಂಗ್ರಹಿಸಿ, ಅಡ್ಡದಾರಿಯಲ್ಲಿ ಭಾರತಕ್ಕೆ ತರುತ್ತಿದೆ.
ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50 ರಷ್ಟು ಟಾರಿಫ್‌ಗಳನ್ನು (ಸುಂಕ) ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ ರಿಲಯನ್ಸ್ ಈ ಖರೀದಿ ಮಾಡಿರುವುದು ಗಮನಾರ್ಹ. ರಷ್ಯಾದ ಹಲವು ಕಂಪನಿಗಳ ಮೇಲೆ ಯುಎಸ್ ನಿರ್ಬಂಧ ಇರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ರಷ್ಯಾದಿಂದ ಆಮದನ್ನು ಬಹುತೇಕ ನಿಲ್ಲಿಸಿವೆ.
ಇನ್ನೊಂದೆಡೆ ರಿಲಯನ್ಸ್‌ಗೆ ಭಾರಿ ಲಾಭ ಮಾಡಿಕೊಡಲು ಅಕ್ರಮ ಹಾದಿಯಲ್ಲಿ ಅನುಮತಿಗಳನ್ನು ನೀಡುವ ಮೂಲಕ ಮೋದಿ ಸರ್ಕಾರದ ನಡೆಯು ‘ಮುಖೇಶ್ ಕಾ ಸಾಥ್, ರಿಲಯನ್ಸ್ ಕಾ ವಿಕಾಸ್’ ಎಂಬಂತಿದೆ ಎಂದು ತಜ್ಞರು ಟೀಕಿಸುತ್ತಿದ್ದಾರೆ.
ಪ್ರಸ್ತುತ ರಿಲಯನ್ಸ್‌ಗೆ ಅಲ್ಘಾಫ್ ಮೆರೈನ್ ಮತ್ತು ರೆಡ್‌ವುಡ್ ಗ್ಲೋಬಲ್‌ನಂತಹ ಸಂಸ್ಥೆಗಳು ತೈಲ ಸಂಗ್ರಹವನ್ನು ಪೂರೈಸುತ್ತಿವೆ ಎಂದು ಬ್ಲೂಮ್‌ಬರ್ಗ್ ವರದಿ ಸ್ಪಷ್ಟಪಡಿಸಿದೆ. ಆದರೆ, “ಈ ವಾರ್ತೆಯಲ್ಲಿ ಸತ್ಯವಿಲ್ಲ, ನಾವು ಜನವರಿಯಲ್ಲಿ ರಷ್ಯಾದಿಂದ ಯಾವುದೇ ತೈಲವನ್ನು ಆಮದು ಮಾಡಿಕೊಂಡಿಲ್ಲ” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟಪಡಿಸಿದೆ.
ವಿಶ್ವದ ಅತಿದೊಡ್ಡ ತೈಲ ಶುದ್ಧೀಕರಣ ಕೇಂದ್ರಗಳಲ್ಲಿ ಜಾಮ್‌ನಗರ ರಿಫೈನರಿ ಕೂಡ ಒಂದು. ಭಾರತದ ಇಂಧನ ಪೂರೈಕೆ ಮತ್ತು ರಫ್ತಿನಲ್ಲಿ ಈ ರಿಫೈನರಿ ಪ್ರಮುಖ ಪಾತ್ರ ಹೊಂದಿದೆ. ಡಿಸೆಂಬರ್‌ನಲ್ಲಿ ಜಾಮ್‌ನಗರ ರಿಫೈನರಿ ಸಂಕೀರ್ಣಕ್ಕೆ ರಷ್ಯಾದಿಂದ ದಿನಕ್ಕೆ 2.70 ಲಕ್ಷ ಬ್ಯಾರೆಲ್ಸ್ ತೈಲ ಆಮದಾಗಿತ್ತು, ಇದು ಆ ಸಂಸ್ಥೆಯ ಒಟ್ಟು ಆಮದಿನ ಶೇ. 20 ರಷ್ಟಾಗಿದೆ.
ನಿರ್ಬಂಧಗಳ ನಡುವೆಯೂ ರಿಲಯನ್ಸ್ ಅಡ್ಡದಾರಿಯಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ವರದಿಗಳಿಂದಾಗಿ ಮಂಗಳವಾರ ಆ ಕಂಪನಿಯ ಷೇರುಗಳು ಭಾರಿ ಕುಸಿತ ಕಂಡವು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ ರಿಲಯನ್ಸ್ ಷೇರು ಶೇ. 5 ರಷ್ಟು ಕುಸಿದು 1,497.05 ರೂಪಾಯಿಗೆ ತಲುಪಿತು. ಅಂತಿಮವಾಗಿ ಶೇ. 4.39 ರಷ್ಟು ಅಥವಾ 69.20 ರೂಪಾಯಿ ನಷ್ಟದೊಂದಿಗೆ 1508.90 ರೂಪಾಯಿಯಲ್ಲಿ ಅಂತ್ಯವಾಯಿತು.
ಒಂದು ಹಂತದಲ್ಲಿ ರಿಲಯನ್ಸ್ ಮಾರುಕಟ್ಟೆ ಬಂಡವಾಳವು (ಮಾರ್ಕೆಟ್ ಕ್ಯಾಪ್) 1 ಲಕ್ಷ ಕೋಟಿ ರೂಪಾಯಿಯಷ್ಟು ಕುಸಿದಿತ್ತು. ಅಂತಿಮವಾಗಿ 94,389 ಕೋಟಿ ರೂಪಾಯಿ ಮೌಲ್ಯ ಹರಿದುಹೋಗಿ 20.40 ಲಕ್ಷ ಕೋಟಿಗೆ ಸೀಮಿತವಾಯಿತು. ಕಳೆದ ಒಂಬತ್ತು ತಿಂಗಳಲ್ಲಿ ಇದು ಅತಿ ದೊಡ್ಡ ಕುಸಿತವಾಗಿದೆ.
